Rahul Gandhi: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಚಾರದಲ್ಲಿ ಹೊಸ ವಿವಾದಕ್ಕೆ ಗುರಿಯಾದ ರಾಹುಲ್ ಗಾಂಧಿ!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್( 92 ವರ್ಷ) ಅವರು ಕಳೆದ ಗುರುವಾರ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಅವರ ಅಂತ್ಯಕ್ರಿಯೆ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ನಡೆ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ನಕ್ಕಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಇದೀಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ರಾಹುಲ್ ಗಾಂಧಿ ಅವರು ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹಾರಿದ್ದು, ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ. ಇಡೀ ದೇಶವೇ ಸಂಕಷ್ಟದಲ್ಲಿ ಇರುವಾಗ ಇದು ಬೇಕಿತ್ತಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ದೇಶದಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. 7 ದಿನಗಳ ಕಾಲ ದೇಶದಲ್ಲಿ ಯಾವುದೇ ಸರ್ಕಾರಿ ವಿಶೇಷ ಕಾರ್ಯಕ್ರಮಗಳನ್ನು ಆಚರಿಸುವಂತಿಲ್ಲ. ಯಾವುದೇ ವಿಶೇಷ ಕಾರ್ಯಕ್ರಮಗಳಿದ್ದರೂ ಅದನ್ನು ರದ್ದುಪಡಿಸಲಾಗುತ್ತದೆ. ಆದರೆ, ರಾಹುಲ್ ಗಾಂಧಿ ಅವರು ಈ ರೀತಿ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಮಾಡುವುದಕ್ಕೆ ವಿದೇಶಕ್ಕೆ ಹೋಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೌದು ರಾಹುಲ್ ಗಾಂಧಿ ಅವರು ಇದೀಗ ಹೊಸ ವರ್ಷ ಆಚರಣೆ ಮಾಡುವುದಕ್ಕೆ ವಿಯೆಟ್ನಾಂ ದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇಡೀ ದೇಶವೇ ಶೋಕಾಚರಣೆಯಲ್ಲಿ ಇರುವಾಗ ದೇಶದ ಪ್ರಮುಖ ಹಾಗೂ ಕಾಂಗ್ರೆಸ್‌ನ ನಾಯಕರು ನಿಧನರಾದಾಗ ಈ ರೀತಿ ಮಾಡುವುದು ಸರಿಯೇ ಅಂತ ಬಿಜೆಪಿ ಕೇಳಿದೆ.

ಅಲ್ಲದೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸಾವನ್ನು ರಾಹುಲ್ ಗಾಂಧಿ ಅವರು ಅವರ ರಾಜಕೀಯಕ್ಕೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಅವರು ಮಜಾ ಮಾಡುವುದಕ್ಕೆ ವಿದೇಶಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ಹೇಳಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯ ಐಟಿಸೆಲ್‌ನ ಮುಖ್ಯಸ್ಥರಾದ ಅಮಿತ್ ಮಾಳವೀಯ ಅವರು, ಡಾ. ಸಿಂಗ್ ಅವರ ಸಾವನ್ನು ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಿಂಗ್ ಅವರ ಬಗ್ಗೆ ಯಾವ ರೀತಿಯ ತಿರಸ್ಕಾರ ಭಾವನೆ ಇತ್ತು ಎನ್ನುವುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಗಾಂಧಿಗಳು ಹಾಗೂ ಕಾಂಗ್ರೆಸ್‌ನ ನಾಯಕರು ಸಿಖ್‌ನ ದ್ವೇಷಿಗಳು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದರ್ಬಾರ್ ಸಾಹಿಬ್ ಅನ್ನು ಅಪವಿತ್ರ ಮಾಡಿದ್ದರು ಎನ್ನುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಅತ್ಯಂತ ತೀಕ್ಷ್ಣವಾಗಿಯೇ ತಿರುಗೇಟು ನೀಡಿದೆ.
ಡಾ. ಮನಮೋಹನ ಸಿಂಗ್ ಅವರ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಕೇಂದ್ರ ಬಿಜೆಪಿ ತಕರಾರು ತೆಗೆದಿದೆ. ರಾಹುಲ್ ಗಾಂಧಿ ಅವರ ಖಾಸಗಿ ಪ್ರಯಾಣದಿಂದ ನಿಮಗೇನು ಸಮಸ್ಯೆ ಆಗುತ್ತಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಒಟ್ಟಾರೆ ದಿವಂಗತ ಡಾ. ಮನಮೋಹನ ಸಿಂಗ್ ಅವರ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ.












Click it and Unblock the Notifications