9 ಶಾಲೆ ಕಟ್ಟಿಸಿ ಇಡೀ ಹಳ್ಳಿಯ ಚಿತ್ರಣವನ್ನೇ ಬದಲಾಯಿಸಿದ ರಿಕ್ಷಾ ಚಾಲಕ : ಅಕ್ಷರ ಸಂತ ಹಾಜಬ್ಬರನ್ನು ನೆನಪಿಸುವ ಅಪರೂಪದ ಕಥೆ
ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ನೀಡಬೇಕೆಂದು ಬಯಸುವುದು ಸಾಮಾನ್ಯ. ಆದರೆ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ತಂದೆಯೊಬ್ಬರು ಕಂಡ ಕನಸು ಇಂದು ಇಡೀ ಹಳ್ಳಿಯ ಭವಿಷ್ಯವನ್ನೇ ಬದಲಾಯಿಸಿದೆ. ಇದು ಖಿಲೋರ್ಬಂದ್ ಎಂಬ ಹಳ್ಳಿಯ ರಿಕ್ಷಾ ಚಾಲಕ ಅಹ್ಮದ್ ಅಲಿ ಅವರ ಕಥೆ. ತಮ್ಮ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಅವರ ಆಸೆ, ಲೆಕ್ಕವಿಲ್ಲದಷ್ಟು ಜನರ ಬದುಕನ್ನು ಬದಲಾಯಿಸಿದ ಅಭಿಯಾನವಾಗಿ ಮಾರ್ಪಟ್ಟಿದೆ.
ಅಹ್ಮದ್ ಅಲಿ ಅವರು ತಂದೆಯಾಗುವ ಹೊಸ್ತಿಲಲ್ಲಿದ್ದಾಗ ಈ ಬದಲಾವಣೆಯ ಅಡಿಪಾಯ ಅವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ. ಒಂದು ಕಡೆ ಸಂತೋಷವಿದ್ದರೂ, ಮತ್ತೊಂದು ಕಡೆ ಆತಂಕವಿತ್ತು. ತಮ್ಮ ಹಳ್ಳಿಯ ಅನೇಕ ಮಕ್ಕಳು ಸೂಕ್ತ ಶಿಕ್ಷಣವಿಲ್ಲದೆ ಬೆಳೆಯುತ್ತಿರುವುದನ್ನು ಅವರು ಗಮನಿಸಿದರು. 'ನನ್ನ ಮಕ್ಕಳೂ ಇದೇ ಪರಿಸ್ಥಿತಿಯನ್ನು ಎದುರಿಸಬೇಕೇ?' ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು.

"ರಿಕ್ಷಾ ಓಡಿಸುವಾಗ ನಾನು ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದೆ. ಆಗ ನಾನೇ ಒಂದು ಶಾಲೆಯನ್ನು ತೆರೆದರೆ, ನನ್ನ ಹಳ್ಳಿಯ ಮಕ್ಕಳು ಮತ್ತು ನನ್ನ ಮಕ್ಕಳೂ ಓದಬಹುದು ಎಂದು ಯೋಚಿಸಿದೆ," ಎಂದು ಅಹ್ಮದ್ ಅಲಿ ನ್ಯೂಸ್ 18ಗೆ ತಿಳಿಸಿದ್ದಾರೆ. ಆ ಒಂದು ಪ್ರಶ್ನೆ ಅಹ್ಮದ್ ಅವರನ್ನು ತಮ್ಮ ಹಳ್ಳಿಯ ಭವಿಷ್ಯವನ್ನೇ ಬದಲಾಯಿಸುವ ಹೆಜ್ಜೆ ಇಡುವಂತೆ ಮಾಡಿತು.
"ನಾನು ರಿಕ್ಷಾದಲ್ಲಿ ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಕರೆತರುವಾಗ ನನ್ನ ಆಸೆಯನ್ನು ವ್ಯಕ್ತಪಡಿಸಿದೆ. ಆಗ ಒಬ್ಬ ಅಧಿಕಾರಿ, 'ನೀವು ಭೂಮಿಯನ್ನು ದಾನ ಮಾಡಿದರೆ ಮಾತ್ರ ಶಾಲೆ ಕಟ್ಟುವುದು ಸಾಧ್ಯ' ಎಂದು ಹೇಳಿದರು" ಎಂದು ಅಹ್ಮದ್ ಅಲಿ ನೆನಪಿಸಿಕೊಂಡರು. ಆರ್ಥಿಕ ಸಂಕಷ್ಟಗಳ ನಡುವೆಯೂ, ಅಲಿ ಅವರು ಅಸ್ಸಾಂ ಸರ್ಕಾರದ ಹೆಸರಿನಲ್ಲಿ ತಮ್ಮ ಭೂಮಿಯನ್ನು ದಾನ ಮಾಡಿದರು ಮತ್ತು 1978 ರಲ್ಲಿ ಮೊದಲ ಶಾಲೆಯನ್ನು ಸ್ಥಾಪಿಸಿದರು. 1985 ರಲ್ಲಿ ಇದಕ್ಕೆ ಸರ್ಕಾರಿ ಅನುದಾನವೂ ದೊರೆಯಿತು.
ಆದರೆ ಇಡೀ ಹಳ್ಳಿಗೆ ಶಿಕ್ಷಣ ನೀಡಲು ಒಂದು ಶಾಲೆ ಸಾಕಾಗಲಿಲ್ಲ. "ಅನುದಾನ ಪಡೆದ ನಂತರ ಉತ್ಸಾಹ ಮತ್ತಷ್ಟು ಹೆಚ್ಚಾಯಿತು," ಎನ್ನುತ್ತಾರೆ ಅವರು. ಕಳೆದ 40 ವರ್ಷಗಳಲ್ಲಿ, ಅಲಿ ಅವರು ಮಧುರ್ಬಂದ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಂಬತ್ತು ಶಾಲೆಗಳನ್ನು ಸ್ಥಾಪಿಸಿದ್ದಾರೆ. ಇದರಲ್ಲಿ ಮೂರು ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಒಂದು ಪ್ರೌಢಶಾಲೆ ಸೇರಿದೆ.
ಅಹ್ಮದ್ ಅಲಿ ಏನಂತಾರೆ?
"ಬಡತನದ ಕಾರಣದಿಂದ ನಾನು ಶಾಲೆಯನ್ನು ಅರ್ಧದಲ್ಲೇ ಬಿಡಬೇಕಾಯಿತು. ಅದರ ನೋವು ನನಗೆ ಇನ್ನೂ ಇದೆ. ಬಡ ಕುಟುಂಬದ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ನನಗೆ ಇಷ್ಟವಿಲ್ಲ. ಶಿಕ್ಷಣ ಪಡೆಯದಿರುವುದು ದೊಡ್ಡ ಪಾಪ. ಹಳ್ಳಿಯ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿದಾಗ ನನಗೆ ಅತೀವ ಸಂತೋಷವಾಗುತ್ತದೆ," ಎನ್ನುತ್ತಾರೆ ಅಲಿ.
ಹತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಅಲಿಯವರ ಗುರಿ. ಈಗಾಗಲೇ ಒಂಬತ್ತು ಶಾಲೆಗಳನ್ನು ಸ್ಥಾಪಿಸಿರುವ ಅವರು, ಈಗ ಆ ಪ್ರದೇಶದಲ್ಲಿ ಒಂದು ಕಾಲೇಜನ್ನು ಸ್ಥಾಪಿಸಲು ಬಯಸಿದ್ದಾರೆ. "ನನಗೆ ವಯಸ್ಸಾಗುತ್ತಿದೆ ಮತ್ತು ಶಿಕ್ಷಣದ ಮೂಲಕ ನನ್ನ ಹಳ್ಳಿಯನ್ನು ಅಭಿವೃದ್ಧಿಪಡಿಸಲು ನಾನು ಬಯಸುತ್ತೇನೆ. ಅನಕ್ಷರತೆ ಒಂದು ಪಾಪ, ಎಲ್ಲಾ ಸಮಸ್ಯೆಗಳ ಮೂಲ ಕಾರಣ. ಶಿಕ್ಷಣದ ಕೊರತೆಯಿಂದಾಗಿ ಹೆಚ್ಚಿನ ಕುಟುಂಬಗಳು ಸಮಸ್ಯೆಗಳನ್ನು ಎದುರಿಸುತ್ತವೆ" ಎಂದು ಅವರು ಹೇಳಿದ್ದಾಗಿ ಟೆಲಿಗ್ರಾಫ್ ವರದಿ ಮಾಡಿದೆ.
