ಮಹಿಳಾ ಮೀಸಲಾತಿ ಮಸೂದೆ ದಿಕ್ಕು ತಪ್ಪಿಸುವ ತಂತ್ರ: ಇದನ್ನು ಜಾರಿಗೆ ತರಲು ಸರ್ಕಾರ ಬಯಸುತ್ತಿಲ್ಲ ಎಂದ ರಾಹುಲ್ ಗಾಂಧಿ
ನವದೆಹಲಿ, ಸೆಪ್ಟೆಂಬರ್ 22: ಮಹಿಳಾ ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ದಿಕ್ಕು ತಪ್ಪಿಸುವ ತಂತ್ರ ಎಂದು ಆರೋಪಿಸಿದರು.
'ಮಹಿಳಾ ಮೀಸಲಾತಿ ಮಸೂದೆ ಅದ್ಭುತವಾಗಿದೆ. ಆದರೆ, ಅದಕ್ಕೂ ಮೊದಲು ಜನಗಣತಿ ಮತ್ತು ಡಿಲಿಮಿಟೇಶನ್ ಮಾಡಬೇಕು ಎಂಬ ಅಡಿಟಿಪ್ಪಣಿಗಳನ್ನು ನೀಡಲಾಗಿದೆ. ಇವೆರಡೂ ಪ್ರಕ್ರಿಯೆಗಳಿಗೆ ಹಲವು ವರ್ಷಗಳು ಬೇಕು' ಎಂದು ರಾಹುಲ್ ಹೇಳಿದ್ದಾರೆ.

ಮನಸ್ಸು ಮಾಡಿದರೆ ಮಹಿಳಾ ಮೀಸಲಾತಿಯನ್ನು ಇಂದು ಜಾರಿಗೆ ತರಬಹುದು ಎಂಬುದು ಸತ್ಯವಾಗಿದೆ. ಇದು ಸಂಕೀರ್ಣವಾದ ವಿಷಯವಲ್ಲ. ಆದರೆ ಸರ್ಕಾರ ಅದನ್ನು ಮಾಡಲು ಬಯಸುವುದಿಲ್ಲ ಎಂಬ ಗಂಭೀರ ಆರೋಪವನ್ನು ರಾಹುಲ್ ಗಾಂಧಿ ಮಾಡಿದ್ದಾರೆ.
ಸರ್ಕಾರವು ಇದನ್ನು ದೇಶದ ಮುಂದೆ ಪ್ರಸ್ತುತಪಡಿಸಿದೆ. ಆದರೆ ಇದು ಇನ್ನು 10 ವರ್ಷಗಳ ನಂತರ ಜಾರಿಗೆ ಬರಲಿದೆ. ಇದು ಜಾರಿಗೆ ಬರುತ್ತದೋ, ಇಲ್ಲವೋ ಯಾರಿಗೂ ತಿಳಿದಿಲ್ಲ. ಇದು ದಿಕ್ಕು ತಪ್ಪಿಸುವ ತಂತ್ರವಾಗಿದೆ ಎಂದು ಹೇಳಿದ್ದಾರೆ.

ಇದು ನೋವಿನ ಸಂಗತಿಯಾಗಿದೆ. ಇದನ್ನು ಈಗಲೇ ಮಾಡಬೇಕಿತ್ತು. ನಾವು ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಮೀಸಲಾತಿ ಮಸೂದೆಯ ಅಡಿಯಲ್ಲಿ ಒಬಿಸಿ ಕೋಟಾವನ್ನು ಒದಗಿಸಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ನಿಮ್ಮನ್ನು ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಕ್ಕೆ ಬಿಜೆಪಿ ಮೊರೆ ಹೋಗಿದೆ. ಒಬಿಸಿ ಜನಗಣತಿ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಪ್ರತಿದಿನ ಒಬಿಸಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಏಳ್ಗೆಗಾಗಿ ಕೆಲಸ ಮಾಡುವುದಿಲ್ಲ. ಇದು ಏಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಹಾಜರಿದ್ದ 214 ಸದಸ್ಯರು ಮಹಿಳಾ ಮೀಸಲಾತಿ ಪರವಾಗಿ ಮತ ಚಲಾಯಿಸಿದ್ದಾರೆ. ಆ ನಂತರ ಸಂಸತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು.
ಮಸೂದೆ ಅಂಗೀಕಾರದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಸಂಸದರಿಗೆ ಧನ್ಯವಾದ ಅರ್ಪಿಸಿದರು.
ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಉಲ್ಲೇಖಿಸಲಾದ 128 ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಈಗ ಬಹುಪಾಲು ರಾಜ್ಯಗಳ ಅಸೆಂಬ್ಲಿಗಳ ಅನುಮೋದನೆ ಅಗತ್ಯವಿರುತ್ತದೆ.












Click it and Unblock the Notifications