Rain Forecast: 3 ದಿನಗಳ ಕಾಲ ಮಳೆ: ತಮಿಳುನಾಡು-ಆಂಧ್ರ ಕರಾವಳಿಯಲ್ಲಿ ರೆಡ್ ಅಲರ್ಟ್!
ಕಳೆದ ಕೆಲ ದಿನಗಳಿಂದ ದಕ್ಷಿಣ ಭಾರತದಲ್ಲಿ ಮಳೆ ಅರ್ಭಟ ಜೋರಾಗಿದೆ. ತಮಿಳುನಾಡಿನ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಗುರುವಾರ ಸುರಿದ ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಅನೇಕ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಶೇಷವಾಗಿ ಕರಾವಳಿ ತಮಿಳುನಾಡಿನಲ್ಲಿ ಡಿಸೆಂಬರ್ 1 ಮತ್ತು 4 ರ ನಡುವೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ದಕ್ಷಿಣ ರಾಜ್ಯಗಳಿಗೆ ಮಳೆಯಿಂದ ಇನ್ನೂ ಬಿಡುವು ಸಿಕ್ಕಿಲ್ಲ.

ಹವಾಮಾನ ಇಲಾಖೆ ಪ್ರಕಾರ, ಶುಕ್ರವಾರ ಚೆನ್ನೈ ಮತ್ತು ತಮಿಳುನಾಡಿನ ಇತರ ಐದು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಚೆಂಗಲ್ಪಟ್ಟು, ತಿರುವಳ್ಳೂರು, ನಾಗಪಟ್ಟಿಣಂ, ರಾಮನಾಥಪುರಂ ಮತ್ತು ಕಾಂಚೀಪುರಂನಲ್ಲಿ ಭಾರೀ ಮಳೆಯ ಸೂಚನೆಯನ್ನು ನೀಡಲಾಗಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿನ ದೃಶ್ಯಗಳು ಚೆನ್ನೈ ಮತ್ತು ತಮಿಳುನಾಡಿನ ಇತರ ಪ್ರದೇಶಗಳಲ್ಲಿ ಅಧಿಕ ಮಳೆ ಸುರಿಯುತ್ತಿರುವುದನ್ನು ತೋರಿಸುತ್ತವೆ. ಜನರು ರೈನ್‌ಕೋಟ್‌ಗಳನ್ನು ಧರಿಸಿ ಅಥವಾ ಛತ್ರಿಗಳನ್ನು ಹಿಡಿದು ಜಲಾವೃತವಾದ ಬೀದಿಗಳಲ್ಲಿ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಅದಾಗ್ಯೂ ಚೆನ್ನೈ ಮತ್ತು ಇತರ ಜಿಲ್ಲೆಗಳಲ್ಲಿ ಶುಕ್ರವಾರ ಯಾವುದೇ ಶಾಲೆಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ಶಿಕ್ಷಣ ಸಂಸ್ಥೆಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು.
ಇತ್ತ ಚೆಂಬರಂಬಕ್ಕಂ ಸರೋವರದಿಂದ ನೀರು ಬಿಡುಗಡೆಯಾದ ಕಾರಣ ಕಾಂಚೀಪುರಂ ಜಿಲ್ಲೆಯ ಅಡ್ಯಾರ್ ನದಿಯ ತಗ್ಗು ಪ್ರದೇಶಗಳು ಮತ್ತು ಆರು ಹಳ್ಳಿಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ತಮಿಳುನಾಡಿನ ರಾಜಧಾನಿ ನಗರದಲ್ಲಿ ಕಳೆದ ಕೆಲವು ವಾರಗಳಿಂದ ನಿರಂತರ ಮಳೆಯಿಂದಾಗಿ ರೆಡ್ ಹಿಲ್ಸ್ ಸರೋವರ ಎಂದು ಕರೆಯಲ್ಪಡುವ ಚೆನ್ನೈನ ಪುಝಲ್ ಸರೋವರ ಸಾಮಾರ್ಥ್ಯಕ್ಕಿಂತ ಹೆಚ್ಚು ಭರ್ತಿಯಾಗಿದೆ. ಗುರುವಾರ ಕೆರೆಯಿಂದ ಸುಮಾರು 389 ಕ್ಯೂಸೆಕ್ ನೀರು ಬಿಡಲಾಗಿದೆ.
ಬಾಂಗ್ಲಾದಲ್ಲಿ ಇತ್ತೀಚೆಗೆ ಚಂಡಮಾರುತ ಒಂದು ಭಾರಿ ವಿನಾಶ ಸೃಷ್ಟಿ ಮಾಡ್ತು ಕೇವಲ ಒಂದು ವಾರದ ಬಳಿಕ ಈಗ 'ಮೈಚಾಂಗ್' ಚಂಡಮಾರುತ ಪ್ರಭಾವ ಬೀರಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲೂ ಚಂಡಮಾರುತವಾಗಿ ಈ ಸುಳಿಗಾಳಿ ಬದಲಾಗುತ್ತಿದೆ. ಹಾಗೆಯೇ ಈ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದು ಡಿಸೆಂಬರ್ 3ರ ಸುಮಾರಿಗೆ ಸೈಕ್ಲೋನಿಕ್ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ. ನಂತರ ವಾಯುವ್ಯಕ್ಕೆ ಚಲಿಸುತ್ತದೆ ಮತ್ತು ಡಿಸೆಂಬರ್ 4 ರಂದು ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಯನ್ನು ಸೈಕ್ಲೋನಿಕ್ ಚಂಡಮಾರುತವಾಗಿ ತಲುಪುತ್ತದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಗುರುವಾರ ಕೆಲ ಸ್ಥಳಗಳಿಗೆ ಭೇಟಿ ನೀಡಿ ಚೆನ್ನೈನ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇಲ್ಲಿ ರಾಜ್ಯದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಅವರು ಚೆನ್ನೈ ಕಾರ್ಪೊರೇಷನ್ ಪ್ರಾರಂಭಿಸಿದ 1913 ಸಹಾಯವಾಣಿಯಲ್ಲಿ ನಿವಾಸಿಗಳ ಕರೆಗಳಿಗೆ ಉತ್ತರಿಸಿದರು ಮತ್ತು ಕುಂದುಕೊರತೆಗಳನ್ನು ವಿಳಂಬವಿಲ್ಲದೆ ಪರಿಹರಿಸಲು ಇಲಾಖೆಗಳಿಗೆ ಸೂಚಿಸಿದರು.
IMD ಡಿಸೆಂಬರ್ 2 ಮತ್ತು 4ರ ನಡುವೆ ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಮತ್ತು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ಡಿಸೆಂಬರ್ 3 ಮತ್ತು 4 ರವರೆಗೆ ಆರೆಂಜ್ ಅಲರ್ಟ್ ನೀಡಿದೆ. ಆಂಧ್ರಪ್ರದೇಶದ ರಾಯಲಸೀಮಾಕ್ಕೂ ಇದೇ ರೀತಿಯ ಎಚ್ಚರಿಕೆ ನೀಡಲಾಗಿದೆ. ಇಂದು ಕೇರಳ, ಮಾಹೆ, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.












Click it and Unblock the Notifications