Ranya Rao Case: ವಿದೇಶದಿಂದ ಭಾರತಕ್ಕೆ ಬಂಗಾರ, ನಗದು ತರುತ್ತೀರಾ? ಇಲ್ಲಿದೆ ಬಹುಮುಖ್ಯ ಮಾಹಿತಿ

ವಿದೇಶದಿಂದ ನಗದು, ಆಭರಣ ತರಬೇಕೆಂದರೆ ಕೆಲವು ನಿಯಮಗಳಿವೆ. ಆದ್ರೆ ಇವುಗಳನ್ನು ಮೀರಿಯೂ ಕೆಲವರು ವಿಮಾನ ನಿಲ್ದಾಣಗಳಲ್ಲಿ ದಾಖಲೆಯಿಲ್ಲದೆ, ಚಿನ್ನದ ಬಿಸ್ಕೆಟ್‌ ಹಾಗೂ ನಗದು ಸಾಗಿಸಿ ಪೊಲೀಸರ ಕೈಗೆ ತಗ್ಲಾಕೊಂಡಿರುವ ಉದಾಹರಣೆಗಳಿವೆ. ಇತ್ತೀಚೆಗಷ್ಟೇ ನಟಿ ರನ್ಯಾ ರಾವ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಗ್ಲಾಕೊಂಡು ಇದೀಗ ವಿಚಾರಣೆಗೆ ಒಳಗಾಗಿದ್ದಾರೆ.

ನಟಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.8 ಕೆಜಿ ಚಿನ್ನದೊಂದಿಗೆ ಬಂಧಿಸಿದ್ದಾರೆ. ಇದು ಭಾರತದಲ್ಲಿ ನಡೆದ ದೊಡ್ಡ ಚಿನ್ನದ ಜಪ್ತಿ ಪ್ರಕರಣಗಳಲ್ಲೊಂದಾಗಿದೆ. ತನಿಖೆ ನಂತರ ಅಧಿಕಾರಿಗಳು 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

Ranya Rao Case Important Information for Those Bringing Gold and Cash to India from Abroad

ಭಾರತದ ಸುಂಕ ನಿಯಮಗಳು ಪ್ರಯಾಣಿಕರು ದೇಶಕ್ಕೆ ಪ್ರವೇಶಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ಸ್ಪಷ್ಟವಾಗಿ ನಿರ್ಧರಿಸುತ್ತವೆ. ಇದು ಆರ್ಥಿಕ ಅಪನಂಬಿಕೆ ತಡೆಯಲು ಮತ್ತು ರಾಷ್ಟ್ರದ ಆರ್ಥಿಕತೆಗೆ ಹಾನಿ ಸಂಭವಿಸದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಭಾರತದಲ್ಲಿ 1962ರ ಸುಂಕ ಕಾಯ್ದೆ ಸುಂಕದ ನಿರ್ವಹಣೆ, ಅಕ್ರಮ ಸಾಗಣೆ ತಡೆ ಮತ್ತು ಆಮದು, ರಫ್ತು ನಿಯಂತ್ರಣವನ್ನು ನಿರ್ಧರಿಸುತ್ತದೆ.

ಸಿಎನ್‌ಐಟಿ ಎಂಬ ಉನ್ನತ ಸಂಸ್ಥೆಯು ಸುಂಕ, ಉತ್ಪಾದನಾ ತೆರಿಗೆ ಮತ್ತು ಸರಕು ಮತ್ತು ಸೇವಾ ತೆರಿಗೆಯ ಮೇಲೆ ನಿಗಾ ವಹಿಸುತ್ತದೆ. ಪ್ರತಿಯೊಬ್ಬ ಪ್ರಯಾಣಿಕನು ವಲಸೆ ಅಧಿಕಾರಿಯಿಂದ ತೆರವುಗೊಳಿಸಿದ ನಂತರ, ತಮ್ಮ ಬ್ಯಾಗೇಜ್‌ಗಳನ್ನು ಪಡೆಯಲು ಸುಂಕ ಪರಿಶೀಲನೆಯ ಮೂಲಕ ಹಾದುಹೋಗಬೇಕು. ಇನ್ನು ಸುಂಕ ತೆರವಿಗೆ ಎರಡು ಚಾನಲ್‌ಗಳಿವೆ.

