Rajasthan Election 2023: ಕರ್ನಾಟಕದಂತೆಯೇ ರಾಜಸ್ಥಾನ ಬಿಜೆಪಿಯಲ್ಲೂ ಒಳಜಗಳ: ರಾತ್ರಿಯಿಡೀ ಸಭೆ ನಡೆಸಿದ ಅಮಿತ್ ಶಾ, ಜೆಪಿ ನಡ್ಡಾ
ಜೈಪುರ, ಸೆಪ್ಟೆಂಬರ್ 28: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸಿದ್ದತೆ ನಡೆಸುತ್ತಿವೆ. ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೈಪುರದಲ್ಲಿ ರಾತ್ರಿಯಿಡೀ ಸಭೆ ನಡೆಸಿದ್ದಾರೆ. ಕರ್ನಾಟಕದಂತೆಯೇ ರಾಜಸ್ಥಾನ ಬಿಜೆಪಿಯಲ್ಲಿನ ಒಳಜಗಳವನ್ನು ಶಮನ ಮಾಡುವ ನಿಟ್ಟಿನಲ್ಲಿ ಅವರು ಮಾತುಕತೆ ನಡೆಸಿದ್ದಾರೆ.
ಬುಧವಾರ ತಡರಾತ್ರಿ ಜೈಪುರ ಹೋಟೆಲ್‌ನಲ್ಲಿ ಆರಂಭಗೊಂಡ ಸಭೆಯು ಮಧ್ಯರಾತ್ರಿ 2 ಗಂಟೆವರೆಗೆ ನಡೆದಿದೆ ಎಂದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವರು ಮತ್ತು ಸಂಸದರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಧ್ಯಪ್ರದೇಶದ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿರುವ ಬಿಜೆಪಿ ಮೂವರು ಕೇಂದ್ರ ಸಚಿವರು ಮತ್ತು ನಾಲ್ಕು ಸಂಸದರನ್ನು ಕಣಕ್ಕಿಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಬಹುದು ಎಂದು ಬಿಜೆಪಿಯ ರಾಜಸ್ಥಾನ ಘಟಕದ ಮೂಲಗಳು ತಿಳಿಸಿವೆ. ಇತರ ಕೆಲವು ಸಂಸದರು ಕಣಕ್ಕಿಳಿಯಬಹುದು ಎಂದು ಹೇಳಲಾಗಿದೆ.

ಮುಂಬರುವ ಚುನಾವಣೆಯನ್ನು ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು. ಸಂಯೋಜಿತ ನಾಯಕತ್ವದ ವಿಧಾನವನ್ನು ಅನುಸರಿಸಬೇಕು. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಮುಖ್ಯವಲ್ಲ. ಪ್ರಾದೇಶಿಕ ನಾಯಕರ ಮಹತ್ವಾಕಾಂಕ್ಷೆಗಳಿಗಿಂತ ಪಕ್ಷದ ಮಹತ್ವಾಕಾಂಕ್ಷೆ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಬಿಜೆಪಿ ಹೈಕಮಾಂಡ್ ಸೂಚಿಸಿದೆ.
ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯಸಭಾ ಸದಸ್ಯ ಡಾ. ಕಿರೋಡಿ ಲಾಲ್ ಮೀನಾ, ಸಂಸದರಾದ ದಿಯಾ ಕುಮಾರ್, ರಾಜ್ಯವರ್ಧನ್ ರಾಥೋಡ್ ಮತ್ತು ಸುಖವೀರ್ ಸಿಂಗ್ ಜೌನ್‌ಪುರಿಯಾ ನಡುವೆ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಏರ್ಪಟ್ಟಿದೆ ಎಂದು ತಿಳಿದುಬಂದಿದೆ.
ಎರಡು ಬಾರಿ ಮುಖ್ಯಮಂತ್ರಿಯಾಗಿರುವ 70 ವರ್ಷದ ವಸುಂಧರಾ ರಾಜೆ ಅವರು ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರೂ ಸಹ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರನ್ನು ಪಕ್ಷವು ಕಡೆಗಣಿಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ವಸುಂದರಾ ರಾಜೇ ಅವರಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಬಲ ಪೈಪೋಟಿ ಒಡ್ಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ನಲ್ಲಿಯೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಸಚಿವ ಸಚಿನ್ ಪೈಲಟ್ ನಡುವೆ ಸಂಘರ್ಷ ಏರ್ಪಟ್ಟಿದೆ. ಆದರೆ, ಈ ಇಬ್ಬರು ನಾಯಕರ ನಡುವಿನ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಈ ಇಬ್ಬರು ನಾಯಕರ ನೇತೃತ್ವದಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಈ ವರ್ಷದ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ.












Click it and Unblock the Notifications