Rahul Gandhi: ಕರ್ನಾಟಕದಲ್ಲಿ ಆಡಿದ ಮಾತಿಗೆ ಗುಜರಾತ್‌ನಲ್ಲಿ 2 ವರ್ಷ ಜೈಲು ಶಿಕ್ಷೆ- ಈ ಪ್ರಕರಣದ ಕುರಿತು ನಿಮಗೆಷ್ಟು ಗೊತ್ತು?
ಸೂರತ್, ಮಾರ್ಚ್ 23: 2019 ರ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ( Congress ) ನಾಯಕ ರಾಹುಲ್ ಗಾಂಧಿ ( Rahul Gandhi ) ಅವರು ಇಂದು ತಪ್ಪಿತಸ್ಥರೆಂದು ಸಾಬೀತಾಗಿದೆ. ರಾಹುಲ್ ಗಾಂಧಿ ಅವರು 'ಮೋದಿ' ( Narendra Modi ) ಸರ್‌ನೇಮ್ ಬಗ್ಗೆ ಮಾಡಿದ ಟೀಕೆಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಬಗ್ಗೆ ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು ಇಲ್ಲಿವೆ.
1- ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿದ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಅವರಿಗೆ 30 ದಿನಗಳ ಕಾಲ ಜಾಮೀನು ನೀಡಿದೆ. ಕೋರ್ಟ್ ನಿರ್ಧಾರಕ್ಕೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳುಗಳ ಕಾಲ ಅವಕಾಶ ಮಾಡಿಕೊಟ್ಟಿದೆ.

2- 2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಪೂರ್ವ ಪ್ರಚಾರದ ಭಾಷಣದಲ್ಲಿ ರಾಹುಲ್ ಗಾಂಧಿಯವರು ವಿವಾದಿತ ಹೇಳಿಕೆಗಳನ್ನು ನೀಡಿದ್ದರೆಂದು ಆರೋಪಿಸಲಾಗಿದೆ. 'ಈ ದೇಶದ ಎಲ್ಲಾ ಕಳ್ಳರು 'ಮೋದಿ' ಎಂಬ ಸಾಮಾನ್ಯ ಸರ್‌ನೇಮ್ ಅನ್ನು ಹೇಗೆ ಹೊಂದಿದ್ದಾರೆ?' ಎಂದು ರಾಹುಲ್ ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಲೋಕಸಭೆ ಚುನಾವಣೆಗೂ ಮುನ್ನ ನೀಡಿದ್ದರು.
3- ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿತ್ತು. ರಾಹುಲ್ ಗಾಂಧಿಯವರ ಹೇಳಿಕೆಯು ಇಡೀ ಮೋದಿ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಲಾಗಿತ್ತು.
4- ಎರಡೂ ಕಡೆಯ ಅಂತಿಮ ವಾದಗಳ ವಿಚಾರಣೆಯು ಕಳೆದ ವಾರ ಮುಕ್ತಾಯಗೊಂಡಿತು. ಮಾರ್ಚ್ 23 ರಂದು ತೀರ್ಪು ಪ್ರಕಟಿಸಲು ನಿಗದಿಪಡಿಸಲಾಗಿದೆ ಎಂದು ರಾಹುಲ್ ಗಾಂಧಿಯವರ ವಕೀಲ ಕಿರಿತ್ ಪನ್ವಾಲಾ ಹೇಳಿದ್ದರು.

5- ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 2021 ರಲ್ಲಿ ಕೊನೆಯದಾಗಿ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
6- ಗುಜರಾತ್‌ನಲ್ಲಿ ಭೂಪೇಂದ್ರ ಪಟೇಲ್ ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ದೂರುದಾರ ಪೂರ್ಣೇಶ್ ಮೋದಿ ಅವರು ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂರತ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.
7- ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ ಮೊಕದ್ದಮೆ) ಅಡಿಯಲ್ಲಿ ರಾಹುಲ್ ಗಾಂಧಿಯನ್ನು ತಪ್ಪಿತಸ್ಥರೆಂದು ನಿರ್ಣಯಿಸಲಾಗಿದೆ. ಅದರ ಅಡಿಯಲ್ಲಿ ಆರೋಪಿಗೆ (ಇನ್ನೊಬ್ಬರನ್ನು ಅವಮಾನಿಸುವವರು) ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.
8- ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ, ಉದ್ಯಮಿ ಲಲಿತ್ ಮೋದಿ, ಪ್ರಧಾನಿ ನರೇಂದ್ರ ಮೋದಿ... ಇವರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.
9- 2019 ರಲ್ಲಿ, ಮೊಕದ್ದಮೆ ದಾಖಲಾದಾಗ, ತಮ್ಮನ್ನು 'ಮೌನಗೊಳಿಸಲು' ರಾಜಕೀಯ ವಿರೋಧಿಗಳ 'ಹತಾಶ' ಕ್ರಮ ಎಂದು ರಾಹುಲ್ ಗಾಂಧಿ ಹೇಳಿದ್ದರು.
10- ಯುನೈಟೆಡ್ ಕಿಂಗ್‌ಡಂನಲ್ಲಿ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ರಾಹುಲ್ ಗಾಂಧಿ ಏನು ಹೇಳಿದರೂ ಅದು ಪಕ್ಷಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.












Click it and Unblock the Notifications