ಪಾದಯಾತ್ರೆಯ ಮೂಲಕ ಮೋದಿ ವಿರುದ್ದ ರಾಹುಲ್
ನವದೆಹಲಿ, ಫೆ 6: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನಲ್ಲಿ ಪ್ರದೇಶ ಯುವ ಕಾಂಗ್ರೆಸ್ ಘಟಕ ಆಯೋಜಿಸಿರುವ ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.
ಗುಜರಾತ್ ಪ್ರದೇಶ ಯುವ ಕಾಂಗ್ರೆಸ್ ಘಟಕ ಆಯೋಜಿಸಿರುವ ' ವಿಕಾಸ್ ಖೋಜ್' ಪಾದಯಾತ್ರೆಯು ಶನಿವಾರ (ಫೆ 8) ದಕ್ಷಿಣ ಗುಜರಾತಿನ ಬರ್ದೋಲಿಯಲ್ಲಿ ಮುಕ್ತಾಯಗೊಳ್ಳಲಿದೆ. ಅಂದು ರಾಹುಲ್ ಗಾಂಧಿ ಪಾದಯತ್ರೆಯಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆಂದು ವರದಿಯಾಗಿದೆ.
ಈ ಪಾದಯಾತ್ರೆಯನ್ನು ಕಾಂಗ್ರೆಸ್ ಯುವ ಘಟಕ, ನರೇಂದ್ರ ಮೋದಿಯವರು ನರ್ಮದಾ ನದಿಯಲ್ಲಿ ಪ್ರತಿಷ್ಠಾಪಿಸಲು ಹೊರಟಿರುವ ಸರ್ದಾರ್ ಪಟೇಲ್ ಪುತ್ಥಳಿ ಕಾರ್ಯಕ್ರಮಕ್ಕೆ ವಿರುದ್ದವಾಗಿ ಹಮ್ಮಿಕೊಂಡಿದೆ. (ವಿಷಕಾರಿದ ಸೋನಿಯಾ ಮೇಲೆ ಕೆಂಡಕಾರಿದ ಮೋದಿ)

1928ರಲ್ಲಿ ವಲ್ಲಭಭಾಯಿ ಪಟೇಲ್ ನೇತೃತ್ವದಲ್ಲಿ ಗಾಂಧಿ ತತ್ವಕ್ಕೆ ವಿರುದ್ದವಾಗಿ ಬರ್ದೋಲಿ ಕಿಶಾನ್ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಅಂದಿನಿಂದ ಪಟೇಲ್ ಸರ್ದಾರ್ ಪಟೇಲ್ ಎಂದು ಹೆಸರುವಾಸಿಯಾದರು. ಮೋದಿ ಈಗ ಸರ್ದಾರ್ ಪಟೇಲ್ ಹೆಸರಿನಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲು ದೇಶಾದ್ಯಂತ ಜನತೆಯಿಂದ ಉಕ್ಕು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮೋದಿ ಅವರ ಈ ಕಾರ್ಯಕ್ರಮದ ವಿರುದ್ದ ಆಯೋಜಿಸಲಾಗಿರುವ ಪಾದಯಾತ್ರೆಯ ಅಂತಿಮ ಘಟ್ಟದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಯುವಕರನ್ನು ಕಾಂಗ್ರೆಸ್ ನತ್ತ ಸೆಳೆಯಲು ಸಂವಾದ ಕಾರ್ಯಕ್ರಮ ನಡೆಸುವ ಸಾಧ್ಯತೆಯಿದೆ. (ಪ್ರಣಬ್ ಗೆ 2 ಬಾರಿ ಪಿಎಂ ಸ್ಥಾನ ತಪ್ಪಿಸಿದ ಕಾಂಗ್ರೆಸ್)
ಪಾದಯಾತ್ರೆ ಅಂತಿಮ ಘಟ್ಟ ತಲುಪುವ ಐದು ಕಿಲೋಮೀಟರ್ ಮುನ್ನ ರಾಹುಲ್ ಇದರಲ್ಲಿ ಭಾಗಿಯಾಗಲಿದ್ದಾರೆ. 2005ರ ನಂತರ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಗುಜರಾತಿನಲ್ಲಿ ಪಾದಯಾತ್ರೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.












Click it and Unblock the Notifications