ಬೈಕ್ ಟ್ಯಾಕ್ಸಿ ಬ್ಯಾನ್ ಭೀತಿ: ಪ್ಲೇ ಸ್ಟೋರ್‌ನಿಂದಲೇ ರ‍್ಯಾಪಿಡೋ ಕಿತ್ತೆಸೆಯಲು ಗೂಗಲ್, ಆ್ಯಪಲ್‌ಗೆ ಪೊಲೀಸರ ಪತ್ರ

ಪುಣೆ: ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಮರ ಸಾರಿರುವ ಪುಣೆ ಪೊಲೀಸರು, ಇದೀಗ ನೇರವಾಗಿ ಟೆಕ್ ದೈತ್ಯ ಕಂಪನಿಗಳಾದ ಗೂಗಲ್ ಹಾಗೂ ಆ್ಯಪಲ್ ಮೊರೆ ಹೋಗಿದ್ದಾರೆ. ಪುಣೆ ನಗರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ, ತಮ್ಮ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್‌ನಿಂದ ರ‍್ಯಾಪಿಡೋ ಆ್ಯಪ್ ಅನ್ನು ತೆಗೆದುಹಾಕುವಂತೆ ಪುಣೆ ಪೊಲೀಸರು ಅಧಿಕೃತವಾಗಿ ಪತ್ರ ಬರೆದಿದ್ದಾರೆ.

ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ಈ ವಿಚಾರವನ್ನ ಖಚಿತಪಡಿಸಿದ್ದು, "ರ‍್ಯಾಪಿಡೋ ಅಪ್ಲಿಕೇಶನ್ ಅನ್ನಾ ನಿರ್ಬಂಧಿಸುವಂತೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ಗೆ ನಾವು ಈಗಾಗಲೇ ಸಂವಹನ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.

Pune Police Write To Google And Apple To Remove Rapido App From Play Store Over Illegal Bike Taxis

ಎಫ್‌ಐಆರ್ ದಾಖಲು

ಕಳೆದ ವಾರವಷ್ಟೇ ಪುಣೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (RTA) ಅಧ್ಯಕ್ಷರಾದ ಜಿತೇಂದ್ರ ದುಡಿ ಅವರು ಬೈಕ್ ಟ್ಯಾಕ್ಸಿ ಸೇವೆಯನ್ನ ಮುಚ್ಚುವಂತೆ ಪೊಲೀಸರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪುಣೆ ಆರ್‌ಟಿಒ ಅಧಿಕಾರಿಗಳು, ರ‍್ಯಾಪಿಡೋ ಸಂಸ್ಥೆಯು ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಪರವಾನಗಿಗಾಗಿ ಸಲ್ಲಿಸಿರುವ ಅರ್ಜಿ ಇನ್ನೂ ಸಾರಿಗೆ ಇಲಾಖೆಯ ಬಳಿ ಬಾಕಿ ಉಳಿದಿದೆ.

ನಿಯಮಗಳನ್ನ ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿತ್ತು. ಕಳೆದ ವಾರ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಈಗ ಪೊಲೀಸರು ಮತ್ತು ಆರ್‌ಟಿಎ ಅಧ್ಯಕ್ಷರು ಮಧ್ಯಪ್ರವೇಶಿಸಿರುವುದರಿಂದ, ರ‍್ಯಾಪಿಡೋ ಸಂಸ್ಥೆಯು ನಿಯಮಾನುಸಾರ ಅಧಿಕೃತ ಅನುಮೋದನೆ ಪಡೆಯುವವರೆಗೆ ಅದರ ಸೇವೆ ಲಭ್ಯವಾಗುವುದು ಅನುಮಾನ ಎನ್ನಲಾಗಿದೆ.

