Rain Alert: ದೇಶದ ಹಲವೆಡೆ ಮಳೆ ನರ್ತನ, ಉರಿ ಉರಿ ಬಿಸಿಲು, ಗಢಗಢ ನಡುಕ
ದೆಹಲಿ ಜನವರಿ 26: ದೇಶದಲ್ಲಿನ ಹವಮಾನ ಬದಲಾವಣೆಗೆ ಜನ ಹೈರಾಣಾಗಿದ್ದಾರೆ. ಕೆಲ ರಾಜ್ಯಗಳಲ್ಲಿ ಮಳೆಯ ಅರ್ಭಟ ಜೋರಾಗಿದ್ದರೆ ಇನ್ನೂ ಕೆಲವೆಡೆ ಉರಿ ಉರಿ ಬಿಸಿಲು ಮೈ ಸುಡುತ್ತಿದೆ. ಮತ್ತೆ ಕೆಲವು ಕಡೆ ನಡುಕ ಹುಟ್ಟಿಸುವ ಚಳಿಗೆ ಜನ ಮನೆಬಿಟ್ಟು ಹೊರಬರಲು ಹಿಂದೇಟಾಕುವಂತಹ ವಾತಾವರಣವಿದೆ. ಇದೆಲ್ಲವನ್ನೂ ಮೀರಿ ಮನೆಯಿಂದ ಹೊರಬರುವ ಜನರಿಗೆ ದಟ್ಟ ಮಂಜಿನಿಂದ ರಸ್ತೆ ಕಾಣದೆ ಕಿರಿ ಕಿರಿಯುಂಟಾಗಿದೆ.
ಹೀಗೆ ದೇಶದಲ್ಲಿ ಅಧಿಕ ಚಳಿ, ಬಿಸಿಲು, ಮಳೆ ಒಂದೇ ದಿನದಲ್ಲಿ ಸಂಭವಿಸುತ್ತಿದ್ದು ಜನ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ. ಬೆಳಿಗ್ಗೆ ಮನೆ ಬಿಟ್ಟು ಹೊರಬರುವಾಗ ಸ್ವಟರ್, ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಬರುವ ಜನ ಮದ್ಯಾಹ್ನದ ಬಿಸಿಲಿಗೆ ಸುಸ್ತಾಗಿ ಹೋಗುತ್ತಿದ್ದಾರೆ.

ಉತ್ತರ ಭಾರತದಾದ್ಯಂತ ನಿತ್ಯ ವಿಪರೀತ ಚಳಿ, ದಟ್ಟವಾದ ಮಂಜು ಆವರಿಸಿರುತ್ತದೆ. ಜೊತೆಗೆ ಹಲವು ರಾಜ್ಯಗಳಲ್ಲಿ ಶೀತಗಾಳಿಯೂ ಮುಂದುವರಿದಿದೆ. ಈ ನಡುವೆ ಜನವರಿ 26 ಮತ್ತು 27 ರಂದು ದಟ್ಟವಾದ ಮಂಜು ಆವರಿಸಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮಂಜಿನಾಟ ಮುಂದುವರೆದಿದೆ. ಒಂದು ಹೋಗಿ ಮಾಡುವ ಮಂಜು ವಾಹನ ಸವಾರರಿಗೆ ಕಿರಿ ಕಿರಿಯನ್ನುಂಟು ಮಾಡಿದೆ. ಇದರಿಂದಾಗಿ ವಾನ ಸಂಚಾರಕ್ಕೆ ಅಡೆತಡೆಯಾಗಿದ್ದು ಸವಾರರು ಪರದಾಡುವಂತಾಗಿದೆ. ಇದಲ್ಲದೆ ಹವಾಮಾನ ವೈಪರೀತ್ಯದಿಂದಾಗಿ ಜನವರಿ 31 ರ ವೇಳೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಹವಾಮಾನದ ಸ್ವರೂಪ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನೂ ದೇಶದೆಲ್ಲೆಡೆ ಇಂದು ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ಇದಕ್ಕಾಗಿ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ತಿಳಿಸಿದೆ.
ಇತ್ತ ದೇಶದ ಹಲವೆಡೆ ಲಘು ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶದ ಕರಾವಳಿ ಮತ್ತು ಒಡಿಶಾದಲ್ಲಿ ತುಂತುರು ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಜನವರಿ 27 ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಜನವರಿ 26 ರಿಂದ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದ್ದು ಜನವರಿ 26 ಮತ್ತು 28 ರ ನಡುವೆ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಸ್ಕೈಮೆಟ್ ಹವಾಮಾನ ವರದಿ ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ತೆಲಂಗಾಣ, ಮತ್ತು ಸಿಕ್ಕಿಂನಲ್ಲಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ದೇಶದಲ್ಲಿ ಹೆಚ್ಚು ಚಳಿ ಕಾಣಿಸಿಕೊಂಡಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳು ದಟ್ಟವಾದ ಮಂಜಿನೊಂದಿಗೆ ವಿಪರೀತ ಚಳಿಯನ್ನು ಈ ಬಾರಿ ಅನುಭವಿಸಿವೆ. ಜನವರಿ 25 ರಿಂದ 28 ರವರೆಗೆ ಹಿಮಾಲಯದ ಪಕ್ಕದ ಪ್ರದೇಶಗಳಲ್ಲಿ ಲಘು ಹಿಮಪಾತ ಮತ್ತು ಮಳೆಯಾಗಬಹುದು ಎನ್ನಲಾಗಿದೆ.
ಚಂಡೀಗಢ, ಪಂಜಾಬ್, ಹರಿಯಾಣ, ದೆಹಲಿಯ ವಿವಿಧ ಸ್ಥಳ, ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜನವರಿ 28 ರ ಬೆಳಿಗ್ಗೆಯವರೆಗೆ ದಟ್ಟವಾದ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ಹಂಚಿಕೊಂಡಿದೆ. ಇನ್ನೂ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಪಂಜಾಬ್ ನ ಹಲವೆಡೆ ದಟ್ಟ ಮಂಜು ವಾತಾವರಣ ಇರಲಿದೆ. ಉತ್ತರಾಖಂಡ, ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ, ಮಣಿಪುರ, ಪಶ್ಚಿಮ ಬಂಗಾಳ, ಉತ್ತರ ಮಧ್ಯಪ್ರದೇಶ, ಹಿಮಾಚಲ ಪ್ರದೇಶದ ಹಲವೆಡೆ ಮಂಜು ಕವಿದ ವಾತಾವರಣ ಇರಲಿದೆ.
ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯ ಸಾಧ್ಯತೆ ಇಲ್ಲ. ಮುಂದಿನ 3 ದಿನಗಳಲ್ಲಿ 2 ರಿಂದ 3 ಡಿಗ್ರಿಗಳಷ್ಟು ಹೆಚ್ಚಾಗಬಹುದು ಎಂದು ಐಎಂಡಿ ಹೇಳಿದೆ.












Click it and Unblock the Notifications