ISRO: ಪಿಎಸ್‌ಎಲ್‌ವಿಗೆ ದ್ವಿತೀಯ ವಿಘ್ನ: ಭಾರತದ ನಂಬಿಕಾರ್ಹ ರಾಕೆಟ್ ಮುಗ್ಗರಿಸಿದಾಗ -ಗಿರೀಶ್ ಲಿಂಗಣ್ಣ ಬರಹ
ಇಸ್ರೋದ 16 ಉಪಗ್ರಹಗಳ ಉಡಾವಣೆಯ ಯೋಜನೆ ವಿಫಲವಾಗಿದೆ. ಈ ವೈಫಲ್ಯದ ಕಾರಣಗಳು ಹಲವು. ತಕ್ಷಣಕ್ಕೆ ಈ ವಿಚಾರದಲ್ಲಿ ನಿಖರವಾಗಿ ಏನನ್ನೂ ಹೇಳಲು ಆಗುವುದಿಲ್ಲ. ಆದರೆ ಅನುಭವ ಮತ್ತು ಅಧ್ಯಯನದ ಹಿನ್ನೆಲೆಯಿಂದ ಒಂದಿಷ್ಟು ವಿಚಾರಗಳನ್ನು ಬಾಹ್ಯಾಕಾಶ ಮತ್ತು ರಕ್ಷಣಾ ವಿದ್ಯಮಾನಗಳ ತಜ್ಞ ಗಿರೀಶ್ ಲಿಂಗಣ್ಣ ಅವರು ಹಂಚಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಶ್ರೀಹರಿಕೋಟಾದಲ್ಲಿ ಅತ್ಯಂತ ವಿಷಾದಕರ ಸಂಗತಿ ನಡೆದಿದೆ. ಕೇವಲ ಎಂಟು ತಿಂಗಳ ಅವಧಿಯಲ್ಲಿ, ಭಾರತದ ಅತ್ಯಂತ ನಂಬಿಕಾರ್ಹ ರಾಕೆಟ್ ಆಗಿರುವ ಪಿಎಸ್‌ಎಲ್‌ವಿ ಎರಡನೇ ಬಾರಿಗೆ ತನ್ನ ಹಾರಾಟದ ಮಧ್ಯದಲ್ಲಿ ವೈಫಲ್ಯ ಅನುಭವಿಸಿದೆ. ಎರಡನೇ ಬಾರಿಯೂ ಸಹ ಸಮಸ್ಯೆ ಅದೇ ಭಾಗದಲ್ಲಿ, ಅಂದರೆ ರಾಕೆಟ್‌ನ ಮೂರನೇ ಹಂತದಲ್ಲೇ ತಲೆದೋರಿದೆ. ಪಿಎಸ್‌ಎಲ್‌ವಿ ವೈಫಲ್ಯ ಯಾಕೆ ಇಷ್ಟೊಂದು ಆತಂಕಕಾರಿ ವಿಚಾರ ಎಂದು ನಿಮಗೆ ಅನಿಸಿದರೆ, ನಿಮ್ಮ ಅತ್ಯಂತ ನಂಬಿಕಾರ್ಹವಾದ ಕುಟುಂಬದೊಡನೆ ಸಂಚರಿಸುವ ಕಾರ್ ಕೆಲವೇ ತಿಂಗಳ ಅವಧಿಯೊಳಗೆ ಒಂದೇ ರೀತಿಯಲ್ಲಿ ಎರಡು ಬಾರಿ ಇದ್ದಕ್ಕಿದ್ದಂತೆ ಹಾಳಾಗುವುದನ್ನು ಊಹಿಸಿಕೊಳ್ಳಿ. ಇಂತಹದ್ದೇ ಒಂದು ಚಿಂತೆ ಈಗ ಭಾರತದ ಬಾಹ್ಯಾಕಾಶ ಸಮುದಾಯವನ್ನು ