Ram Mandira: ಸಾವಿರ ವರ್ಷಗಳವರೆಗೆ ಗಟ್ಟಿ ಈ ಅಯೋಧ್ಯೆ ರಾಮ ಮಂದಿರ!
ಅಯೋಧ್ಯಾ ಡಿಸೆಂಬರ್ 27: ಮುಂದಿನ ವರ್ಷ ಜನವರಿ 22 ರಂದು ರಾಮಲಲ್ಲಾನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ರಾಮಮಂದಿರದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಾದಿಯಲ್ಲಿದೆ. ಈ ದೇವಾಲಯವು ಕನಿಷ್ಠ 1000 ವರ್ಷಗಳಿಗೂ ಹೆಚ್ಚು ಕಾಲ ಹವಾಮಾನ ಬದಲಾವಣೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಅಯೋಧ್ಯೆಯ ದೇವಾಲಯದ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿದ ರಾಮಮಂದಿರದ ಪ್ರಾಜೆಕ್ಟ್ ಎಂಜಿನಿಯರ್ ಗಿರೀಶ್ ಸಾಹಸಬುಜಿನಿ ಅವರು, ರಾಮಮಂದಿರ ರಚನೆಯ ಸ್ಥಿತಿಸ್ಥಾಪಕತ್ವದ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಆಯೋಧ್ಯ ರಾಮಮಂದಿರ 1000 ರಿಂದ 2500 ವರ್ಷಗಳವರೆಗೆ ಹಾನಿಯನ್ನು ತಡೆದುಕೊಳ್ಳುವಷ್ಟು ಪ್ರಬಲವಾಗಿದೆ ಎಂದು ಅವರು ಹೇಳಿದರು.

ಆಯೋಧ್ಯ ರಾಮಮಂದಿರದ ಸಂಪೂರ್ಣ ರಚನೆಯು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ಸುಂದರ ಮಿಶ್ರಣವಾಗಿದೆ. "ದೇವಾಲಯದ ಮುಖ್ಯ ರಚನೆಯನ್ನು ಉತ್ತರ ಭಾರತದ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಅನುಸರಿಸಿ ನಿರ್ಮಿಸಲಾಗುತ್ತಿದೆ. ಉಳಿದ ಸಣ್ಣ ದೇವಾಲಯಗಳು ಹೊರ ಗೋಡೆ (ಪಾರ್ಕೋಟಾ) ಅದರ ಹೋಲಿಕೆಯನ್ನು ಪ್ರತಿಬಿಂಬಿಸುತ್ತದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪವು ಉತ್ತರ ಮತ್ತು ದಕ್ಷಿಣದ ಎರಡೂ ಶೈಲಿಗಳನ್ನು ಸುಂದರವಾಗಿ ಸಂಯೋಜಿಸುತ್ತದೆ" ಎಂದು ಸಾಹಸಬುಜಿನಿ ಹೇಳಿದರು.
ಜೊತೆಗೆ "ದೇವಾಲಯದ ಸ್ತಂಭದಲ್ಲಿ ಬಳಸಲಾದ ಗ್ರಾನೈಟ್ ಅನ್ನು ಕರ್ನಾಟಕ ಮತ್ತು ತೆಲಂಗಾಣದಿಂದ ತರಲಾಗಿದೆ. ಕಲ್ಲುಗಳನ್ನು ರಾಜಸ್ಥಾನದಿಂದ ಮತ್ತು ನೆಲಹಾಸನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ತರಲಾಗಿದೆ. ಇದಲ್ಲದೆ, ಹಗಲಿರುಳು ಕೆಲಸ ಮಾಡುವ ಕುಶಲಕರ್ಮಿಗಳು ದೇಶದ ಮೂಲೆ ಮೂಲೆಗಳಿಂದ ಬಂದಿದ್ದಾರೆ" ಎಂದು ಅವರು ವಿವರಿಸಿದರು.
