Putin India Visit: ಕೇಂದ್ರ ಸರ್ಕಾರ ಹಳೇಯ ಸಂಪ್ರದಾಯಕ್ಕೆ ಬ್ರೇಕ್: ರಾಹುಲ್ ಗಾಂಧಿ ಆಕ್ರೋಶ
Putin India Visit: ಉಕ್ರೇನ್ ರಷ್ಯಾ ಯುದ್ಧದ ಬಳಿಕ 2022ರ ನಂತರ ಮೊದಲ ಬಾರಿಗೆ ಭಾರತಕ್ಕೆ ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಭೇಟಿ ನೀಡುತ್ತಿದ್ದಾರೆ. ಇಂದು ಗುರುವಾರ ದೆಹಲಿಗೆ ಬರುವ ಅವರು ಎರಡು ದಿನ ಇಲ್ಲಿಯೇ ವಿವಿಧ ಕಾರ್ಯಕ್ರಮ, ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಪುಟಿನ್ ಪ್ರಮುಖ ಒಪ್ಪಂದಗಳಿಗೆ ಅಂಕಿತ ಹಾಕಲಿದ್ದಾರೆ. ಪುಟಿನ್ ಭೇಟಿ ವೇಳೆ 'ನಮೋ' ಸರ್ಕಾರ ಹಳೇಯ ಸಂಪ್ರದಾಯ ಮುರಿದಿದೆ ಎಂದು ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೆಹಲಿಗೆ ಆಗಮಿಸುವ ವ್ಲಾಡಿಮಿರ್ ಪುಟಿನ್ ಅವರ ಸ್ವಾಗತಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಅಪಾರ ಭದ್ರತೆ ಒದಗಿಸಲಾಗಿದೆ. ಈ ಮಧ್ಯೆ ವಿಪಕ್ಷ ನಾಯಕರಿಗೆ ರಷ್ಯಾ ಅಧ್ಯಕ್ಷ ಭೇಟಿಗೆ ಪ್ರಧಾನಿ ಮೋದಿ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವಿಚಾರಕ್ಕೆ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

ಭಾರತಕ್ಕೆ ಯಾವುದೇ ವಿದೇಶಿ ನಾಯಕರು, ಅಧ್ಯಕ್ಷರು ಆಗಮಿಸಿದರೆ ಕೇಂದ್ರ ಸರ್ಕಾರ ಅವರೊಂದಿಗೆ ವಿಪಕ್ಷ ನಾಯಕರ ಭೇಟಿಗೆ ಅವಕಾಶ ಮಾಡಿಕೊಡುವ ಸಂಪ್ರದಾಯ ಹಿಂದಿನಿಂದಲೂ ಇದೆ. ಆ ಸಂಪ್ರದಾಯಕ್ಕೆ ಇದೀಗ ಪ್ರಧಾನಿ ಮೋದಿ ಸರ್ಕಾರವು ಬ್ರೇಕ್ ಹಾಕಿದೆ. ವಿಪಕ್ಷಗಳ ನಾಯಕರು ಯಾರೋಬ್ಬರು ವಿದೇಶಿ ವ್ಯಕ್ತಿಗಳನ್ನು ಭೇಟಿ ಆಗದಂತೆ ಕೇಂದ್ರ ಬಿಜೆಪಿ ಸರ್ಕಾರ ಬಯಸುತ್ತಿದೆ ಎಂದರು.
ಮಾಜಿ ಅಟಲ್ ಬಿಹಾರಿ ವಾಜಪೇಯಿ ಕಾಲದಿಂದ ಹಿಡಿದು ಮನಮೋಹನ್ ಸಿಂಗ್ ಅವರ ಕಾಲದಲ್ಲೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ವಿಪಕ್ಷ ನಾಯಕರ ಜೊತೆಗೆ ವಿದೇಶ ಗಣ್ಯರ ಪ್ರತ್ಯೇಕ ಸಭೆ ಆಯೋಜನೆಗೆ ಬ್ರೇಕ್ ಹಾಕಿದೆ. ಹಳೇಯ ಸಂಪ್ರದಾಯ ಪಾಲಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಗುಡುಗಿದರು.
ದೆಹಲಿ ಭೇಟಿ: ಎರಡು ಪುಟಿನ್ ಏನು ಮಾಡ್ತಾರೆ?
ದೆಹಲಿಗೆ ಪುಟಿನ್ ಭೇಟಿ ಪ್ರಯುಕ್ತ ಐದು ಹಂತಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅವರಿಗಿಂತ ಮೊದಲೇ ರಷ್ಯಾ ಭದ್ರತಾ ಸಿಬ್ಬಂದಿ ಪಡೆ ದೆಹಲಿಗೆ ದೌಡಾಯಿಸಿ, ಎಲ್ಲವನ್ನು ಪರಿಶೀಲಿಸಿದೆ. ಎರಡು ದಿನಗಳ ಪುಟಿನ್ ಭೇಟಿ ಇದಾಗಿದ್ದು, ಗುರುವಾರ ಸಂಜೆ 6.30ಕ್ಕೆ ದೆಹಲಿಗೆ ವಿಮಾನದಲ್ಲಿ ಆಗಮಿಸುತ್ತಾರೆ. ಅವರೊಂದಿಗೆ ವಿಶೇಷ ಐಶಾರಾಮಿ ಹಾಗೂ ಅತ್ಯಂತ ಸುರಕ್ಷತೆಯ ಕಾರು ಸಹ ದೆಹಲಿಗೆ ಆಗಮಿಸಿದೆ. ಪುಟಿನ್ ಅದರಲ್ಲಿಯೇ ಓಡಾಡಲಿದ್ದಾರೆ.
ಈ ಎರಡು ದಿನ ಪುಟಿನ್ ಅವರು ಪ್ರಧಾನಿ ಮೋದಿ ಜೊತೆಗೆ ನಿರ್ಣಾಯಕ ಸಭೆಗಳನ್ನು ನಡೆಸಲಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯದ ಸಂಬಂಧ, ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ. ರಾತ್ರಿ ಪ್ರಧಾನಿ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹತ್ವ ನಿರ್ಧಾರ ಕೈಗೊಳ್ಳುವ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಕೈಗಾರಿಕೆ, ಶಿಕ್ಷಣ, ಆರ್ಥಿಕ ಹಾಗೂ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆ ಇದೆ.
ನಾಳೆ ಶುಕ್ರವಾರ (ಡಿ.5) ರಾಜ್ ಘಾಟ್‌ಗೆ ನಂತರ ಹೈದರಾಬದ್ ಹೌಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದ್ದು, ಬಳಿಕ ಪ್ರಧಾನಿ ಮೋದಿ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ರಾಷ್ಟ್ರಪತಿ ಅವರೊಂದಿಗಿನ ಭೋಜನಕೂಟದಲ್ಲಿ ಭಾರತೀಯ ಸಾಂಪ್ರದಾಯಿಕ ಮತ್ತು ವಿಶಿಷ್ಟ ತಿನಿಸುಗಳನ್ನು ಸವಿಯಲಿದ್ದಾರೆ.












Click it and Unblock the Notifications