Putin Visit India: ರಷ್ಯಾ - ಭಾರತ ಪ್ರಮುಖ ಒಪ್ಪಂದ: ಅಮೇರಿಕಾಗೆ ಮಾಸ್ಟರ್ ಸ್ಟ್ರೋಕ್!
Putin Visit India: ಭಾರತ ಹಾಗೂ ರಷ್ಯಾ ಎರಡೂ ದೇಶಗಳು ಅಮೇರಿಕಾಗೆ ಕ್ಯಾರೇ ಎನ್ನದ ಗಟ್ಟಿಯಾದ ನಿರ್ಧಾರವೊಂದನ್ನು ತೆಗೆದುಕೊಂಡಿವೆ. ಅಮೇರಿಕಾದ ನಿರಂತರ ಒತ್ತಡದ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಭಾರತದ ನಡುವೆ ಮಹತ್ವದ ಮಾತುಕತೆ ನಡೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ "ತಡೆರಹಿತ ಇಂಧನ ಸರಬರಾಜು / ಕಚ್ಚಾ ತೈಲ" ಒದಗಿಸುವುದಾಗಿ ಹೇಳಿದ್ದಾರೆ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಬಾರದು ಎಂದು ಅಮೇರಿಕಾ ನಿರಂತರವಾಗಿ ಒತ್ತಡ ಹೇರಿತ್ತು.
ಅಲ್ಲದೇ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಬೇಕು ಅಮೇರಿಕಾದಿಂದ ತೈಲ ಖರೀದಿ ಮಾಡಬೇಕು ಎಂದು ನಿರಂತರವಾಗಿ ಭಾರತದ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಅಲ್ಲದೇ ಭಾರತದ ಮೇಲೆ ಅಮೇರಿಕಾ ಗಂಭೀರವಾದ ಆರೋಪವನ್ನೂ ಮಾಡಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರಿಯುವುದಕ್ಕೆ ಭಾರತ ಮತ್ತು ಚೀನಾ ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದೇ ಪ್ರಮುಖ ಕಾರಣ. ಈ ತೈಲ ಖರೀದಿಯಿಂದ ಬರುವ ಅಪಾರ ಪ್ರಮಾಣದ ಹಣವನ್ನು ರಷ್ಯಾ - ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಮೇರಿಕಾ ಗಂಭೀರವಾದ ಆರೋಪವನ್ನು ಮಾಡಿತ್ತು.

ಇದೀಗ ಅಮೇರಿಕಾದ ಒತ್ತಡ, ಕುತಂತ್ರ ಹಾಗೂ ಬೆದರಿಕೆಗೆ ಭಾರತ ಮತ್ತು ರಷ್ಯಾ ಎರಡೂ ದೇಶಗಳು ಕ್ಯಾರೇ ಎಂದಂತಿಲ್ಲ. ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದರೂ ಈ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿಲ್ಲ. ಇದೀಗ ವ್ಲಾಡಿಮಿರ್ ಪುಟಿನ್ ಅವರು ನಾವು ನಿರಂತರವಾಗಿ ಕಚ್ಚಾ ತೈಲ ಸರಬರಾಜು ಮಾಡುವುದಕ್ಕೆ ಸಿದ್ಧವಿದ್ದೇವೆ ಎಂದು ಹೇಳಿದೆ.
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಯುದ್ಧ ಘೋಷಣೆ ಮಾಡಿದ ನಂತರ ರಷ್ಯಾ ಅಧ್ಯಕ್ಷರು ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಭಾಷಣದಲ್ಲಿ ಪುಟಿನ್ ಈ ಪ್ರಸ್ತಾಪವನ್ನು ಮಾಡಿದ್ದಾರೆ. ಚೀನಾದ ನಂತರ ಭಾರತವು ರಷ್ಯಾದ ಕಚ್ಚಾ ತೈಲದ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿದೆ. ಭಾರತವು ಅಕ್ಟೋಬರ್‌ನಲ್ಲಿ ರಷ್ಯಾದ ಕಚ್ಚಾ ರಫ್ತಿನ 38% ಅನ್ನು ಖರೀದಿಸಿದೆ ಎಂದು ವರದಿಯಾಗಿತ್ತು.
ಭಾರತವು ಕೆಲವೊಂದು ವಿಚಾರದಲ್ಲಿ ಅಮೇರಿಕಾದ ಮೇಲೆಯೂ ಅವಲಂಬಿತವಾಗಿದೆ. ಅಮೇರಿಕಾದ ತೆರಿಗೆ ನೀತಿಯು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಭಾರತವು ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ. ಭಾರತ ಮತ್ತು ಅಮೇರಿಕಾದ ನಡುವೆ ವ್ಯಾಪಾರ ಮತ್ತು ವಹಿವಾಟಿನಲ್ಲಿ ಮೂಡಿರುವ ಅನಿಶ್ವಿತತೆಯಿಂದಾಗಿ ಡಾಲರ್‌ನ ಮುಂದೆ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿಯುತ್ತಿದೆ.
ಅಮೇರಿಕಾ ಖರೀದಿ ಮಾಡಬಹುದಾದರೆ ಭಾರತ ಯಾಕಿಲ್ಲ ?
ಅಮೇರಿಕಾ ದೇಶವೇ ತನ್ನ ಸ್ವಂತ ಪರಮಾಣು ವಿದ್ಯುತ್ ಸ್ಥಾವರಗಳಿಗೆ ರಷ್ಯಾದಿಂದ ಪರಮಾಣು ಇಂಧನವನ್ನು ಖರೀದಿಸುತ್ತಿದೆ. ಅಮೇರಿಕಾ ನಮ್ಮ (ರಷ್ಯಾ) ಇಂಧನವನ್ನು ಖರೀದಿಸಬಹುದಾದರೆ, ಭಾರತಕ್ಕೆ ಅದೇ ಸವಲತ್ತು ಏಕೆ ಇರಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ತೈಲ ಪ್ರಮಾಣವನ್ನು ಕಡಿತಗೊಳಿಸಿದೆ ಎಂದು ಟ್ರಂಪ್ ಅವರು ಹೇಳಿದ್ದರು. ಆದರೆ ಅದು ತಾತ್ಕಾಲಿಕ ಬೆಳವಣಿಗೆ ಎಂದು ಹೇಳಲಾಗಿದೆ.












Click it and Unblock the Notifications