ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆಗೆ ಲಾಲು ಪ್ರಸಾದ್ ಯಾದವ್ ಬೆಂಬಲ: ಭಾಗವಹಿಸುತ್ತೇನೆ ಎಂದ ನಾಯಕ
ಪಾಟ್ನಾ, ಜುಲೈ. 06: ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ವಿರೋಧ ಪಕ್ಷಗಳು ಇದೇ ತಿಂಗಳ ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ಎರಡನೇ ಸುತ್ತಿನ ಸಭೆ ನಡೆಸಲಿವೆ. ವಿರೋಧ ಪಕ್ಷಗಳ ಬೃಹತ್ ಸಮಾವೇಶಕ್ಕಾಗಿ ಬೆಂಗಳೂರಿಗೆ ತೆರಳುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುರುವಾರ ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು ಪ್ರಸಾದ್ ಯಾದವ್ , 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಿಂದ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲು ವೇದಿಕೆ ಸಿದ್ಧಪಡಿಸಲು ಬೆಂಗಳೂರಿನಲ್ಲಿ ನಡೆಯಲಿರುವ ವಿಪಕ್ಷಗಳ ಸಮಾವೇಶಕ್ಕೆ ತೆರಳುವುದಾಗಿ ಹೇಳಿದ್ದಾರೆ.

"ರಕ್ತ ಪರೀಕ್ಷೆ ಸೇರಿದಂತೆ ನಿತ್ಯದ ವೈದ್ಯಕೀಯ ಪರೀಕ್ಷೆಗಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ, ನಂತರ ನಾನು ಮತ್ತೆ ಪಾಟ್ನಾಗೆ ಬರುತ್ತೇನೆ, ನಂತರ ವಿರೋಧ ಪಕ್ಷಗಳ ಸಭೆಗಾಗಿ ಬೆಂಗಳೂರಿಗೆ ಹೋಗುತ್ತೇನೆ. 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಿಂದ ನರೇಂದ್ರ ಮೋದಿ ಸರ್ಕಾರದ ಪದಚ್ಯುತಿಗೆ ವೇದಿಕೆ ಸಿದ್ಧಪಡಿಸುತ್ತೇನೆ" ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಎರಡನೇ ಸಭೆಯನ್ನು ಕರ್ನಾಟಕ ಮತ್ತು ಬಿಹಾರದಲ್ಲಿ ವಿಧಾನಸಭಾ ಅಧಿವೇಶನಗಳ ಕಾರಣ ಜುಲೈ 17 ಮತ್ತು 18 ಕ್ಕೆ ಮರು ನಿಗದಿಪಡಿಸಲಾಗಿದೆ. ಇದು ವಿಪಕ್ಷಗಳ ಎರಡನೇ ಸಭೆಯಾಗಿದ್ದು, ಮೊದಲ ಸಭೆ ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ನಡೆದಿತ್ತು.
ಜುಲೈ 17 ಮತ್ತು 18ಕ್ಕೂ ಮೊದಲು ಬೆಂಗಳೂರಿನಲ್ಲಿ ಜುಲೈ 13, 14ರಂದು ವಿರೋಧ ಪಕ್ಷಗಳ ಸಭೆ ನಿಗದಿಯಾಗಿತ್ತು. ಆರಂಭದಲ್ಲಿ ಇದನ್ನು ಜುಲೈ 12 ರ ಸುಮಾರಿಗೆ ಶಿಮ್ಲಾದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಕಾರಣ ಸಭೆ ಬೆಂಗಳೂರಿನಲ್ಲಿ ನಡೆಯುವುದಾಗಿ ನಿರ್ಧರಿಸಲಾಗಿತು. ಹೊಸ ದಿನಾಂಕ ಮತ್ತು ಸ್ಥಳವನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಘೋಷಿಸಿದ್ದಾರೆ.

ಕಳೆದ ಜೂನ್ 23ರಂದು ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಮೊದಲ ಸಭೆಯಲ್ಲಿ ಭಾಗವಹಿಸಿದ್ದ ಉಚ್ಛಾಟಿತ ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು ಅಜಿತ್ ಪವಾರ್ ಅವರೊಂದಿಗೆ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಜೊತೆ ಮೈತ್ರಿ ಮಾಡಿಕೊಂಡು, ನರೇಂದ್ರ ಮೋದಿ ಸರ್ಕಾರವನ್ನು ಮಣಿಸಲು ಯತ್ನಿಸುತ್ತಿರುವ ವಿಪಕ್ಷಗಳ ಏಕತೆಗೆ ಪೆಟ್ಟು ನೀಡಿದ್ದಾರೆ.












Click it and Unblock the Notifications