ಬಿಹಾರ ರಾಮನವಮಿ ಘರ್ಷಣೆ; ಈವರೆಗೆ 80 ಜನರ ಬಂಧನ, ರ‍್ಯಾಲಿ ರದ್ದು ಮಾಡಿದ ಗೃಹ ಸಚಿವ ಅಮಿತ್ ಶಾ
ಪಾಟ್ನಾ, ಏಪ್ರಿಲ್.02: ರಾಮನವಮಿಯ ಒಂದು ದಿನದ ನಂತರವೂ ಬಿಹಾರದಲ್ಲಿ ಉದ್ವಿಗ್ನತೆ ನೆಲೆಸಿದೆ, ಶನಿವಾರ ರೋಹ್ತಾಸ್ ಮತ್ತು ನಳಂದಾ ಜಿಲ್ಲೆಗಳಲ್ಲಿ ಹೊಸ ಹಿಂಸಾಚಾರದ ಘಟನೆಗಳು ವರದಿಯಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 80 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಳಂದದ ಬಿಹಾರ್‌ಶರೀಫ್‌ನಲ್ಲಿ, ಶನಿವಾರ ಸಂಜೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಇನ್ನು ರೋಹ್ತಾಸ್ ಜಿಲ್ಲೆಯ ಸಸಾರಾಮ್ ಪಟ್ಟಣದಲ್ಲಿ ನಡೆದ ಸ್ಫೋಟದಲ್ಲಿ ಆರು ಜನರು ಗಾಯಗೊಂಡಿದ್ದಾರೆ. ಸಸಾರಾಮ್‌ನ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಸ್ಥಳದಿಂದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸಸಾರಾಮ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ನಳಂದಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಶುಕ್ರವಾರ ಎರಡು ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಘರ್ಷಣೆ ವರದಿಯಾಗಿದೆ.
ರಾಮನವಮಿ ಮೆರವಣಿಗೆ ನಡೆಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗುರುವಾರದಿಂದ ಉದ್ವಿಗ್ನತೆ ಉಂಟಾಗಿತ್ತು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ಈ ಮಾತಿನ ಚಕಮಕಿ ಪೂರ್ಣ ಪ್ರಮಾಣದ ಘರ್ಷಣೆಗೆ ತಿರುಗಿತು, ಗುಂಪುಗಳು ಪರಸ್ಪರ ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಹಲವರು ಗಾಯಳುಗಳಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
"ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ಈವರೆಗೆ ಕನಿಷ್ಠ 80 ಜನರನ್ನು ಬಂಧಿಸಲಾಗಿದೆ ಮತ್ತು ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸಿ ಸಮುದಾಯದ ಮುಖಂಡರು ಸಭೆಗಳನ್ನು ಆಯೋಜಿಸುತ್ತಿದ್ದಾರೆ. ನಳಂದಾ ಮತ್ತು ರೋಹ್ತಾಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಸಂತ್ರಸ್ತ ಪ್ರದೇಶಗಳಲ್ಲಿ ಹಿರಿಯ ಅಧಿಕಾರಿಗಳು ಇದ್ದಾರೆ" ಎಂದು ನಳಂದಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ಶುಭಂಕರ್ ಮಾಹಿತಿ ನೀಡಿದ್ದಾರೆ.

ಮುಂದುವರಿದು, ಯಾವುದೇ ಸುಳ್ಳು ಅಥವಾ ಪ್ರಚೋದನಕಾರಿ ಸುದ್ದಿ ಹರಡುವುದನ್ನು ತಡೆಯಲು ಸಾಮಾಜಿಕ ಮಾಧ್ಯಮಗಳನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ನಳಂದಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ಶುಭಂಕರ್ ತಿಳಿಸಿದ್ದಾರೆ. ಇನ್ನು, ರಾಜ್ಯದಲ್ಲಿ ಹಿಂಸಾಚಾರದ ನಂತರ ಹೆಚ್ಚುವರಿ ಅರೆಸೇನಾ ಪಡೆಗಳನ್ನು ಬಿಹಾರಕ್ಕೆ ಕಳುಹಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
ಇಂದು ಸಸಾರಾಮ್‌ಗೆ ಭೇಟಿ ನೀಡಲಿರುವ ಅಮಿತ್ ಶಾ ಅವರು ಇಂದು ಬೆಳಗ್ಗೆ ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರೊಂದಿಗೆ ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜೊತೆಗೆ ಇಲ್ಲಿ ನಡೆಯಬೇಕಿದ್ದ ತಮ್ಮ ಸಾರ್ವಜನಿಕ ಮೆರವಣಿಗೆಯನ್ನು ರದ್ದು ಮಾಡಿದ್ದಾರೆ.
ಸಸಾರಾಮ್‌ನ ಕೆಲವು ನಿವಾಸಿಗಳು ಈ ಕೋಮು ಘರ್ಷಣೆಗಳಿಂದ ಹೆದರಿ ತಮ್ಮ ಪ್ರದೇಶವನ್ನು ತೊರೆಯುತ್ತಿದ್ದಾರೆ ಎಂಬ ವರದಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ. ವರದಿಗಳನ್ನು "ಸಂಪೂರ್ಣವಾಗಿ ಆಧಾರರಹಿತ ಮತ್ತು ಅಸಂಬದ್ಧ" ಎಂದು ಕರೆದ ರೋಹ್ತಾಸ್ ಪೊಲೀಸರು ಇಂತಹ ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಜನರಿಗೆ ತಿಳಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಕೆಲವು ಜನರು ಕಿಡಿಗೇಡಿತನ ದಲ್ಲಿ ತೊಡಗಿಸಿಕೊಂಡಿಎಉವುದರಿಮದ ಸಂಭವಿಸಿದೆ ಎಂದು ಆರೋಪಿಸಿದರು.
"ಸಸಾರಾಮ್ ಮತ್ತು ಬಿಹಾರ ಷರೀಫ್‌ನಲ್ಲಿ ರಾಮನವಮಿ ಹಬ್ಬದ ಸಂದರ್ಭದಲ್ಲಿ ಕೋಮು ಉದ್ವಿಗ್ನತೆಗಳು ಗೊಂದಲ ಉಂಟುಮಾಡುತ್ತವೆ. ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಸಂಭವಿಸಿವೆ. ಇದು ಸ್ವಾಭಾವಿಕವಲ್ಲ. ಕಿಡಿಗೇಡಿತನದಲ್ಲಿ ತೊಡಗಿರುವವರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.












Click it and Unblock the Notifications