ರಾಜಸ್ಥಾನ ಗೆದ್ದು ಬೀಗಿದರೂ ಬಿಜೆಪಿಗೆ ‘ಜಡೆ ಜಗಳ’ದ್ದೇ ತಲೆನೋವು!
2024ರ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ರಣಕಹಳೆ ಮೊಳಗಿಸಿದೆ. ಅದರಲ್ಲೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಶಾಕ್ ನೀಡಿ ಬಿಜೆಪಿ ತನ್ನ ಬಾವುಟ ಹಾರಿಸಿದೆ. ಹೀಗೆ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆಮಾಡಿರುವ ಸಮಯದಲ್ಲೇ, ರಾಜಸ್ಥಾನದಲ್ಲಿ ಹೊಸ ಕಿರಿಕ್ ಶುರುವಾಗಿದೆ. 'ರಾಣಿ VS ರಾಣಿ' ಜಗಳವು ಬಿಜೆಪಿ ವರಿಷ್ಠರಿಗೆ ದೊಡ್ಡ ತಲೆನೋವು ತರುತ್ತಾ? ಅನ್ನೋ ಅನುಮಾನ ರಾಜಸ್ಥಾನ ರಾಜಕೀಯವನ್ನು ಕಾಡುತ್ತಿದೆ.
ನಿನ್ನೆ ಹೊರಬಿದ್ದ 4 ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಮಧ್ಯಪ್ರದೇಶ ರಾಜ್ಯದಲ್ಲಿ 160ಕ್ಕೂ ಹೆಚ್ಚು ಸ್ಥಾನ, ರಾಜಸ್ಥಾನದಲ್ಲಿ 115 ಸ್ಥಾನ, ಛತ್ತೀಸ್‌ಗಢ ರಾಜ್ಯದಲ್ಲಿ 54 ಸ್ಥಾನ ಪಡೆದಿದೆ ಬಿಜೆಪಿ. ಹೀಗೆ 3 ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ ಬಿಜೆಪಿ. ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದು ಬೀಗಿದ್ದು ಬಿಟ್ಟರೆ ಬಿಜೆಪಿ ಹವಾ ಬಲು ಜೋರಾಗಿದೆ. ಆದ್ರೆ ಇಲ್ಲಿ ರಾಜಸ್ಥಾನದ್ದೆ ದೊಡ್ಡ ತಲೆನೋವಾಗಿದ್ದು, ಬಿಜೆಪಿ ಕೇಂದ್ರ ನಾಯಕರು ಈ ರಾಜ್ಯದ ಸಮಸ್ಯೆ ಬಗೆಹರಿಸಲು ಪರದಾಡುತ್ತಿದ್ದಾರೆ!