* ಸುಂಕ ತೆರವಿಗೆ ಇರುವ ಚಾನೆಲ್‌ಗಳು: ಹಸಿರು ಚಾನೆಲ್ ಇದು ಸುಂಕ ವಿಧಿಸಬಹುದಾದ ಅಥವಾ ನಿಷೇಧಿತ ಸರಕುಗಳನ್ನು ಹೊಂದಿರದ ಪ್ರಯಾಣಿಕರು ಈ ಚಾನೆಲ್ ಬಳಸಬಹುದು. ಇನ್ನು ಕೆಂಪು ಚಾನೆಲ್ ಅನ್ನು ಸುಂಕ ವಿಧಿಸಬಹುದಾದ ಅಥವಾ ನಿಷೇಧಿತ ಸರಕುಗಳನ್ನು ಹೊಂದಿರುವ ಪ್ರಯಾಣಿಕರು ಬಳಸಬೇಕಾಗುತ್ತದೆ.
* ಪ್ರಯಾಣಿಕರು ATITHI ಮೊಬೈಲ್ ಆ್ಯಪ್ ಮುಖಾಂತರ ತಮ್ಮ ಸುಂಕ ತೆರಿಗೆ ಘೋಷಿಸಬಹುದು. 5,000 ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ವಿದೇಶಿ ಕರೆನ್ಸಿ ಅಥವಾ 10,000 ರೂಪಾಯಿ ಮೌಲ್ಯಕ್ಕಿಂತ ಅಧಿಕ ವಿದೇಶೀ ವಿನಿಮಯ ಹೊಂದಿರುವ ಪ್ರಯಾಣಿಕರು ಅದನ್ನು ಘೋಷಿಸುವುದು ಕಡ್ಡಾಯ.
* ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿರುವ ಭಾರತೀಯ ಪ್ರಯಾಣಿಕರು ತಮ್ಮ ಬ್ಯಾಗೇಜ್‌ನಲ್ಲಿ ಚಿನ್ನದ ಆಭರಣಗಳನ್ನು ಸುಂಕವಿಲ್ಲದೆ ತರಲು ಅನುಮತಿಸಲಾಗಿದೆ.
* ಪುರುಷರು: 20 ಗ್ರಾಂವರೆಗೆ ಚಿನ್ನಾಭರಣ, ಇದರ ಮೌಲ್ಯ 50,000 ರೂಪಾಯಿಗಳವರೆಗೆ ಮಾತ್ರ ಇರಬೇಕು
* ಮಹಿಳೆಯರು: 40 ಗ್ರಾಂವರೆಗೆ ಚಿನ್ನಾಭರಣ, ಇದರ ಮೂಲ್ಯ 1,00,000 ರೂಪಾಯಿಗಳವರೆಗೆ ಮಾತ್ರ ಇರಬೇಕು
* ಆರು ತಿಂಗಳಿಗಿಂತ ಕಡಿಮೆ ಅವಧಿಗೆ ವಿದೇಶದಲ್ಲಿರುವ ಪ್ರಯಾಣಿಕರು ಈ ವಿನಾಯಿತಿಯನ್ನು ಪಡೆಯಲು ಅರ್ಹರಾಗಿರುವುದಿಲ್ಲ.
* ಚಿನ್ನದ ಬಿಸ್ಕತ್ತುಗಳು ಅಥವಾ ಕಚ್ಚಾ ಚಿನ್ನವನ್ನು ತರಲು ಹೆಚ್ಚಿನ ಸುಂಕ ಮತ್ತು ಕಟ್ಟುನಿಟ್ಟಿನ ನಿಯಮಗಳು ಅನ್ವಯಿಸುತ್ತವೆ.

ಸುಂಕದ ದರ

* ಮೇಲಿನ ಮಿತಿಗಳನ್ನು ಮೀರಿದ ಚಿನ್ನದ ಮೇಲೆ ಸುಂಕ ಪಾವತಿಸಬೇಕು
* ಮೂಲ ಸುಂಕ: ಸುಮಾರು ಶೇಕಡ 12.5
* ಜೊತೆಗೆ ಸಾಮಾಜಿಕ ಕಲ್ಯಾಣ ಸುರಕ್ಷತಾ ಶುಲ್ಕ: ಶೇಕಡ 10
* ಒಟ್ಟಾರೆ ಸುಂಕ: ಸುಮಾರು ಶೇಕಡ 15-20 ಜಿಎಸ್‌ಟಿ ಸೇರಿ ಚಿನ್ನದ ಮೌಲ್ಯದ ಮೇಲೆ ಲೆಕ್ಕ ಹಾಕಲಾಗುತ್ತದೆ.
* ಉದಾಹರಣೆಗೆ 50 ಗ್ರಾಂ ಚಿನ್ನ ತಂದರೆ, ಪುರುಷರಾಗಿದ್ದರೆ 20 ಗ್ರಾಂಗಿಂತ ಹೆಚ್ಚಿನ 30 ಗ್ರಾಂಗೆ ಸುಂಕ ಪಾವತಿಸಬೇಕು.
* 50,000 ಮೌಲ್ಯದ ಚಿನ್ನಕ್ಕಿಂತ ಹೆಚ್ಚಿನದನ್ನು ತಂದರೆ ಕಸ್ಟಮ್ಸ್ ಅಧಿಕಾರಿಗಳಿಗೆ ಘೋಷಿಸಬೇಕು
* ಘೋಷಣೆ ಮಾಡದಿದ್ದರೆ ಕಾನೂನು ಉಲ್ಲಂಘನೆ ಆಗುತ್ತದೆ

