Rajasthan election 2023: ರಾಜಸ್ಥಾನದಲ್ಲಿ 7 ಸಂಸದರನ್ನು ಕಣಕ್ಕಿಳಿಸಿದ ಬಿಜೆಪಿ- ರಾಜ್ಯ ನಾಯಕರ ಅಸಮಾಧಾನ
ನವೆಂಬರ್ 23 ರಂದು ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ 41 ಅಭ್ಯರ್ಥಿಗಳ ಪೈಕಿ ಏಳು ಸಂಸದರು ಸೇರಿದ್ದಾರೆ. ಇದು ರಾಜ್ಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸಂಸದರನ್ನು ಕಣಕ್ಕಿಳಿಸಿರಲಿಲ್ಲ. ಹಾಲಿ ಶಾಸಕರು ಮತ್ತು ಸ್ಥಳೀಯ ಮುಖಂಡರನ್ನು ಬಿಜೆಪಿ ಅವಲಂಬಿಸಿತ್ತು. ಆದರೆ, ಈ ಬಾರಿ ಯಾವುದೇ ರಾಜ್ಯ ನಾಯಕರಿಗೆ ಬಿಜೆಪಿ ಮಣೆ ಹಾಕಿಲ್ಲವೆಂಬುದನ್ನು ಗಮನಿಸಬೇಕಿದೆ.

ರಾಜಸ್ಥಾನದ 25 ಲೋಕಸಭಾ ಸಂಸದರಲ್ಲಿ, ಬಿಜೆಪಿಯಿಂದ 24 ಮಂದಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಏಳು ಪ್ರಭಾವಿ ಸಂಸದರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಬಿಜೆಪಿ ಹೈಕಮಾಂಡ್‌ನ ಈ ನಿರ್ಧಾರವು ಹಲವಾರು ಸ್ಥಳೀಯ ಬಿಜೆಪಿ ನಾಯಕರಿಂದ ವಿರೋಧವನ್ನು ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಮೊದಲ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಸಂಸದರ ಪೈಕಿ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಪ್ರಮುಖರಾಗಿದ್ದಾರೆ. ದಿಯಾ ಕುಮಾರಿ ಅವರು ರಾಜ್‌ಸಮಂದ್‌ನಿಂದ ಮೊದಲ ಬಾರಿಗೆ ಸಂಸದರಾಗಿದ್ದಾರೆ. ಅವರು ಜೈಪುರ ರಾಜಮನೆತನದ ವಂಶಸ್ಥರು. 2019 ರಲ್ಲಿ ಸಂಸದರಾಗುವುದಕ್ಕೂ ಮೊದಲು ದಿಯಾ ಕುಮಾರಿ ಅವರು ಸವಾಯಿ ಮಾಧೋಪುರದಿಂದ ಬಿಜೆಪಿ ಶಾಸಕರಾಗಿದ್ದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕುಮಾರಿ ಅವರನ್ನು ಪಕ್ಷದಲ್ಲಿ ಉದಯೋನ್ಮುಖ ನಾಯಕಿ ಎಂದು ಪರಿಗಣಿಸಲಾಗಿದೆ. ಅವರನ್ನು ವಿದ್ಯಾದರ್ ನಗರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಇಲ್ಲಿ ಪ್ರಸ್ತುತ ಬಿಜೆಪಿ ಶಾಸಕರೇ ಇದ್ದಾರೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಎರಡು ಅವಧಿಯ ಸಂಸದ ಮತ್ತು ಮಾಜಿ ಕೇಂದ್ರ ರಾಜ್ಯ ಸಚಿವ ರಾಥೋಡ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರರೂ ಆಗಿದ್ದಾರೆ. ಪ್ರಸ್ತುತ ಕಾಂಗ್ರೆಸ್ ವಶದಲ್ಲಿರುವ ಜೈಪುರ ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಝೋತ್ವಾರಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲಾಗಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಅವರ ಆಪ್ತರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅವರ ಬದಲಾಗಿ ಸಂಸದರಿಗೆ ಟಿಕೆಟ್ ನೀಡಿರುವುದು ರಾಜೇ ಅವರನ್ನು ಕೆರಳಿಸಿದೆ ಎನ್ನಲಾಗಿದೆ.
ಪ್ರಸ್ತುತ ಕಾಂಗ್ರೆಸ್ ವಶದಲ್ಲಿರುವ ತಿಜಾರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯು ಸಂಸ ಬಾಬಾ ಬಾಲಕ್ ನಾಥ್ ಅವರನ್ನು ಕಣಕ್ಕಿಳಿಸಿದೆ. ಜುಂಜುನು ಸಂಸದ ನರೇಂದ್ರ ಕುಮಾರ್ ಅವರು ಮಾಂಡವಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇವರು ವಸುಂದರಾ ರಾಜೇ ಅವರಿಗೆ ಆಪ್ತರಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.
ಮಾಜಿ ಸಿಎಂ ವಸುಂದರಾ ರಾಜೇ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರೂ ನಾಯಕರ ಆಪ್ತರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಇದು ರಾಜಸ್ಥಾನದ ಬಿಜೆಪಿಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications