Heavy Rainfall Across India: ಭಾರತದಾದ್ಯಂತ ಸುರಿಯಲಿದೆ ಭಾರೀ ಮಳೆ- ಹವಾಮಾನ ಇಲಾಖೆ ನೀಡಿದ, ದಿನಾಂಕ, ಮಾಹಿತಿ, ವಿವರ
ನವದೆಹಲಿ, ಆಗಸ್ಟ್ 18: ದೇಶದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಮಳೆಯಿಂದ ತತ್ತರಿಸಿರುವ ಈಶಾನ್ಯ ರಾಜ್ಯಗಳಲ್ಲಿ ಆಗಸ್ಟ್ 21 ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪೂರ್ವ ಭಾರತದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ.
ಪಶ್ಚಿಮ ಬಂಗಾಳದ ಗಂಗಾ ಜಲಾನಯನ ಪ್ರದೇಶದಲ್ಲಿ ಮುಂದಿನ ಗುರುವಾರ ಸುದೀರ್ಘವಾದ ಮಳೆ ಬೀಳಲಿದೆ. ಒಡಿಶಾದಲ್ಲಿ ಶನಿವಾರದವರೆಗೆ, ಜಾರ್ಖಂಡದಲ್ಲಿ ಗುರುವಾರರಿಂದ ಶುಕ್ರವಾರದ ವರೆಗೆ ಮಳೆಯಾಗುವ ನಿರೀಕ್ಷೆ ಇದೆ.
ಆಗಸ್ಟ್ 21 ರಂದು ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.

ಒಡಿಶಾದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದ್ದು, ಪ್ರವಾಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಗುರುವಾರ ಹಾಗೂ ಶುಕ್ರವಾರ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ.
ಮಧ್ಯ ಭಾರತದಲ್ಲಿ, ಗುಡುಗು ಮಿಂಚು ಸಹಿತ ವ್ಯಾಪಕವಾದ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ.
'ಗುರುವಾರದಿಂದ ಶನಿವಾರದವರೆಗೆ ಛತ್ತೀಸ್‌ಗಢದಲ್ಲಿ, ಶುಕ್ರವಾರ, ಶನಿವಾರದಂದು ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಹಾಗು ಶನಿವಾರದಂದು ಪಶ್ಚಿಮ ಮಧ್ಯಪ್ರದೇಶದಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ' ಎಂದು ಐಎಂಡಿ ಹೇಳಿದೆ.

ಶುಕ್ರವಾರ ಛತ್ತೀಸ್‌ಗಢದಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ. ಈಶಾನ್ಯದಲ್ಲಿ ವ್ಯಾಪಕವಾದ ಮಳೆಯ ಜೊತೆಗೆ ಗುಡುಗು ಮತ್ತು ಮಿಂಚು ಸಂಭವಿಸಲಿದೆ ಎಂದು ಹೇಳಲಾಗಿದೆ.
'ಆಗಸ್ಟ್ 21 ರ ವರೆಗೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮಳೆ ಸುರಿಯುವ ನಿರೀಕ್ಷೆ ಇದೆ. ಅರುಣಾಚಲ ಪ್ರದೇಶದಲ್ಲಿ ಶನಿವಾರದಿಂದ ಆಗಸ್ಟ್ 21 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ' ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯುವ್ಯ ಭಾರತದಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚದುರಿದ ಮೋಡಗಳಿಂದ ಕೂಡಿದ ಮಳೆ ಸಾಧಾರಣವಾಗಿ ಸುರಿಯಬಹುದು ಎಂದು ಊಹಿಸಲಾಗಿದೆ.
ಉತ್ತರಾಖಂಡ, ಪೂರ್ವ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಆಗಸ್ಟ್ 21 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ದಕ್ಷಿಣ ಭಾರತದ ತಮಿಳು ನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ವ್ಯಾಪಕವಾದ ಮಳೆ ಸುರಿಯುವ ನಿರೀಕ್ಷೆ ಇದೆ. ಜೊತೆಗೆ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಗುರುವಾರ, ಶುಕ್ರವಾರದಂದು ಆಂಧ್ರಪ್ರದೇಶದ ಕರಾವಳಿಯಲ್ಲಿ ಮತ್ತು ಶುಕ್ರವಾರ, ಶನಿವಾರದಂದು ತೆಲಂಗಾಣದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.











Click it and Unblock the Notifications