ರಫೇಲ್ ಯುದ್ಧ ವಿಮಾನ ಖರೀದಿ ಸಿಎಜಿ ವರದಿ ಮಂಗಳವಾರ ಸಂಸತ್ ಮುಂದೆ ಮಂಡನೆ
ನವದೆಹಲಿ, ಫೆಬ್ರವರಿ 11: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಧಿಸಿದಂತೆ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ಜನರಲ್ ತಮ್ಮ ವರದಿಯನ್ನು ಮಂಗಳವಾರದಂದು ಸಂಸತ್ ಮುಂದೆ ಮಂಡಿಸಲಿದ್ದಾರೆ. ಆದರೆ ಮೂಲಗಳ ಪ್ರಕಾರ, ಬೆಲೆಯ ವಿಚಾರವನ್ನು ಅದು ತಿಳಿಸುವುದಿಲ್ಲ. ಅಂದಹಾಗೆ ಕೇಂದ್ರ ಸರಕಾರವು ಖರೀದಿ ವಿಚಾರದಲ್ಲೇ ವಿರೋಧ ಪಕ್ಷಗಳಿಂದ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದೆ.
ಸಿಎಜಿ ವರದಿಯನ್ನು ಅಧಿಕೃತವಾಗಿ ಕ್ಯಾಪಿಟಲ್ ಅಕ್ವಿಸಿಷನ್ಸ್ ಫಾರ್ ಏರ್ ಪೋರ್ಸ್ ಎಂದು ಕರೆಯಲಾಗುತ್ತದೆ. ಸದ್ಯಕ್ಕೆ ನಡೆಯುತ್ತಿರುವ ಸಂಸತ್ ಅಧಿವೇಶನ ಸಮಾಪ್ತಿಗೊಳ್ಳುವ ಒಂದು ದಿನಕ್ಕೆ ಮೊದಲು, ಲೋಕಸಭಾ ಚುನಾವಣೆ ಮುನ್ನ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ.
ರಾಷ್ಟ್ರೀಯ ಭದ್ರತಾ ವಿಚಾರಕ್ಕೆ ಸಂಬಂಧಿಸಿರುವುದರಿಂದ ವಿಮಾನ ಖರೀದಿಯ ಮೊತ್ತ ತಿಳಿಸಲು ಸಾಧ್ಯವಿಲ್ಲ ಎಂದು ಆಡಿಟರ್ ಗೆ ರಕ್ಷಣಾ ಸಚಿವಾಲಯವು ತಿಳಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ಖರೀದಿ ಮೊತ್ತದ ಮಾಹಿತಿಯನ್ನು ವರದಿಯಿಂದ ಹೊರಗಿಡಲು ಮತ್ತು ಪರ್ಸಂಟೇಜ್ ಆಧಾರದಲ್ಲಿ ಲೆಕ್ಕ ಪರಿಶೋಧನೆ ಮಾಡಲು ಆಡಿಟರ್ ಒಪ್ಪಿದ್ದಾರೆ.

2007 ಹಾಗೂ 2015ರಲ್ಲಿ ರಫೇಲ್ ಯುದ್ಧ ವಿಮಾನದ ಬಿಡ್ ನ ವರದಿಯಲ್ಲಿ ಹೋಲಿಕೆ ಮಾಡಲಾಗಿದೆ. ಹೆಚ್ಚಿನ ಮೊತ್ತಕ್ಕೆ 36 ವಿಮಾನ ಖರೀದಿ ಮಾಡಲು ತೆಗೆದುಕೊಂಡ ನಿರ್ಧಾರ ಹಾಗೂ ಯುಪಿಎ ಸರಕಾರದ ಅವಧಿಯಲ್ಲಿ ಹಾರಾಟಕ್ಕೆ ಸಿದ್ಧವಾದ 18 ವಿಮಾನ 2007ರಲ್ಲಿ ಜಾಗತಿಕ ಟೆಂಡರ್ ಮೂಲಕ ಖರೀದಿ ಮಾಡಬೇಕು ಅಂದುಕೊಂಡಿದ್ದನ್ನು ಹೋಲಿಕೆ ಮಾಡಲಾಗಿದೆ.
ಮೂಲಗಳ ಪ್ರಕಾರ, ಸಿಎಜಿಯಿಂದ ಅಧಿಕೃತವಲ್ಲದ ಪತ್ರಿಕಾ ಹೇಳಿಕೆ ಮಂಗಳವಾರ ಬಿಡುಗಡೆ ಆಗಲಿದೆ. ಆರ್ಥಿಕ ಸಚಿವಾಲಯವು ಆಡಿಟ್ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಬದಲಿಗೆ ವರದಿಯನ್ನು ವಿವರಿಸುವ ಪತ್ರಿಕಾ ಹೇಳಿಕೆ ಸಿಎಜಿ ಬಿಡುಗಡೆ ಮಾಡಲಿದೆ.
ರಫೇಲ್ ವ್ಯವಹಾರ ನಡೆದಾಗ ಆರ್ಥಿಕ ಕಾರ್ಯದರ್ಶಿ ಆಗಿದ್ದ ರಾಜೀವ್ ಮೆಹ್ರಿಷಿ ಸದ್ಯಕ್ಕೆ ಸಿಎಜಿ ಆಗಿದ್ದಾರೆ. ರಾಜೀವ್ ಅವರು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರವನ್ನು ರಕ್ಷಿಸುವ ಕೆಲಸ ಮಾಡಬಹುದು. ತಮ್ಮದೇ ವಿರುದ್ಧ ಸಿಎಜಿ ನಡೆದುಕೊಳ್ಳಲು ಹೇಗೆ ಸಾಧ್ಯ? ತನಿಖೆ ಮಾಡಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಫೇಲ್ ಯುದ್ಧ ವಿಮಾನಕ್ಕೆ ಎಷ್ಟು ಮೊತ್ತ ನೀಡಲಾಗುತ್ತಿದೆ? ಎಷ್ಟಕ್ಕೆ ಫ್ರಾನ್ಸ್ ಸರಕಾರದ ಜತೆಗೆ ವ್ಯವಹಾರ ಆಗಿದೆ ಎಂದು ಬಹಿರಂಗ ಮಾಡಬೇಕು ಎಂಬುದು ಕಾಂಗ್ರೆಸ್ ನ ಆಗ್ರಹವಾಗಿದೆ.












Click it and Unblock the Notifications