ರಾಜಸ್ಥಾನದಲ್ಲಿ ರಾಣಿ VS ರಾಣಿ!
ನಿಮಗೆಲ್ಲಾ ಗೊತ್ತಿರುವಂತೆ, ರಾಜಸ್ಥಾನ ಬಿಜೆಪಿ ಘಟಕದಲ್ಲಿ ವಸುಂಧರಾ ರಾಜೇ ಅವರದ್ದೇ ಹವಾ. ಅದ್ರಲ್ಲೂ ರಾಜಸ್ಥಾನದಲ್ಲಿ 2 ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಮಹಿಳೆ ವಸುಂಧರಾ ರಾಜೇ. ಹೀಗೆ 2 ಬಾರಿ ಸಿಎಂ ಆಗಿದ್ದ ವಸುಂಧರಾ ರಾಜೇ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಜೊತೆಗೆ ಉತ್ತಮ ಸ್ನೇಹ ಇಟ್ಟುಕೊಂಡಿಲ್ಲ. ಅದ್ರಲ್ಲೂ ಕೇಂದ್ರ ಬಿಜೆಪಿ ನಾಯಕರ ಜೊತೆ ಸದಾ ವಸುಂಧರಾ ಕಿರಿಕ್ ಇದ್ದೇ ಇದೆ. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿಗೆ ಬಣ ಜಗಳ ದೊಡ್ಡ ತಲೆನೋವು ತರಿಸಿತ್ತು. ಈ ಎಲ್ಲಾ ಕಿರಿಕಿರಿ ನಡುವೆ, ಸಿಎಂ ಸ್ಥಾನಕ್ಕೆ ಯಾರನ್ನ ಸೆಲೆಕ್ಟ್ ಮಾಡೋದು? ಅನ್ನೋದೆ ಬಿಜೆಪಿಗೆ ಈಗ ತಲೆನೋವು ತರಿಸಿದೆ.
ರಾಜಸ್ಥಾನ ರಾಜಕೀಯದಲ್ಲಿ 'ಜಡೆ ಜಗಳ'?
ಅಷ್ಟಕ್ಕೂ ರಾಜಸ್ಥಾನ ರಾಜಕೀಯದಲ್ಲಿ ವಸುಂಧರಾ ರಾಜೇ ಅವರ ಬದ್ಧ ವಿರೋಧಿ ಅಂದ್ರೆ ಅದು ದಿಯಾ ಕುಮಾರಿ. ಸಂಸದೆ ಆಗಿದ್ದ ದಿಯಾ ಕುಮಾರಿ ಅವರು 2023ರ ರಾಜಸ್ಥಾನದ ವಿಧಾನಸಭೆ ಅಖಾಡದಲ್ಲಿ, ವಿದ್ಯಾಧರ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಹೀಗಿದ್ದಾಗ ದಿಯಾ ಕೂಡ ರಾಜಸ್ಥಾನ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದು ಒಳಜಗಳ ಶುರುವಾಗಿದೆ. ವಸುಂಧರಾ ರಾಜೇ ಅವರ ರೀತಿ ದಿಯಾ ಕುಮಾರಿ ಕೂಡ ರಾಜರ ಮನೆತನಕ್ಕೆ ಸೇರಿದವರು. ರಜಪೂತ ಸಮುದಾಯದ ನಾಯಕಿ ದಿಯಾ ಕುಮಾರಿ, ತಮ್ಮದೇ ಪಕ್ಷದ ವಸುಂಧರಾ ರಾಜೇಗೆ ಸವಾಲಾಗಿದ್ದಾರೆ ಎನ್ನಲಾಗಿದೆ.

ಇಬ್ಬರಲ್ಲಿ ಯಾರಿಗೆ ಸಿಎಂ ಪಟ್ಟ?
ಮೊದಲೇ ಹೇಳಿದಂತೆ ವಸುಂಧರಾ ಪ್ರಧಾನಿ ಮೋದಿ ಆಗಲಿ ಅಥವಾ ಅಮಿತ್ ಶಾ ಅವರಿಗೆ ಆತ್ಮೀಯರಲ್ಲ. ಹಾಗೇ ಮೊದಲಿನಿಂದ ಕಿರಿಕ್ ಮಾಡಿಕೊಂಡೇ ಬಂದಿದ್ರು. ಹೀಗಾಗಿ ಇದೀಗ ವಸುಂಧರಾ ಅವರಿಗೆ ಪಟ್ಟ ಕಟ್ಟುವುದು ಬೇಡ ಅನ್ನೋ ಚಿಂತನೆಯಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ದೊಡ್ಡ ಕಿರಿಕ್ ಶುರುವಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ, ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹಾಗೂ ಬಾಲಕ್ ನಾಥ್ ಕೂಡ ಆಕಾಂಕ್ಷಿಯಾಗಿದ್ದಾರೆ.
ಒಟ್ನಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 115 ಸ್ಥಾನಗಳನ್ನ ಗೆದ್ರೂ ಬಿಜೆಪಿಗೆ ಸಿಎಂ ಆಯ್ಕೆ ತಲೆನೋವಾಗಿದೆ. ಅದರಲ್ಲೂ ರಾಜಸ್ಥಾನ ರಾಜಕೀಯ ಅಖಾಡಕ್ಕೆ, ವಸುಂಧರಾ ರಾಜೇ ಅಗತ್ಯತೆ ತುಂಬಾ ಇದೆ. ಮುಂಬರುವ ಲೋಕಸಭೆ ಚುನಾವಣೆ ಕಾರಣ ಬಿಜೆಪಿ ನಾಯಕರು ಈಗ ಅಳೆದು & ತೂಗಿ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲವಾದರೆ ಇದು ಮತ್ತೊಂದು ಅಲ್ಲೋಲ & ಕಲ್ಲೋಲಕ್ಕೆ ದಾರಿ ಮಾಡಿಕೊಡಬಹುದು ಎಂಬ ಸಲಹೆ ಇದೀಗ ರಾಜಸ್ಥಾನದ ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದೆ.












Click it and Unblock the Notifications