Rashmika Mandanna Deepfake Video Case: ಬಿಹಾರದ ವ್ಯಕ್ತಿ ವಿಚಾರಣೆ, ಯೂಟ್ಯೂಬ್‌ನಿಂದಲೂ ಖಡಕ್ ಎಚ್ಚರಿಕೆ
ಬೆಂಗಳೂರು, ನವೆಂಬರ್ 16: ಬಹುಬಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮುಖ ಹೋಲುವ ಎಐ ಆಧಾರಿತ ನಕಲಿ ವಿಡಿಯೋ ವೈರಲ್ ಕೇಸ್‌ಗೆ ಸಂಬಂಧಿಸಿದಂತೆ ಆನ್‌ಲೈನ್ ವಿಡಿಯೋ ಶೇರಿಂಗ್ ವೇದಿಕೆ ಯೂಟ್ಯೂಬ್ (Youtube) ಸಹ ಖಡಕ್ ಎಚ್ಚರಿಕೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪೊಲೀಸರು ಬಿಹಾರ ಮೂಲದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರ ಮುಖ ಎಡಿಟ್ ಮಾಡಿದ ಜರಾ ಪಟೇಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಐ ತಂತ್ರಜ್ಞಾನವು ಎಷ್ಟರ ಮಟ್ಟಿಗೆ ದುರ್ಬಳಕೆ ಆಗುತ್ತದೆ ಎಂಬುದರ ಮೇಲೆ ಈ ಕೇಸ್ ಬೆಳಕು ಚೆಲ್ಲಿದಂತಿತ್ತು.

ದೆಹಲಿ ಪೊಲೀಸರು ಈ ಫೇಕ್ ವಿಡಿಯೋ (Fake Video) ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಡೀಫ್ ಫೇಕ್ ವಿಡಿಯೋ ಅನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ 19 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಇತ್ತೀಚೆಗೆ ವಿಚಾರಣೆ ನಡೆಸಿದ್ದಾರೆ.
ವಿಡಿಯೋ ಡೌನ್‌ಲೋಡ್ ಬಗ್ಗೆ ಯುವಕ ಹೇಳಿದ್ದೇನು?
ಈತನಿಗೆ ಮೊಬೈಲ್ ಸಮೇತ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಒಳಪಟ್ಟ ಯುವಕ ತಾನು ಇನ್‌ಸ್ಟಾಗ್ರಾಮ್‌ನಲ್ಲಿ ಈ ಡೀಪ್‌ಫೇಕ್ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾಗಿ ತಿಳಿಸಿದ್ದಾನೆ. ಬಳಿಕ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ನೀಡದಿದ್ದರೆ ಕ್ರಮ: ಯೂಟ್ಯೂಬ್
ಡೀಪ್ ಫೇಕ್ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರ ಅಚ್ಚುಮೆಚ್ಚಿನ ವಿಡಿಯೋ ಶೇರಿಂಗ್ ಸಾಮಾಜಿಕ ವೇದಿಕೆ ಯೂಟ್ಯೂಬ್ ಸಹ ಎಚ್ಚರಿಕೆ ನೀಡಿದೆ. ಯೂಟ್ಯೂಬ್ ನಲ್ಲಿ ಬಳಕೆಯಾಗುವ ಫೋಟೊಗಳು ಮತ್ತು ವಿಡಿಯೋಗಳು ಎಐ ಆಧಾರಿತವಾಗಿ ತಯಾರಿಸಿದ್ದರೆ, ಡಿಸ್‌ಕ್ಲಮೇರ್ (ಮಾಹಿತಿ ನೀಡುವುದು) ಹಾಕುವುದು ಕಡ್ಡಾಯ ಎಂದು ಸೂಚಿಸಿದೆ.

ಈ ನಿಯಮ ಪಾಲಿಸದಿದ್ದರೆ ಅಂತವರಿಗೆ ದಂಡ ಹಾಕಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ಡೀಫ್ ಫೇಕ್ ವಿಡಿಯೋ ಬಳಸಿ ಅವುಗಳನ್ನು ಡಿಲೀಟ್ ಮಾಡದಿದ್ದರೆ, ಅವೆಲ್ಲವು ಡಿಲಿಟ್ ಮಾಡಿ ನಂತರ ಅಪ್ಲೋಡ್ ಮಾಡಿದವರ ವಿರುದ್ಧ ದಂಡ ಕ್ರಮ ಜರುಗಿಸಲಾಗುವುದು.
ಯುಟ್ಯೂಬ್ ನಿಂದ ಕ್ರಮ ಜಾರಿಗೆ
ಇತ್ತೀಚೆಗೆ ಡೀಪ್ ಫೇಕ್ ವಿಡಿಯೋ ವೈರಲ್ ಬೆನ್ನಲ್ಲೆ ಎಚ್ಚೆತ್ತ ಯೂಟ್ಯೂಬ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಕಟ್ಟುನಿಟ್ಟಿನ ತಾಕೀತು ಮಾಡಿದೆ. ಈ ಮೂಲಕ ತಂತ್ರಜ್ಞಾನ ದುರ್ಬಳಕೆ, ನಕಲಿ ವಿಡಿಯೋಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಯೂಟ್ಯೂಬ್‌ನ ಈ ದಂಡ ಕ್ರಮ ಮುಂದಿನ ವರ್ಷ 2024ರ ಜನವರಿಯಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.












Click it and Unblock the Notifications