ಗಣೇಶ ಚತುರ್ಥಿ ಸಂಭ್ರಮಕ್ಕೆ ವರುಣ ಅಡ್ಡಿ: ಭಾರಿ ಮಳೆ, ಪ್ರವಾಹ ಭೀತಿ
ನವದೆಹಲಿ, ಆಗಸ್ಟ್ 22: ತಿಂಗಳಿಡೀ ಗಣೇಶ ಚತುರ್ಥಿಯ ಸಂಭ್ರಮಾಚರಣೆಗಳು ನಡೆಯುವ ಮಹಾರಾಷ್ಟ್ರ, ಒಂದೆಡೆ ಕೊರೊನಾ ವೈರಸ್ ಭೀತಿ ಮತ್ತೊಂದೆಡೆ ಮಳೆಯ ಅಬ್ಬರದಿಂದ ತತ್ತರಿಸಿದೆ. ದೇಶದ ಅನೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ಇದೆ. ವಿಪರೀತ ಮಳೆ ಮತ್ತು ನೆರೆ ಪರಿಸ್ಥಿತಿ ಜನರನ್ನು ಅತಂತ್ರರನ್ನಾಗಿದೆ.
ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಮಳೆರಾಯ ಅಡ್ಡಿಪಡಿಸುವ ಸಂಭವವಿದೆ. ಹವಾಮಾನ ಇಲಾಖೆಯು ಮುಂಬೈ, ಥಾಣೆ ಮತ್ತು ಕೊಂಕಣ ಪ್ರದೇಶಗಳಲ್ಲಿ ಶನಿವಾರ 'ಆರೇಂಜ್' ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಹವಾಮಾನ ವೈಪರೀತ್ಯದ ಯಾವುದೇ ಸನ್ನಿವೇಶವನ್ನು ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕಿದೆ.
ಶುಕ್ರವಾರ ಮುಂಬೈ ಉಪನಗರದಲ್ಲಿ ಬೆಳಿಗ್ಗೆ 8.30ರಿಂದ ಸಂಜೆ 5.30ರ ವೇಳೆಗೆ 45.7 ಮಿ.ಮೀ ಮಳೆ ದಾಖಲಾಗಿದೆ. ವಾಯು ಭಾರ ಕುಸಿತದಿಂದಾಗಿ ಚಂಡಮಾರುತದ ವಾತಾವರಣ ಸೃಷ್ಟಿಯಾಗಿದ್ದು, ಕೇಂದ್ರ ಮಹಾರಾಷ್ಟ್ರದ ಕೊಂಕಣ ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿಯಿಂದ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದೆ. 45-55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಅಪಾಯವಿದೆ ಎಂದು ಮುಂಬೈ ಹವಾಮಾನ ಇಲಾಖೆಯ ಹಿರಿಯ ನಿರ್ದೇಶಕಿ ಶುಭಾಂಗಿ ಭುಟೆ ತಿಳಿಸಿದ್ದಾರೆ. ಮುಂದೆ ಓದಿ.

ಉತ್ತರಾಖಂಡದಲ್ಲಿ ಮೂವರ ಜೀವಂತ ಸಮಾಧಿ
ವಿವಿಧ ರಾಜ್ಯಗಳ ಕೆಳಮಟ್ಟದ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿಯುವ ಸಂಭವವಿದೆ. ಒಡಿಶಾ, ಉತ್ತರಾಖಂಡ ಮತ್ತು ಗುಜರಾತ್ ರಾಜ್ಯಗಳಲ್ಲಿ ಮತ್ತಷ್ಟು ಮಳೆಯಾಗಬಹುದು. ಉತ್ತರಾಖಂಡದ ಪಿಥೋರಗಡ ಜಿಲ್ಲೆಯಲ್ಲಿ ಮನೆ ಕುಸಿದು ಒಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಭೂಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆಯ ಶವ ಶುಕ್ರವಾರ ಪತ್ತೆಯಾಗಿದೆ.

ಬಿಹಾರದಲ್ಲಿ 82.92 ಲಕ್ಷ ಜನರ ಪರದಾಟ
ಬಿಹಾರದಲ್ಲಿ ನೆರೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, 82.92 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 16 ಜಿಲ್ಲೆಗಳಲ್ಲಿನ 1.13 ಲಕ್ಷ ಜನರು ಪ್ರವಾಹದಿಂದ ಅತಂತ್ರರಾಗಿದ್ದಾರೆ. ಇದುವರೆಗೂ 27 ಮಂದಿ ಮಳೆಗೆ ಬಲಿಯಾಗಿದ್ದಾರೆ.

ಅಪಾಯದ ಮಟ್ಟ ಮೀರಿದ ಗೋದಾವರಿ
ತೆಲಂಗಾಣದ ಭದ್ರಾಡಿ-ಕೊಥಗುಡೆಮ್ ಜಿಲ್ಲೆಗಳಲ್ಲಿ ಭಾರಿ ಮಳೆಯ ಬಳಿಕ ನೂರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಭದ್ರಾಚಲಂ ಪಟ್ಟಣದ ಗೋದಾವರಿ ನದಿಯು ಅಪಾಯದ ಮಟ್ಟವಾದ 53 ಅಡಿಯನ್ನು ಮೀರಿ 54.90 ಅಡಿ ಎತ್ತರದಲ್ಲಿ ಹರಿಯುತ್ತಿದೆ.

ರಸ್ತೆಗಳು ಜಲಾವೃತ
ಗುಜರಾತ್‌ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸೇರಿದಂತೆ ಸುಮಾರು 131 ರಸ್ತೆಗಳು ಜಲಾವೃತವಾದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲವೆಡೆ ವಿಪರೀತ ಸಂಚಾರ ದಟ್ಟಣೆ ಉಂಟಾಗಿತ್ತು. ಒಡಿಶಾದಲ್ಲಿ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ನದಿಗಳ ನೀರಿನ ಮಟ್ಟ ಭಾರಿ ಏರಿಕೆಯಾಗಿದೆ. ಶುಕ್ರವಾರ ಇಬ್ಬರು ಮಳೆಗೆ ಬಲಿಯಾಗಿದ್ದಾರೆ.












Click it and Unblock the Notifications