Opinion Poll: ರಾಜಸ್ಥಾನ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಕಲರವ?
ನವದೆಹಲಿ, ಜುಲೈ 29: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಸೆಮಿಫೈನಲ್ ಎಂದೇ ಉಲ್ಲೇಖಿಸಲಾಗುತ್ತಿರುವ ಅಸೆಂಬ್ಲಿ ಚುನಾವಣೆಗಳಲ್ಲಿ ರಾಜಸ್ಥಾನ ಕೂಡಾ ಒಂದು. ಈ ವರ್ಷಾಂತ್ಯದೊಳಗೆ ಅಂದರೆ ಡಿಸೆಂಬರ್ ಎರಡನೇ ವಾರದೊಳಗೆ ಅಲ್ಲಿ ಚುನಾವಣೆ ನಡೆಯಬೇಕಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಅಶೋಕ್ ಗೆಹ್ಲೋತ್ ನೇತೃತ್ವದ ಕಾಂಗ್ರೆಸ್ ಪಕ್ಷ ಒಡೆದ ಮನೆ. ಮಧ್ಯ ಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದ ರೀತಿಯಲ್ಲೇ ರಾಜಸ್ಥಾನದಲ್ಲೂ ಸಚಿನ್ ಪೈಲಟ್, ಸಿಎಂ ಗೆಹ್ಲೋತ್ ವಿರುದ್ದ ಸಿಟ್ಟಾಗಿದ್ದರು. ಅದೆಷ್ಟೋ ಬಾರಿ ಇನ್ನೇನು ರಾಜಸ್ಥಾನ ಕಾಂಗ್ರೆಸ್ ಇಬ್ಬಾಗವಾಯಿತು ಎನ್ನುವಷ್ಟರಲ್ಲಿ ದೆಹಲಿ ಮುಖಂಡರು ತೇಪೆ ಹಾಕುತ್ತಿದ್ದರು.

ಆದರೆ, ಗೆಹ್ಲೋತ್ ಮತ್ತು ಪೈಲಟ್ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಕೈತಪ್ಪಿದ್ದ ರಾಜ್ಯವನ್ನು ಮತ್ತೆ ಉಳಿಸಿಕೊಳ್ಳುವುದು ಬಿಜೆಪಿಗೆ ಭಾರೀ ಮುಖ್ಯ, ಯಾಕೆಂದರೆ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ. ಈ ನಡುವೆ, ಚುನಾವಣೆಗೆ ಐದು ತಿಂಗಳ ಮುನ್ನ ಮತದಾರರ ನಾಡಿಮಿಡಿತ ಆಧರಿಸಿ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ.
ದೇಶದ ಪಶ್ಚಿಮ ಭಾಗದಲ್ಲಿರುವ ರಾಜಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಪ್ರತೀ ಚುನಾವಣೆಯಲ್ಲೂ ಮತದಾರ ಒಂದೇ ಪಕ್ಷದ ಮೇಲೆ ನಿಯತ್ತು ಮುಂದುವರಿಸುವುದು ಕಮ್ಮಿ. ಹಾಗಾಗಿ, ಬಿಜೆಪಿಗೆ ಈ ಬಾರಿ ಪೂರಕ ವಾತಾವರಣವಿದೆ ಎಂದು ಹೇಳಬಹುದಾಗಿದೆ, ಒಪಿನಿಯನ್ ಪೋಲ್ ಕೂಡಾ ಅದನ್ನೇ ಹೇಳುತ್ತಿದೆ.
ಐದು ವರ್ಷದ ಅಶೋಕ್ ಗೆಹ್ಲೋತ್ ಅಧಿಕಾರದ ಅವಧಿ
ಐದು ವರ್ಷದ ಅಶೋಕ್ ಗೆಹ್ಲೋತ್ ಅಧಿಕಾರದ ಅವಧಿ ಕಷ್ಟಕರವಾಗಿತ್ತು ಎಂದೇ ಹೇಳಬಹುದು. ಒಂದು ಕಡೆ, ಸಚಿನ್ ಪೈಲಟ್ ಬಂಡಾಯದ ಭೀತಿ, ಇನ್ನೊಂದು ಕಡೆ ಸರ್ಕಾರಕ್ಕೆ ತೀವ್ರ ಮುಜುಗರವನ್ನು ತಂದ ಪೇಪರ್ ಲೀಕ್ ಮತ್ತು ಪರೀಕ್ಷೆ ರದ್ದತಿ. ತಮ್ಮದೇ ಪಕ್ಷದ ಸಚಿವರೊಬ್ಬರಿಂದ ಸರ್ಕಾರ ತಲೆತಗ್ಗಿಸುವಂತೆ ಕೂಡಾ ಆಗಿತ್ತು. ಆ ಸಚಿವರನ್ನು ಸಿಎಂ ಸಚಿವ ಸ್ಥಾನದಿಂದ ಉಚ್ಚಾಟಿಸಿದ್ದರು.
ಎಬಿಪಿ-ಸಿವೋಟರ್ ಜಂಟಿ ಸರ್ವೇ
ಎಬಿಪಿ-ಸಿವೋಟರ್ ಜಂಟಿಯಾಗಿ ರಾಜಸ್ಥಾನ ಚುನಾವಣೆಯ ಸಂಬಂಧ ಸಮೀಕ್ಷೆಯನ್ನು ನಡೆಸಿದೆ. ಇದರ ಪ್ರಕಾರ ಬಿಜೆಪಿ ಇಲ್ಲಿ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಯಿದೆ. ಇನ್ನೂರು ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ ಯಾವುದೇ ಹೊಂದಾಣಿಕೆಯ ಅವಶ್ಯಕತೆಯಿಲ್ಲದೇ ಬಹುಮತದ ಹತ್ತಿರಕ್ಕೆ ಬಂದು ನಿಲ್ಲಲಿದೆ.
ಬಿಜೆಪಿಗೆ ಮತ್ತೆ ಅಧಿಕಾರ
ಸಮೀಕ್ಷೆಯ ಪ್ರಕಾರ ಬಿಜೆಪಿಗೆ 109-119 ಸ್ಥಾನ ಸಿಗುವ ಸಾಧ್ಯತೆಯಿದೆ, ಬಹುಮತಕ್ಕೆ ಇಲ್ಲಿ 101 ಸ್ಥಾನದ ಅವಶ್ಯಕತೆಯಿದೆ. ಇನ್ನು ಕಾಂಗ್ರೆಸ್ಸಿಗೆ ಸರ್ವೇರ ಪ್ರಕಾರ 78-88 ಸೀಟು ಲಭಿಸಲಿದೆ. ಇನ್ನು ಇತರರಿಗೆ ಒಂದರಿಂದ ಐದು ಸ್ಥಾನ ಸಿಗಬಹುದು ಎಂದು ಜಂಟಿ ಸರ್ವೇಯಲ್ಲಿ ಅಭಿಪ್ರಾಯ ಪಡಲಾಗಿದೆ.












Click it and Unblock the Notifications