Rashmika Mandanna deepfake video: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ
ನವದೆಹಲಿ, ನವೆಂಬರ್ 08: ಬಹುಬಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna fake video) ಅವರ ಡೀಪ್ ಫೆಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ಹೆಚ್ಚು ವೀಕ್ಷಣೆಗಾಗಿ ಎಐ ಆಧಾರಿತ ಡೀಫ್ ಫೇಕ್ ವಿಡಿಯೋ, ಫೋಟೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮಧ್ಯವರ್ತಿಗಳಿಗೆ ಸಲಹೆ ನೀಡಿದೆ. ಸರ್ಕಾರದ ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಪ್ಪು ಮಾಹಿತಿ ಹರಡದಂತೆ ಸದಾ ಗಮನವಹಿಸಬೇಕು.

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ, ಮಾಹಿತಿ, ನಕಲಿ ಫೋಟೋ ವಿಡಿಯೋಗಳ ಗುರುತಿಸಲು ಸಮಂಜಸವಾದ ಪ್ರಯತ್ನಗಳನ್ನು ಮಾಡಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಡೀಪ್‌ಫೇಕ್ ವಿಡಿಯೋ AI ಸಹಾಯದಿಂದ ಮಾಡಲಾಗುತ್ತಿದೆ. ಇಂತವುಗಳನ್ನು ಸತ್ಯದಿಂದ ಪ್ರತ್ಯೇಕಿಸಲು ಕಷ್ಟವಾಗುತ್ತದೆ. ಹೆಚ್ಚುತ್ತಿರುವ ಇಂತಹ ಸಮಸ್ಯೆಯನ್ನು ಪರಿಹರಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳಾದ Facebook, Instagram, X, Snap ಮತ್ತಿತರ ಜಾಲತಾಣಗಳಿಗೆ ಪ್ರಮಾಣಿಕ ಪ್ರಯತ್ನ ಮಾಡುವಂತೆ ಹೇಳಿದೆ. ಒಂದು ವೇಳೆ ತಡೆಯುವಲ್ಲಿ ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಪೋಸ್ಟ್ ಡಿಲೀಟ್ ಮಾಡದಿದ್ದರೆ ಏನು ಕ್ರಮ?
ಐಟಿ ನಿಯಮಗಳು 2021 ರ ನಿಯಮಗಳ ಪ್ರಕಾರ ನಕಲಿ, ತಪ್ಪು ಮಾಹಿತಿಯ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಮಾಹಿತಿ ಅಥವಾ ವಿಷಯ ಹೋಸ್ಟ್ ಮಾಡದಂತೆ ಬಳಕೆದಾರರನ್ನು ತಡೆಯಲು ಸೂಚನೆ ಇದೆ. ಇಂತವುಗಳ ಕಂಡು ಬಂದಲ್ಲಿ 36 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂಬ ನಿಯಮ ಇದ್ದು, ಇದನ್ನು ಎಲ್ಲ ಸಾಮಾಜಿಕ ಮಾಧ್ಯಮಗಳು ಪಾಲಿಸಬೇಕು.

ಐಟಿ ಕಾಯಿದೆ ಮತ್ತು ನಿಯಮಗಳ ಸಂಬಂಧಿತ ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸಲು ವಿಫಲವಾದರೆ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 79(1) ಅಡಿಯಲ್ಲಿ ಲಭ್ಯವಿರುವ ರಕ್ಷಣೆಯನ್ನು ಆಯಾ ಸಂಸ್ಥೆಗಳು ಕಳೆದುಕೊಳ್ಳಲಿವೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್-ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಡಿಜಿಟಲ್ ಬಳಕೆದಾರರ ಸುರಕ್ಷತೆ ಮತ್ತು ವಿಶ್ವಾಸವು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆ ಆಗಿದೆ. ಐಟಿ ನಿಯಮ ಉಲ್ಲಂಘಿಸದಂತೆ ಅವರು ಎಚ್ಚರಿಕೆ ನೀಡಿದ್ದಾರೆ.
ಸಂತ್ರಸ್ತ ವ್ಯಕ್ತಿ ಕೋರ್ಟ್‌ಗೆ ಹೋಗಬಹುದು
ತಪ್ಪು ಮಾಹಿತಿ ಹರಡುವಿಕೆ ತಡೆಯಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಕಾನೂನು ಬಾಧ್ಯತೆಗಳ ಕುರಿತು ಕೇಂದ್ರ ಸಚಿವರು ಪ್ರಸ್ತಾಪಿಸಿದ್ದರು. ಬಳಕೆದಾರರು ಅಥವಾ ಸರ್ಕಾರಿ ಪ್ರಾಧಿಕಾರದಿಂದ ವರದಿಯನ್ನು ಸ್ವೀಕರಿಸಿದ ನಂತರ 36 ಗಂಟೆಗಳ ಒಳಗೆ ಸತ್ಯಕ್ಕೆ ದೂರವಾದ, ಮಾನಹಾನಿ ವಿಷಯವನ್ನು ತೆಗೆದುಹಾಕುವುದು ಕಡ್ಡಾಯಗೊಳಿಸಲಾಗಿದೆ. ಇದರ ಪಾಲನೆಯಲ್ಲಿ ವಿಫಲವಾದರೆ ಭಾರತೀಯ ದಂಡ ಸಂಹಿತೆಯ (IPC) ನಿಬಂಧನೆಗಳ ಅಡಿಯಲ್ಲಿ ಸಂತ್ರಸ್ತರು ನ್ಯಾಯಾಲಯಕ್ಕೆ ಹೋಗಬಹುದು ಎಂಬ ನಿಯಮಗಳನ್ನು ಅವರು ನೆನಪಿಸಿದ್ದಾರೆ.
ಡೀಪ್‌ಫೇಕ್‌ಗಳಿಂದ ತೊಂದರೆಗೀಡಾದವರು ತಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲು ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು 202 ರ ಅಡಿಯಲ್ಲಿ ಒದಗಿಸಲಾದ ಪರಿಹಾರ ಪಡೆಯುವಂತೆ ಸಚಿವರು ತಿಳಿಸಿದ್ದಾರೆ.












Click it and Unblock the Notifications