ಭಾರತಕ್ಕೆ ಎಷ್ಟು ನಗದು ತರಬಹುದು?: ಯಾವುದೇ ವ್ಯಕ್ತಿಯು ಅನಿಯಮಿತ ಪ್ರಮಾಣದಲ್ಲಿ ವಿದೇಶಿ ವಿನಿಮಯ ಭಾರತಕ್ಕೆ ತರಬಹುದು.
ಆದರೆ 5,000 ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ವಿದೇಶಿ ಕರೆನ್ಸಿ ಅಥವಾ 10,000 ರೂಪಾಯಿ ಮೌಲ್ಯಕ್ಕಿಂತ ಅಧಿಕ ವಿದೇಶಿ ವಿನಿಮಯ ಹೊಂದಿರುವ ಪ್ರಯಾಣಿಕರು ಅದನ್ನು ಘೋಷಿಸಬೇಕಾಗುತ್ತದೆ. ವಿದೇಶದಿಂದ ಮರಳುವ ಭಾರತೀಯರು 25,000 ರೂಪಾಯಿವರೆಗೆ ಭಾರತೀಯ ಕರೆನ್ಸಿಯನ್ನು ತರಬಹುದು.

* ವಿದೇಶದಿಂದ ಹಣ ತರುವಾಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸುಂಕ ಇಲಾಖೆಯ ನಿಯಮಗಳು ಅನ್ವಯಿಸುತ್ತವೆ. ಪ್ರಯಾಣಿಕರು ಗರಿಷ್ಠ 10,000 USD ತರಬಹುದು. 10,000 USDಗಿಂತ ಹೆಚ್ಚಿನ ಮೊತ್ತವನ್ನು ತಂದರೆ, ಕಸ್ಟಮ್ಸ್‌ಗೆ ಘೋಷಿಸಬೇಕು. ಭಾರತೀಯ ರೂಪಾಯಿ ಆದ್ರೆ, ಪ್ರಯಾಣಿಕರು 25,000 ರೂಪಾಯಿಗಿಂತ ಹೆಚ್ಚಿನ ನಗದು ರೂಪಾಯಿಯನ್ನು ತರಲು ಅನುಮತಿ ಇಲ್ಲ.
* ಹಣವು ನಗದು, ಟ್ರಾವೆಲರ್ಸ್ ಚೆಕ್, ಬ್ಯಾಂಕ್ ಡ್ರಾಫ್ಟ್, ಅಂತಾಷ್ಟ್ರೀಯ ಡೆಬಿಟ್/ಕ್ರೆಡಿಟ್ ಕಾರ್ಡ್ ರೂಪದಲ್ಲಿ ಇರಬಹುದು. ಆದರೆ, ನಗದು ಮಿತಿಯನ್ನು ಮೀರಿದರೆ ಘೋಷಣೆ ಕಡ್ಡಾಯ. ಒಂದು ವೇಳೆ 1962ರ ಸುಂಕ ಕಾಯ್ದೆಯಡಿ ಸುಂಕ ನಿಯಮ ಉಲ್ಲಂಘನೆ ಗಂಭೀರ ಅಪರಾಧವಾಗಿದೆ. ಇದು ಜಪ್ತಿ, ದಂಡ, ಜೈಲು ಶಿಕ್ಷೆ ಹಾಗೂ ಕಾನೂನು ಕ್ರಮಕ್ಕೆ ಕಾರಣವಾಗಬಹುದು.
* ಹಸಿರು ಚಾನೆಲ್ ಮೂಲಕ ನಿಷೇಧಿತ, ನಿರ್ಬಂಧಿತ ಅಥವಾ ಸುಂಕದ ಸರಕುಗಳನ್ನು ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸುವ ಪ್ರಯಾಣಿಕರು ಕಠಿಣ ಶಿಕ್ಷೆಗೆ ಒಳಗಾಗುತ್ತಾರೆ. ಮಿತಿಮೀರಿದ ಚಿನ್ನ ಅಥವಾ ಹಣವನ್ನು ಘೋಷಣೆ ಇಲ್ಲದೆ ತಂದರೆ, ಅದನ್ನು ವಶಪಡಿಸಿಕೊಳ್ಳಬಹುದು. ಪ್ರಕರಣ ಗಂಭೀರ ಆದರೆ, ಅಪರಾಧಿಯ ವಿರುದ್ಧ ಜೈಲು ಶಿಕ್ಷೆ ವಿಧಿಸಬಹುದು.
* ನಿಯಮಗಳನ್ನು ಉಲ್ಲಂಘಿಸಿದರೆ ಕಸ್ಟಮ್ಸ್ ಆಕ್ಟ್ 1962, ಫಾರಿನ್ ಎಕ್ಸ್‌ಚೇಂಜ್ ಮ್ಯಾನೇಜ್‌ಮೆಂಟ್ ಆಕ್ಟ್ 1999, ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
* ಒಂದು ವೇಳೆ ಘೋಷಿಸದೇ ತಂದರೆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ, ಚಿನ್ನದ ಮೌಲ್ಯದ ಮೇಲೆ ದಂಡ ವಿಧಿಸಬಹುದು, ಜೊತೆಗೆ ಸುಂಕದ ಮೊತ್ತವನ್ನು ಕಟ್ಟಬೇಕಾಗುತ್ತದೆ.