ಒಡಿಶಾದ ಕಲಾವಿದರು ಮರಳುಗಲ್ಲುಗಳ ಮೇಲೆ ಪ್ರತಿಮಾಶಾಸ್ತ್ರವನ್ನು ಮಾಡುತ್ತಿದ್ದಾರೆ, ಆಂಧ್ರದ ಸಂಸ್ಥೆಯ ಉದ್ಯೋಗಿಗಳು ಮರಗೆಲಸವನ್ನು ಮಾಡುತ್ತಿದ್ದಾರೆ. ಮರದ ಕೆತ್ತನೆ ಮಾಡಲು ತಮಿಳುನಾಡಿನ ಕಲಾವಿದರನ್ನು ನೇಮಿಸಿಕೊಳ್ಳಲಾಗಿದೆ. ಹಿತ್ತಾಳೆ ಸಾಮಾನುಗಳನ್ನು ಮೊರಾದಾಬಾದ್‌ನಿಂದ ತರಲಾಗಿದ್ದು ಮತ್ತು ಮುಖ್ಯ ರಚನೆಯಲ್ಲಿ ಬಳಸಬೇಕಾದ ಚಿನ್ನ ಮತ್ತು ತೇಗದ ಮರವನ್ನು ಮಹಾರಾಷ್ಟ್ರದಿಂದ ಪಡೆಯಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಂದ ಕಲಾವಿದರ ಶ್ರಮ ಆಯೋಧ್ಯಯ ರಾಮಮಂದಿರ ನಿರ್ಮಾಣದಲ್ಲಿದೆ. ಇವರೆಲ್ಲರ ಶ್ರಮದ ಫಲದಿಂದ ಮಂದಿರ ಸುಂದರವಾಗಿ ನಿರೀಕ್ಷೆಯಂತೆ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ 2020ರ ಆಗಸ್ಟ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿದರು. ದೇವಸ್ಥಾನದ ನೆಲಮಹಡಿ, ಗರ್ಭಗುಡಿಯ ಸ್ಥಳ ಹಾಗೂ ರಾಮ ಲಲ್ಲಾ ವಿಗ್ರಹವನ್ನು ಇರಿಸುವ ಸ್ಥಳವು ಸದ್ಯ ಸಿದ್ಧವಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿ ಆವರಣದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸೇರಿದ ಆರು ದೇವಾಲಯಗಳನ್ನು ನಿರ್ಮಿಸಲಾಗಿದೆ. ಈ ಆರು ದೇವತೆಗಳ ದೇವಾಲಯಗಳನ್ನು ರಾಮಮಂದಿರದ ಹೊರವಲಯದಲ್ಲಿ ನಿರ್ಮಿಸಲಾಗಿದೆ. ರಾಮನ ಪೂಜಿಸುವುದರೊಂದಿಗೆ ಈ ದೇವತೆಗಳನ್ನು ಪೂಜಿಸುವುದೂ ಕೂಡ ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾಗಿದೆ.
ಇನ್ನೂ ಅಯೋಧ್ಯ ರಾಮ ಮಂದಿರ ನಿರ್ಮಾಣದ ಸ್ಥಳದಲ್ಲಿ ಮಣ್ಣು ಅಸ್ಥಿರವಾಗಿರುವುದರಿಂದ ಗಟ್ಟಿ ಅಡಿಪಾಯವನ್ನು ಹಾಕಲಾಗಿದೆ. 400 ಅಡಿ ಮತ್ತು 300 ಅಡಿವರೆಗೂ 50 ಅಡಿ ಆಳದ ಗುಂಡಿಯನ್ನು ತೆಗೆದು 12 ಪದರಗಳಲ್ಲಿ ಕಟ್ಟಡ ಸಾಮಗ್ರಿ, ಸಣ್ಣ ಕಲ್ಲುಗಳು ಮತ್ತು ಬೂದಿಯಿಂದ ಸಂಕ್ಷೇಪಿಸಲಾದ ಸಿಮೆಂಟ್ ಅನ್ನು ತುಂಬಿಸಲಾಗಿದೆ.












Click it and Unblock the Notifications