ದಾನ ಮಾಡಿದವರು ತಮ್ಮ ಹೆಸರನ್ನು ಎಲ್ಲೆಡೆ ಹಾಕಿಕೊಳ್ಳಲು ಬಯಸುವ ಈ ಕಾಲದಲ್ಲಿ, ಅಹ್ಮದ್ ಕಟ್ಟಿದ ಒಂಬತ್ತು ಶಾಲೆಗಳ ಪೈಕಿ ಕೇವಲ ಒಂದಕ್ಕೆ ಮಾತ್ರ ಅವರ ಹೆಸರಿಡಲಾಗಿದೆ. ಅದು ಕೂಡ ಗ್ರಾಮಸ್ಥರ ಒತ್ತಾಯದ ಮೇರೆಗೆ. "ಶಾಲೆಯಿಂದ ತೇರ್ಗಡೆಯಾದ ಕೆಲವು ವಿದ್ಯಾರ್ಥಿಗಳು ಇಂದು ಜೀವನದಲ್ಲಿ ಉತ್ತಮ ನೆಲೆಯಲ್ಲಿದ್ದಾರೆ ಮತ್ತು ಉದ್ಯೋಗದಲ್ಲಿದ್ದಾರೆ. ಇದು ನನ್ನ ಆತ್ಮಕ್ಕೆ ನೆಮ್ಮದಿ ಮತ್ತು ತೃಪ್ತಿಯನ್ನು ನೀಡುತ್ತದೆ. ಹೆಚ್ಚು ಶಾಲೆಗಳನ್ನು ಸ್ಥಾಪಿಸಲು ನನಗೆ ಆರ್ಥಿಕವಾಗಿ ಸಹಾಯ ಮಾಡಲು ನನ್ನ ಸಮುದಾಯದ ಪ್ರಭಾವಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ನಾನು ಮನವಿ ಮಾಡುತ್ತೇನೆ" ಎಂದು ಅಲಿ ಅವಾಜ್-ದಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಪ್ರಶಂಸೆ
2018 ರಲ್ಲಿ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ನ 42ನೇ ಸಂಚಿಕೆಯಲ್ಲೂ ಅಹ್ಮದ್ ಅಲಿ ಅವರ ಸಾಧನೆಯನ್ನು ಪ್ರಶಂಸಿಸಲಾಗಿತ್ತು. "ಅಸ್ಸಾಂನ ಕರೀಮ್‌ಗಂಜ್‌ನ ರಿಕ್ಷಾ-ಚಾಲಕ ಅಹ್ಮದ್ ಅಲಿ ಅವರು ಹಿಂದುಳಿದ ಮಕ್ಕಳಿಗಾಗಿ ಒಂಬತ್ತು ಶಾಲೆಗಳನ್ನು ನಿರ್ಮಿಸಿದ್ದಾರೆ ಎಂದು ನಾನು ನಿಮ್ಮ ಪತ್ರಗಳಲ್ಲಿ ಓದಿದಾಗ, ಅದು ನನಗೆ ರಾಷ್ಟ್ರದ ಇಚ್ಛಾಶಕ್ತಿಯ ಒಂದು ನೋಟವನ್ನು ನೀಡಿತು" ಎಂದು ಪ್ರಧಾನಿ ಹೇಳಿದ್ದರು.
ಅಹ್ಮದ್ ಅಲಿ ಅವರ ಈ ಸ್ಫೂರ್ತಿದಾಯಕ ಕಥೆ, ನಮ್ಮ ಕರ್ನಾಟಕದ ಹೆಮ್ಮೆಯ 'ಅಕ್ಷರ ಸಂತ', ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ನೆನಪಿಸುತ್ತದೆ. ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ಮಾರುತ್ತಿದ್ದ ಹಾಜಬ್ಬ ಅವರು, ಒಮ್ಮೆ ವಿದೇಶಿ ಪ್ರವಾಸಿಗನೊಬ್ಬ ಇಂಗ್ಲೀಷ್‌ನಲ್ಲಿ ಕಿತ್ತಳೆ ಬೆಲೆ ಕೇಳಿದಾಗ ಉತ್ತರಿಸಲಾಗದೆ ಮುಜುಗರಕ್ಕೊಳಗಾಗಿದ್ದರು. ತನಗೆ ಶಿಕ್ಷಣವಿಲ್ಲದಿದ್ದರೂ ತನ್ನ ಊರಿನ ಮಕ್ಕಳು ಅಕ್ಷರ ವಂಚಿತರಾಗಬಾರದು ಎಂದು ನಿರ್ಧರಿಸಿದ ಹಾಜಬ್ಬ, ಕಿತ್ತಳೆ ಮಾರಿ ಉಳಿಸಿದ ಅಲ್ಪ ಹಣದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ನ್ಯೂಪಡುಪು ಗ್ರಾಮದಲ್ಲಿ ಶಾಲೆಯನ್ನು ಕಟ್ಟಿಸಿದರು.
ಅಹ್ಮದ್ ಅಲಿ ಮತ್ತು ಹರೇಕಳ ಹಾಜಬ್ಬರಂತಹ ಸಾಮಾನ್ಯ ವ್ಯಕ್ತಿಗಳ ಅಸಾಮಾನ್ಯ ಸಾಧನೆ, ಒಬ್ಬ ವ್ಯಕ್ತಿಯ ದೃಢಸಂಕಲ್ಪವು ಇಡೀ ಸಮುದಾಯಕ್ಕೆ ಹೇಗೆ ಆಶಾಕಿರಣವಾಗಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. "ಯಾರೂ ಎಂದಿಗೂ ಅನಕ್ಷರತೆಯ ಪಾಪದಲ್ಲಿ ಬದುಕಬೇಕಾಗಿಲ್ಲ" ಎಂಬ ಅಲಿಯವರ ಮಾತು ಸದಾ ಪ್ರಸ್ತುತ.














Click it and Unblock the Notifications