ರಾಹುಲ್ ಗಾಂಧಿ ಬೆಂಗಾವಲು ಪಡೆ ಕಾರು ಕಾರುಗಳ ನಡುವೆಯೇ ಸರಣಿ ಅಪಘಾತ: ವಿಪಕ್ಷ ನಾಯಕ ಗ್ರೇಟ್ ಎಸ್ಕೇಪ್
ಉತ್ತರ ಪ್ರದೇಶ: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆಯ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದಿದೆ. ಸೋಮವಾರ ಬೆಳಿಗ್ಗೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯಲ್ಲಿಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ರಾಹುಲ್ ಗಾಂಧಿ ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯೊಂದರ ವಿಚಾರಣೆಗಾಗಿ ರಾಹುಲ್ ಸುಲ್ತಾನ್‌ಪುರ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಈ ಅನಿರೀಕ್ಷಿತ ಘಟನೆ ನಡೆದಿದೆ. ಈ ಘಟನೆಯು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರ ನಡುವೆ ಕೆಲಕಾಲ ತೀವ್ರ ಆತಂಕವನ್ನ ಸೃಷ್ಟಿಸಿತ್ತು.

ಬೆಂಗಾವಲು ಪಡೆಯ ವಾಹನಗಳ ಸರಣಿ ಅಪಘಾತಕ್ಕೆ ಕಾರಣವೇನು?
ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 10.15ರ ಸುಮಾರಿಗೆ ಈ ರಸ್ತೆ ಅಪಘಾತ ನಡೆದಿದೆ. ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ ಮುಂಭಾಗದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದ ಖಾಸಗಿ ವಾಹನವೊಂದು ಚಲಿಸುತ್ತಿತ್ತು. ಆ ವಾಹನದ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿದ್ದ ಕಾರಣ, ಮುಂಭಾಗದ ವಾಹನ ಬ್ರೇಕ್ ಹಾಕುತ್ತಿದ್ದಂತೆ ಅದರ ಹಿಂದೆಯೇ ಬರುತ್ತಿದ್ದ ಬೆಂಗಾವಲು ಪಡೆಯ ಇತರ ಪೊಲೀಸ್ ಹಾಗೂ ಭದ್ರತಾ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿವೆ.
ಈ ಸರಣಿ ಅಪಘಾತದಲ್ಲಿ ವಾಹನಗಳ ಮುಂಭಾಗ ಮತ್ತು ಹಿಂಭಾಗಕ್ಕೆ ಸಣ್ಣಪುಟ್ಟ ಹಾನಿಯಾಗಿದ್ದರೂ, ಯಾವುದೇ ಪ್ರಾಣಾಪಾಯ ಅಥವಾ ಯಾರಿಗೂ ಗಂಭೀರ ಗಾಯಗಳಾದ ವರದಿಯಾಗಿಲ್ಲ. ಘಟನೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಯಾವುದೇ ಅಪಾಯವಾಗಿಲ್ಲ ಮತ್ತು ಅವರು ಸಂಪೂರ್ಣ ಸೇಫ್ ಆಗಿದ್ದಾರೆ.
ಸುಲ್ತಾನ್‌ಪುರ ನ್ಯಾಯಾಲಯದತ್ತ ಪ್ರಯಾಣ
ಏಕಾಏಕಿ ನಡೆದ ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನ ಹತೋಟಿಗೆ ತಂದರು.
ಎಕ್ಸ್‌ಪ್ರೆಸ್‌ವೇಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಎಚ್ಚರಿಕೆ ವಹಿಸಲಾಯಿತು. ಯಾವುದೇ ಅನಾಹುತ ಸಂಭವಿಸಿಲ್ಲ ಹಾಗೂ ನಾಯಕರು ಸುರಕ್ಷಿತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ, ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ಸುಲ್ತಾನ್‌ಪುರದತ್ತ ತನ್ನ ಪ್ರಯಾಣವನ್ನು ಮುಂದುವರಿಸಿತು.
ಬಿಗಿ ಭದ್ರತೆಯೊಂದಿಗೆ ಬೆಳಿಗ್ಗೆ 11.15ರ ಸುಮಾರಿಗೆ ಅವರು ಮಾನನಷ್ಟ ಮೊಕದ್ದಮೆ ವಿಚಾರಣೆಗಾಗಿ ಸುಲ್ತಾನ್‌ಪುರ ನ್ಯಾಯಾಲಯವನ್ನು ಸುರಕ್ಷಿತವಾಗಿ ತಲುಪಿದರು.
LoP LS Rahul Gandhi's convoy met with an accident while enroute to Sultanpur from Lucknow.#Rahulgandhi #Breakingnews @ravindraJourno https://t.co/1lUvplpd1o
— Ravinder Singh (@ravindraJourno) October 26, 2026
ಅಮಿತ್ ಶಾ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿನ್ನೆಲೆ
ರಾಹುಲ್ ಗಾಂಧಿ ಅವರು ಎದುರಿಸುತ್ತಿರುವ ಈ ಮಾನನಷ್ಟ ಮೊಕದ್ದಮೆಯು 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬೃಹತ್ ಚುನಾವಣಾ ರ್‍ಯಾಲಿಯೊಂದರಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಸ್ತುತ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಹೇಳಿಕೆಗಳು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಖಂಡಿಸಿ, ಸುಲ್ತಾನ್‌ಪುರದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣವು ಕಳೆದ ಹಲವು ವರ್ಷಗಳಿಂದ ವಿಚಾರಣೆಯ ಹಂತದಲ್ಲಿದ್ದು, ಇದೇ ಪ್ರಕರಣದ ವಿಚಾರಣೆಗೆ ಖುದ್ದಾಗಿ ಹಾಜರಾಗಲು ರಾಹುಲ್ ಗಾಂಧಿ ಆಗಮಿಸಿದ್ದರು.
ಲೋಕಸಭಾ ವಿಪಕ್ಷ ನಾಯಕನಿಗೆ ಬಿಗಿ ಭದ್ರತೆ
ರಾಹುಲ್ ಗಾಂಧಿ ಅವರು ಪ್ರಸ್ತುತ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವುದರಿಂದ ಅವರಿಗೆ ಉನ್ನತ ಮಟ್ಟದ ಭದ್ರತೆಯನ್ನ ಒದಗಿಸಲಾಗಿದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಈ ಸಣ್ಣ ಅಪಘಾತದ ಬಳಿಕ ಭದ್ರತಾ ಸಿಬ್ಬಂದಿ ಹಾಗೂ ಉತ್ತರ ಪ್ರದೇಶ ಪೊಲೀಸರು ಮತ್ತಷ್ಟು ಕಟ್ಟೆಚ್ಚರ ವಹಿಸಿದ್ದಾರೆ.


Click it and Unblock the Notifications
