ಜಮ್ಮುವಿನಲ್ಲಿ ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ ಉಗ್ರರು: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ
ಶ್ರೀನಗರ, ಡಿಸೆಂಬರ್ 2: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.
ಘಟನೆಯಲ್ಲಿ ಗಾಯಗೊಂಡ ಇತರ ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಕೆಲವರನ್ನು ವಿಮಾನದಲ್ಲಿ ಜಮ್ಮುವಿಗೆ ರವಾನಿಸಲಾಗಿದೆ.
ನಿನ್ನೆ ಸಂಜೆ ಡಾಂಗ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮೂರು ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ ಮೆಹಮೂದ್ ಎಚ್ ಬಜಾರ್ ಅವರು ನಾಲ್ವರ ಸಾವನ್ನು ದೃಢಪಡಿಸಿದ್ದಾರೆ. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿಗೆ ವಿಮಾನದಲ್ಲಿ ರವಾನಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಮೃತರನ್ನು ದೀಪಕ್ ಕುಮಾರ್, ಸತೀಶ್ ಕುಮಾರ್ ಮತ್ತು ಪ್ರೀತಮ್ ಲಾಲ್ ಮತ್ತು ಶಿವಪಾಲ್ ಎಂದು ಗುರುತಿಸಲಾಗಿದೆ.
ಡಿಸೆಂಬರ್ 16 ರಂದು ಸೇನಾ ಶಿಬಿರದ ಹೊರಗೆ ಇಬ್ಬರು ಸಾವನ್ನಪ್ಪಿದ ನಂತರ ಕಳೆದ ಎರಡು ವಾರಗಳಲ್ಲಿ ರಾಜೌರಿ ಜಿಲ್ಲೆಯಲ್ಲಿ ನಾಗರಿಕ ಹತ್ಯೆಗಳ ಎರಡನೇ ಘಟನೆ ಇದಾಗಿದೆ.

ಡಾಂಗ್ರಿ ಗ್ರಾಮದ ಮುಖ್ಯಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ದಾಳಿಯನ್ನು ಪ್ರಮುಖ ಭದ್ರತಾ ಲೋಪ ಎಂದು ಕರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈಗಲೂ ಬೆದರಿಕೆಯ ಕರೆಗಳು ಬರುತ್ತಿದ್ದು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ದಾಳಿ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದೆ. ಘಟನೆಯನ್ನು ವಿರೋಧಿಸಿ ಮತ್ತು ಶೀಘ್ರ ಕ್ರಮಕ್ಕೆ ಆಗ್ರಹಿಸಿ ಇಂದು ಹಲವು ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಬಂದ್ ಕರೆಗೆ ಬಿಜೆಪಿ ಬೆಂಬಲ ನೀಡಿದೆ.
ರಜೌರಿ ಆಸ್ಪತ್ರೆಯ ಹೊರಗೆ ಜಮಾಯಿಸಿದ ಜನರ ಗುಂಪು ಪಾಕಿಸ್ತಾನ ಮತ್ತು ಅಮಾಯಕರನ್ನು ಕೊಂದ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಭದ್ರತಾ ಏಜೆನ್ಸಿಗಳ ವಿರುದ್ಧವೂ ಘೋಷಣೆಗಳು ಮೊಳಗಿವೆ.












Click it and Unblock the Notifications