* ಕಳ್ಳಸಾಗಣಿಕೆ: ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಣೆ ಮಾಡಿದರೆ, ಕಸ್ಟಮ್ಸ್ ಆಕ್ಟ್ ಸೆಕ್ಷನ್ 135ರ ಅಡಿಯಲ್ಲಿ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಉದಾಹರಣೆಗೆ ಖರ್ಜೂರದಲ್ಲಿ ಅಥವಾ ಲಗೇಜ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುವುದು ಕಳ್ಳಸಾಗಣೆಯಾಗಿ ಪರಿಗಣಿಸಲಾಗುತ್ತದೆ.
* ಘೋಷಿಸದೇ ತಂದರೆ: 10,000 USDಗಿಂತ ಹೆಚ್ಚಿನ ಹಣವನ್ನು ಘೋಷಿಸದೇ ತಂದರೆ, ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
* FEMA ಉಲ್ಲಂಘನೆ: FEMA ನಿಯಮಗಳನ್ನು ಉಲ್ಲಂಘಿಸಿದರೆ, ಮೊತ್ತದ 3 ಪಟ್ಟು ದಂಡ ಅಥವಾ 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.
* ಕಳ್ಳಸಾಗಣೆ/ಕಪ್ಪು ಹಣ: ದೊಡ್ಡ ಪ್ರಮಾಣದ ಹಣವನ್ನು ಕಪ್ಪು ಹಣವಾಗಿ ಸಾಗಿಸುವುದು ದೃಢಪಟ್ಟರೆ, ಮನಿ ಲಾಂಡರಿಂಗ್ ತಡೆಗಟ್ಟುವ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಇದರಲ್ಲಿ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ಸಾಧ್ಯವಿರುತ್ತದೆ.
* ಸುಂಕ ಇಲಾಖೆಯು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬಹುದು
* ಪ್ರಯಾಣದ ಮೇಲೆ ನಿಷೇಧ ಅಥವಾ ಪಾಸ್‌ಪೋರ್ಟ್ ಮುಟ್ಟುಗೋಲು ಸಾಧ್ಯತೆಯಿದೆ.
* ಆರ್ಥಿಕ ಅಪರಾಧಗಳಲ್ಲಿ ಭಾಗಿ ಆಗಿದ್ದರೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ತನಿಖೆಗೆ ಒಳಪಡಬಹುದು.

ಪ್ರಯಾಣಿಕರಿಗೆ ಪ್ರಮುಖ ಸಲಹೆ: ಚಿನ್ನ ಅಥವಾ ಹಣವನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಕೌಂಟರ್‌ನಲ್ಲಿ ಘೋಷಿಸಿ, ಸರಿಯಾದ ಫಾರ್ಮ್ ಭರ್ತಿ ಮಾಡಿ. ಅಲ್ಲದೆ, ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಿ. ಪ್ರಯಾಣದ ಮೊದಲು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ ವೆಬ್‌ಸೈಟ್‌ನಲ್ಲಿ ಇತ್ತೀಚಿನ ನಿಯಮಗಳನ್ನು ಪರಿಶೀಲಿಸಿ. ಮಿತಿಗಿಂತ ಹೆಚ್ಚಿನ ಚಿನ್ನ ಅಥವಾ ಹಣಕ್ಕೆ ಸುಂಕವನ್ನು ಪಾವತಿಸಲು ಸಿದ್ಧರಾಗಿರಿ.

ಈಗಾಗಲೇ ಶಂಕೆಯ ಮೇರೆಗೆ ನಟಿ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದ್ದರಿಂದ ವಿಮಾನದಲ್ಲಿ ವಿದೇಶಗಳಿಂದ ಹಣ, ಚಿನ್ನ ತರುವ ಮುನ್ನ ಈ ಮೇಲಿ ನೀಡಿರುವ ಅಂಶಗಳನ್ನು ಗಮನಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+