• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೇಖಾವತ್ ಜೊತೆ ಜಾರಕಿಹೊಳಿ ಮಹತ್ವದ ಮಾತುಕತೆ!

|

ಬೆಂಗಳೂರು, ಅ. 10: ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಖ್ಯಾತೆ ತೆಗೆದಿರುವ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ರಾಜ್ಯ ಜಲಸಂಪನ್ಮೂಲ ಸಚಿವ ಸರಿಯಾದ ಎದಿರೇಟು ಕೊಟ್ಟಿದ್ದಾರೆ. ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಶೇಖಾವತ್ ಅವರ ಗೊಂದಲದ ಹೇಳಿಕೆಗಳ ಹಿನ್ನೆಲೆಯಲ್ಲಿ ದೂರವಾಣಿಯಲ್ಲಿ ತುರ್ತು ಮಾತುಕತೆ ನಡೆಸಿದ್ದಾರೆ.

ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿರುವ ಅವರು, ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಮತ್ತು ನ್ಯಾಯಬದ್ಧ ವಾದವನ್ನು ಮಂಡಿಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ತೆಲಂಗಾಣದ ಅತಾರ್ಕಿಕ ತಗಾದೆ

ತೆಲಂಗಾಣದ ಅತಾರ್ಕಿಕ ತಗಾದೆ

ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ತೆಲಂಗಾಣ ಸರ್ಕಾರವು ಹೊಸ ತಗಾದೆ ತೆಗೆದಿದೆ. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ಈಗಾಗಲೇ ಅಂತಿಮ ತೀರ್ಪನ್ನೂ ನೀಡಿದೆ. 2013ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಅಖಂಡ ಆಂಧ್ರ ಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ ಬಳಿಕ ಐತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವೂ ನಿರ್ಧರಿಸಿದೆ. ಹೀಗಾಗಿ ನೀರು ಹಂಚಿಕೆ ವಿಷಯದಲ್ಲಿ ಹೊಸದಾಗಿ ನ್ಯಾಯಾಧಿಕರಣ ಸ್ಥಾಪಿಸಬೇಕೆಂದು ತೆಲಂಗಾಣ ಸರ್ಕಾರದ ವಾದ ಅತಾರ್ಕಿಕ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶೇಖಾವತ್ ಜೊತೆ ಸಮಾಲೋಚನೆ

ಶೇಖಾವತ್ ಜೊತೆ ಸಮಾಲೋಚನೆ

ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ನ್ಯಾಯಾಧಿಕರಣದಲ್ಲಿ ಮರು ವಿಚಾರಣೆ ನಡೆಸುವಂತೆ ಕೇಂದ್ರ ಜಲ ಶಕ್ತಿ ಸಚಿವರನ್ನು ಒತ್ತಾಯಿಸಿದ್ದಾರೆ. ಆದ್ದರಿಂದ ತಕ್ಷಣವೇ ರಮೇಶ್ ಜಾರಕಿಹೊಳಿ ಅವರು ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದಾರೆ.

ತೆಲಂಗಾಣ ರಾಜ್ಯ ಆಂಧ್ರ ಪ್ರದೇಶದ ಭಾಗವೇ ಆಗಿದ್ದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರನ್ನೂ ತೆಲಂಗಾಣ ರಾಜ್ಯ ಆಂಧ್ರ ಪ್ರದೇಶದ ಪಾಲಿನಿಂದಲೇ ಹಂಚಿಕೊಳ್ಳಬೇಕಿದೆ. ಈ ಬಗೆಗಿನ ಸುಪ್ರೀಂ ಕೋರ್ಟ್ ಆದೇಶಗಳೂ ಸ್ಪಷ್ಟವಾಗಿವೆ. ಮತ್ತು ನ್ಯಾಯಾಧಿಕರಣ ಸ್ಥಾಪಿಸಬೇಕೆಂದು ಈ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳೂ ವಜಾ ಆಗಿವೆ.

ಈ ಎಲ್ಲ ಕಾರಣಗಳಿಂದ ಕೃಷ್ಣಾ ನದಿ ನೀರನ್ನು ಹಂಚಿಕೊಳ್ಳಬೇಕಾಗಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಪರಸ್ಪರ ಪರಿಹರಿಸಿಕೊಳ್ಳಬೇಕೆ ವಿನಃ ಹೊಸ ನ್ಯಾಯಾಧಿಕರಣ ಸ್ಥಾಪನೆ ಬೇಡಿಕೆ ಸಮರ್ಥನೀಯವಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರ ಜಲಶಕ್ತಿ ಸಚಿವರ ಎದುರು ವಾದ ಮಂಡಿಸಿದ್ದಾರೆ.

ನಮ್ಮ ನೀರು, ನಮ್ಮ ಹಕ್ಕು

ನಮ್ಮ ನೀರು, ನಮ್ಮ ಹಕ್ಕು

ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳುವುದು ನಮ್ಮ ಆದ್ಯ ಹಕ್ಕು ಎಂದು ಪ್ರತಿಪಾದಿಸಿರುವ ಸಚಿವ ಜಾರಕಿಹೊಳಿ ಅವರು, ಅದಕ್ಕಾಗಿ ಕಾನೂನು ಮತ್ತು ರಾಜಕೀಯ ಒತ್ತಡವನ್ನು ಹೇರುವ ಮೂಲಕ ರಾಜ್ಯಕ್ಕೆ ದಕ್ಕಬೇಕಿರುವ ಅರ್ಹ ಪಾಲನ್ನು ಪಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಗೋವಾ ವಾದ ಹಾಸ್ಯಾಸ್ಪದ

ಗೋವಾ ವಾದ ಹಾಸ್ಯಾಸ್ಪದ

ಮಹದಾಯಿ ನದಿ ನೀರು ಹಂಚಿಕೆ ಕುರಿತು ಈಗಾಗಲೇ ನ್ಯಾಯಾಧಿಕರಣವು ಐತೀರ್ಪು ನೀಡಿದ್ದು, ಕೇಂದ್ರ ಸರ್ಕಾರವೂ ಸಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಗೋವಾ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

ಮಹದಾಯಿ ಯೋಜನೆಯ ಅನುಷ್ಠಾನದ ವಿಷಯವು ಈಗಾಗಲೇ ತಾರ್ಕಿಕವಾಗಿ ಅಂತ್ಯವಾಗಿದೆ. ಅರಣ್ಯ ಇಲಾಖೆ ಅನುಮೋದನೆ ಮಾತ್ರ ಬಾಕಿ ಇದ್ದು, ಇಂತಹ ಸಂದರ್ಭದಲ್ಲಿ ನೆರೆಯ ರಾಜ್ಯ ಗೋವಾ ಸುಖಾಸುಮ್ಮನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರವು ಇದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಲಿದೆ ಎಂದು ಭರವಸೆ ನೀಡಿದ್ದಾರೆ.

English summary
State Water Resources Minister Ramesh Jarkiholi has had significant talks with Union Water Resources Minister Gajendra Singh Shekhawat on the water sharing of the Mahadai and Krishna River.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X