Maharashtra Election 2024: ಎಂಎನ್‌ಎಸ್ ರಾಜ್ ಠಾಕ್ರೆ ಬಿಟ್ಟು ಹೋಗಲಿದೆ ರೈಲು!
ಮುಂಬೈ, ನವೆಂಬರ್ 25: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯೂ ಆರಂಭವಾಗಿದೆ. ಆದರೆ ಯಾವುದೇ ಪಕ್ಷಕ್ಕೆ ಸಹ ವಿರೋಧ ಪಕ್ಷದ ಸ್ಥಾನಮಾನ ಸಿಗುವಷ್ಟು ಸೀಟುಗಳು ಬಂದಿಲ್ಲ. ಚುನಾವಣೆಯಲ್ಲಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. ಮಹಾಯತಿ ಮೈತ್ರಿಕೂಟದ ಬಳಿ 230 ಶಾಸಕರ ಬಲವಿದೆ.
ಶನಿವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ)57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳಲ್ಲಿ ಜಯಗಳಿಸಿವೆ. ಮೂರು ಪಕ್ಷಗಳು ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ರಚನೆಯಾಗಲಿದ್ದು, ಮುಖ್ಯಮಂತ್ರಿ ಯಾರು ಎಂಬುದು ಸದ್ಯದ ಕುತೂಹಲ.

ರಾಜ್ ಠಾಕ್ರೆ ಬಿಟ್ಟು ಹೋಗಲಿದೆ ರೈಲು: ವಿಧಾನಸಭೆ ಚುನಾವಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಒಂದು ಸೀಟು ಗೆಲ್ಲಲು ವಿಫಲವಾಗಿದೆ. ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಸಹ ಸೋಲು ಕಂಡಿದ್ದಾರೆ. ಈ ಸೋಲಿನಿಂದಾಗಿ ಎಂಎನ್‌ಎಸ್ ಅಧಿಕೃತ ರಾಜಕೀಯ ಪಕ್ಷದ ಸ್ಥಾನಮಾನ ಮತ್ತು ಚುನಾವಣಾ ಚಿನ್ಹೆಯಾದ 'ರೈಲು' ಕಳೆದುಕೊಳ್ಳಲಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟಕ್ಕೆ ಬೆಂಬಲವನ್ನು ಎಂಎನ್ಎಸ್ ಘೋಷಣೆ ಮಾಡಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೇ 125 ಸೀಟುಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಒಂದೇ ಒಂದು ಸೀಟು ಗೆಲ್ಲಲು ಸಹ ಪಕ್ಷ ವಿಫಲವಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿ ಅನಂತ್ ಕಾಸ್ಲೆ ಚುನಾವಣಾ ಆಯೋಗದ ನಿಯಮಗಳನ್ನು ವಿವರಿಸಿದ್ದಾರೆ. ಭಾರತದ ಒಂದು ರಾಜಕೀಯ ಪಕ್ಷ ರಾಜಕೀಯ ಪಕ್ಷದ ಸ್ಥಾನಮಾನ, ಚಿನ್ಹೆ ಉಳಿಸಿಕೊಳ್ಳಲು ಇರುವ ನಿಯಮಗಳ ಮಾಹಿತಿ ನೀಡಿದ್ದಾರೆ.
ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿ ಮುಂದುವರೆಯಬೇಕಾದರೆ ಪಕ್ಷ ಕನಿಷ್ಠ ಒಂದು ಸೀಟು ಗೆದ್ದಿರಬೇಕು ಹಾಗೂ ಒಟ್ಟು ಮತದಾನ ಪ್ರಮಾಣದಲ್ಲಿ ಶೇ 8ರಷ್ಟು ಮತಗಳನ್ನು ಪಡೆದಿರಬೇಕು. ಇಲ್ಲವೇ ಎರಡು ಸೀಟುಗಳನ್ನು ಗೆದ್ದಿರಬೇಕು ಮತ್ತು ಶೇ 6ರಷ್ಟು ಮತಗಳನ್ನು ಪಡೆದಿರಬೇಕು. ಇಲ್ಲವಾದಲ್ಲಿ ಮೂರು ಸೀಟು ಗೆದ್ದಿರಬೇಕು ಮತ್ತು ಶೇ 3ರಷ್ಟು ಮತಗಳನ್ನು ಚುನಾವಣೆಯಲ್ಲಿ ಪಡೆದಿರಬೇಕು.
ಯಾವುದೇ ಪಕ್ಷ ಚುನಾವಣೆ ಬಳಿಕ ಈ ಯಾವುದೇ ಮಾನದಂಡವನ್ನು ತಲುಪಲು ವಿಫಲವಾದರೆ ಅದರ ರಾಜಕೀಯ ಪಕ್ಷದ ಮಾನ್ಯತೆ, ಚುನಾವಣಾ ಚಿನ್ಹೆ ಮಾನ್ಯತೆ ಕಳೆದುಕೊಳ್ಳಲಿದೆ. ಆದ್ದರಿಂದ ಈಗ 'ರೈಲು' ರಾಜ್ ಠಾಕ್ರೆ ಬಿಟ್ಟು ಹೋಗುವುದು ಖಚಿತವಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಎಂಎನ್‌ಎಸ್ ಶೇ 1.8ರಷ್ಟು ಮತಗಳನ್ನು ಪಡೆದಿದೆ. ಆದರೆ ಯಾವುದೇ ಸೀಟು ಗೆಲ್ಲಲು ವಿಫಲವಾಗಿದೆ. ಆದ್ದರಿಂದ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಇನ್ನು ರಾಜಕೀಯ ಪಕ್ಷವಾಗಿ ಉಳಿದಿರುವುದಿಲ್ಲ.
ಮಹಾರಾಷ್ಟ್ರ ಚುನಾವಣೆಯ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಿದ ಬಳಿಕ ಚುನಾವಣಾ ಆಯೋಗ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮತ್ತು ರಾಜ್ ಠಾಕ್ರೆಗೆ ಅವರ ಪಕ್ಷದ ಮಾನ್ಯತೆ ರದ್ದುಗೊಳಿಸುವ, ಚುನಾವಣಾ ಚಿನ್ಹೆ ವಾಪಸ್ ಪಡೆಯುವ ಬಗ್ಗೆ ನೋಟಿಸ್ ನೀಡಲಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸ್ಥಾನಗಳಲ್ಲಿ ಜಯಗಳಿಸಿವೆ. ಮೂರು ಪಕ್ಷಗು 'ಮಹಾಯುತಿ' ಮೈತ್ರಿಕೂಟದಲ್ಲಿಟ್ಟು ಮೈತ್ರಿಕೂಟ 230 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.
ಮತ್ತೊಂದು ಕಡೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್ 16, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಎನ್‌ಸಿಪಿ (ಶರದ್ ಪವಾರ್) 10 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಎಸ್‌ಪಿ 2 ಮತ್ತು 10 ಸ್ಥಾನಗಳಲ್ಲಿ ಇತರ ಪಕ್ಷಗಳು/ ಪಕ್ಷೇತರರು ಜಯಗಳಿಸಿದ್ದಾರೆ.












Click it and Unblock the Notifications