ಸಾರ್ವಜನಿಕ ಸಾರಿಗೆ ಕೊರತೆ: ರ‍್ಯಾಪಿಡೋ ಆ್ಯಪ್ ಬ್ಯಾನ್‌ಗೆ ಪ್ರಯಾಣಿಕರ ಆಕ್ರೋಶ

ಪೊಲೀಸರು ಎಫ್‌ಐಆರ್ ದಾಖಲಿಸಿ ವಾರ ಕಳೆದರೂ ಪುಣೆ ನಗರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳು ಇಂದಿಗೂ ಮುಂದುವರಿದಿವೆ. ಆದರೆ, ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವ ಅಧಿಕಾರಿಗಳ ಈ ನಡೆಗೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ವಿಮಾನನಗರದ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿ, "ಅಧಿಕಾರಿಗಳಿಗೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಚ್ಚಲು ಇಷ್ಟೊಂದು ಆಸಕ್ತಿ ಏಕಿದೆ ಎಂದು ಅರ್ಥವಾಗುತ್ತಿಲ್ಲ. ನಗರದಲ್ಲಿ ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒದಗಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಕ್ಯಾಬ್ ಮತ್ತು ಆಟೋ ರಿಕ್ಷಾ ಚಾಲಕರು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಾರೆ, ಅನುಚಿತವಾಗಿ ವರ್ತಿಸುತ್ತಾರೆ. ಅವರ ವಿರುದ್ಧ ಯಾವುದೇ ಕ್ರಮವಿಲ್ಲ. ನಾನು ಇತ್ತೀಚೆಗಷ್ಟೇ ರ‍್ಯಾಪಿಡೋ ಬಳಸಿದ್ದೆ, ಅದು ತುಂಬಾ ಅನುಕೂಲಕರವಾಗಿತ್ತು" ಎಂದಿದ್ದಾರೆ.

ಯುವ ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸಿ, "ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಪಡಿಸುವ ಬದಲು, ಅದನ್ನ ನಿಯಂತ್ರಿಸಲು ಮತ್ತು ಸುರಕ್ಷತೆ ಹೆಚ್ಚಿಸಲು ಗಮನ ಹರಿಸಬೇಕು. ಆಟೋ ರಿಕ್ಷಾ ಯೂನಿಯನ್‌ಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಆಟೋ ರಿಕ್ಷಾ ಯೂನಿಯನ್ ಆಗ್ರಹ

ಮತ್ತೊಂದೆಡೆ, ಆಟೋ ರಿಕ್ಷಾ ಯೂನಿಯನ್‌ಗಳು ಅಧಿಕಾರಿಗಳ ಈ ವಿಳಂಬ ನೀತಿಯನ್ನ ಕಟುವಾಗಿ ಟೀಕಿಸಿವೆ. ಕೇವಲ ಪತ್ರಗಳನ್ನ ನೀಡಿದರೆ ಸಾಲದು, ರ‍್ಯಾಪಿಡೋ ಕಾರ್ಯಾಚರಣೆಯನ್ನ ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿವೆ. ಬೈಕ್ ಟ್ಯಾಕ್ಸಿ ಸವಾರರ ಹಿನ್ನೆಲೆ ಪರಿಶೀಲನೆ ನಡೆಯುತ್ತಿಲ್ಲ, ಇದು ಪ್ರಯಾಣಿಕರ ಸುರಕ್ಷತೆಗೆ ಬಹುದೊಡ್ಡ ಬೆದರಿಕೆ ಎಂದು ಯೂನಿಯನ್‌ಗಳು ಆರೋಪಿಸಿವೆ.

ಮಹಾರಾಷ್ಟ್ರ ಕಾಮಗಾರ್ ಸಭಾ ಮತ್ತು ಇಂಡಿಯನ್ ಗಿಗ್ ವರ್ಕರ್ಸ್ ಫ್ರಂಟ್‌ನ ಅಧ್ಯಕ್ಷ ಕೇಶವ್ ಕ್ಷೀರಸಾಗರ್ ಮಾತನಾಡಿ, "ಕೆಲವೇ ದಿನಗಳ ಹಿಂದಷ್ಟೇ, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಬೈಕ್ ಟ್ಯಾಕ್ಸಿ ಆಪರೇಟರ್ ಒಬ್ಬನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು.

ಹೀಗಾಗಿ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಬೈಕ್ ಟ್ಯಾಕ್ಸಿ ಸೇವೆಯನ್ನ ತಕ್ಷಣವೇ ರದ್ದುಗೊಳಿಸಲು ಇದು ಸಕಾಲ" ಎಂದು ಒತ್ತಾಯಿಸಿದ್ದಾರೆ. ಆಟೋ ರಿಕ್ಷಾ ಯೂನಿಯನ್ ಹಾಗೂ ಪ್ರಯಾಣಿಕರ ನಡುವಿನ ಈ ಹಗ್ಗಜಗ್ಗಾಟದಲ್ಲಿ ಪುಣೆ ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+