ವಿಡಿಯೋ: ಮಿಮಿಕ್ರಿ ಮಾಡಿ ಮೋದಿಯನ್ನು ಅಣಕಿಸಿದ ರಾಹುಲ್ ಗಾಂಧಿ!
Recommended Video

ಮೊರೆನಾ, ಅಕ್ಟೋಬರ್ 17: ಪ್ರಧಾನಿ ನರೇಂದ್ರ ಮೋದಿಯವರ ಶೈಲಿಯಲ್ಲಿಯೇ ಮಾತನಾಡುವ ಮೂಲಕ ಅವರನ್ನು ಅಣಕಿಸಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ತಮ್ಮ ಚರ್ವಿತಚರ್ವಣ ಭಾಷಣದ ನಡುವೆ ಮಿಮಿಕ್ರಿ ಮಾಡುವ ಮೂಲಕ ಜನರ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಂಡರು.
'ನಾನು ಎಂದಿಗೂ ಈ ದೇಶದ ಪ್ರಧಾನಿಯಾಗಿಲ್ಲ... ಈ ದೇಶದ ಜನರ ಚೌಕಿದಾರ ನಾನು' ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನೇ ನೆನಪಿಸಿಕೊಂಡ ರಾಹುಲ್ ಗಾಂಧಿ, ಅದನ್ನು ಅವರದೇ ಧಾಟಿಯಲ್ಲಿ ಹೇಳಿದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.
|
ಮಿತ್ರೋ... ಎಂದು ಮೋದಿಯನ್ನು ಅಣಕಿಸಿದ ರಾಹುಲ್!
"ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 'ನಾನು ಈ ದೇಶದ ಪ್ರಧಾನಿಯಾಗಿಲ್ಲ, ಈ ದೇಶದ ಜನರ ಚೌಕಿದಾರನಾಗಿದ್ದೇನೆ' ಎಂದಿದ್ದರು. ಆದರೆ ಅವರು ಕೇವಲ ಉದ್ಯಮಿಗಳಿಗಷ್ಟೇ ಚೌಕಿದಾರರಾಗಿದ್ದಾರೆ. ಅನಿಲ್ ಅಂಬಾನಿಯವರನ್ನು ಅವರು ಅನಿಲ್ ಭಾಯಿ ಎಂದೇ ಕರೆಯುತ್ತಾರೆ, ನೀರವ್ ಮೋದಿ ಅವರನ್ನು ನೀರವ್ ಭಾಯಿ ಎಂದೇ ಕರೆಯುತ್ತಾರೆ... ಎಂದಾದರೂ ನಿಮ್ಮನ್ನು ಭಾಯಿ ಎಂದು ಕರೆದಿದ್ದಾರೆಯೇ?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ
ಇದಕ್ಕೂ ಮುನ್ನ ಮಧ್ಯಪ್ರದೇಶದ ದಾತಿಯಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, 'ಮೋದಿ ಹೃದಯದಲ್ಲಿ ಉದ್ಯಮಿಗಳಿಗಷ್ಟೇ ಜಾಗ. ಅಲ್ಲಿ ಬಡವರಿಗೆ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ, ಅಶಕ್ತರಿಗೆ ಜಾಗವಿಲ್ಲ. ಅವರ ಹೃದಯದಲ್ಲಿ ಉದ್ಯಮಿ 'ಭಾಯಿ'ಗಳಿಗೆ ಮಾತ್ರವೇ ಜಾಗವಿದೆ ಎಂದಿದ್ದರು.

ರಾಹುಲ್ ಗಾಂಧಿ ಟೆಂಪಲ್ ರನ್
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ, ಮಧ್ಯಪ್ರದೇಶದಲ್ಲೂ ರಾಹುಲ್ ಗಾಂಧಿಯವರು ಟೆಂಪಲ್ ರನ್ ಶುರುಮಾಡಿದ್ದು, ಈಗಾಗಲೇ ಹಲವು ದೇವಸ್ಥಾನಗಳನ್ನು ಸಂದರ್ಶಿಸಿದ್ದಾರೆ. ಈ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತವಿರೋಧಿ ಅಲೆ ಇರುವುದನ್ನು ಬಲ್ಲ ಕಾಂಗ್ರೆಸ್ ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಚುನಾವಣೆ ಯಾವಾಗ?
ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 116. ಮೂರು ಅವಧಿಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬಂದಿದ್ದು, ಇದೀಗ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.












Click it and Unblock the Notifications