ರಾಖಿ ಸಾವಂತ್ ಪತಿ ಆದಿಲ್‌ಗೆ ಮತ್ತೊಂದು ಸಂಕಷ್ಟ: ಮೈಸೂರಿನಲ್ಲಿ ಎಫ್‌ಐಆರ್!
ಇರಾನ್ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮೈಸೂರಿನಲ್ಲಿ ರಾಖಿ ಸಾವಂತ್ ಅವರ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಆದಿಲ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇರಾನ್ ಯುವತಿಯೊಬ್ಬಳು ಆದಿಲ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ.
ರಾಖಿ ಸಾವಂತ್ ದಾಖಲಿಸಿರುವ ವಂಚನೆ ಪ್ರಕರಣದಲ್ಲಿ ಆದಿಲ್ ಈಗಾಗಲೇ ಜೈಲು ಸೇರಿದ್ದಾನೆ. ಪ್ರಸ್ತುತ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಆದಿಲ್ ವಿರುದ್ಧ ಇದು ಎರಡನೇ ಎಫ್‌ಐಆರ್ ದಾಖಲಾಗಿದೆ. ಬಾಲಿವುಡ್ ಖ್ಯಾತ ನಟಿ ರಾಖಿ ಸಾವಂತ್ ಗೆ ವರದಕ್ಷಿಣೆ ಕಿರುಕುಳ ನೀಡಿ ಜೈಲು ಪಾಲಾಗಿರುವ ಆದಿಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಆದಿಲ್ ಖಾನ್ ವಿರುದ್ಧ ಎಫ್ಐಆರ್
ಮೈಸೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾಗ ಮದುವೆಯ ನೆಪದಲ್ಲಿ ಆದಿಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾಳೆ. ಐದು ತಿಂಗಳ ಹಿಂದೆ ಆತನನ್ನು ಮದುವೆಯಾಗುವಂತೆ ಬೇಡಿಕೆ ಇಟ್ಟಾಗ ಅದನ್ನು ತಿರಸ್ಕರಿಸಿದ ಆದಿಲ್ ಅನೇಕ ಹುಡುಗಿಯರೊಂದಿಗೆ ಇದೇ ರೀತಿಯ ಸಂಬಂಧವನ್ನು ಹೊಂದಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಜೊತೆಗೆ ಆದಿಲ್ ತನಗೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದಿಲ್ ನೊಂದಿಗೆ ತಾನು ಆತ್ಮೀಯವಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಲಾಗಿದೆ. ಇದೀಗ ಐಪಿಸಿ ಸೆಕ್ಷನ್ 376, 417,420, 504 ಮತ್ತು 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಾಖಿ ಮತ್ತು ಆದಿಲ್ ಸಂಬಂಧ
ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಆದಿಲ್ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ ರಾಖಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಆಕೆಯ ದೂರಿನ ಮೇರೆಗೆ ಆದಿಲ್ ನನ್ನು ಓಶಿವಾರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ಕರೆಸಲಾಯಿತು ಮತ್ತು ನಂತರ ಬಂಧಿಸಲಾಯಿತು. ಅಂದಿನಿಂದ ರಾಖಿ ಆದಿಲ್ ವಿರುದ್ಧ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಇದೇ ವೇಳೆ ರಾಖಿ ಆದಿಲ್ ಅವರನ್ನು ವಿವಾಹವಾಗಿರುವುದಾಗಿ ಪ್ರಕಟಿಸಿದರು. ಇದಾದ ಕೆಲ ದಿನಗಳ ನಂತರ ಆದಿಲ್ ವಿವಾಹೇತರ ಸಂಬಂಧ ಹೊಂದಿರುವುದಾಗಿ ವರದಿಯಾಗಿದ್ದು, ಇದೀಗ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಮಾಧ್ಯಮಗಳ ಮುಂದೆ ಆಕೆ ಒಪ್ಪಿಕೊಂಡಿದ್ದಾಳೆ.

ಬ್ರೈನ್ ಟ್ಯೂಮರ್ ನಿಂದ ರಾಖಿ ತಾಯಿ ನಿಧನ
ಇನ್ನೊಂದು ವಿಷಯವೆಂದರೆ ರಾಖಿ ಸಾವಂತ್ ಅವರ ತಾಯಿ ಜಯಾ ಜನವರಿ 28 ರಂದು ಮುಂಬೈನಲ್ಲಿ ನಿಧನರಾದರು. ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಾಖಿ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದರು. ತನ್ನ ತಾಯಿಯೊಂದಿಗೆ ಕಳೆದ ಕೆಲವು ನಿಮಿಷಗಳ ವಿಡಿಯೊವನ್ನು ಸಹ ಬಿಡುಗಡೆ ಮಾಡಿದ್ದರು.
ರಾಖಿ ಕೊನೆಯದಾಗಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ಈಗ ಹಲವಾರು ವರ್ಷಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರು ಈ ಹಿಂದೆ ಚಲನಚಿತ್ರಗಳು ಮತ್ತು ದೂರದರ್ಶನ ಎರಡರಲ್ಲೂ ಕೆಲಸ ಮಾಡಿದ್ದಾರೆ.

ಏನಿದು ಪ್ರಕರಣ?
ಕಳೆದ 5 ವರ್ಷಗಳ ಹಿಂದೆ ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮೆಸಿ ಮಾಡಲು ಬಂದ ಇರಾನ್ ದೇಶದ ವಿದ್ಯಾರ್ಥಿನಿಯನ್ನು ಆದಿಲ್ ಖಾನ್ ಪರಿಚಯ ಮಾಡಿಕೊಂಡಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ವಿವಿ ಪುರಂನಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಆತ ಮೋಸ ಮಾಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ವಿದ್ಯಾ ರ್ಥಿನಿಗೆ ಬೆದರಿಕೆ, ಅತ್ಯಾಚಾರ, ವಂಚನೆ ಮಾಡಿದ ಆರೋಪ ಆದಿಲ್ ಖಾನ್ ಮೇಲಿದೆ. ಸದ್ಯ ಈ ಬಗ್ಗೆ ತನಿಖೆ ಚುರುಕುಗೊಂಡಿದ್ದು ಆದಿಲ್‌ಗೆ ಒಂದಾದ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ.












Click it and Unblock the Notifications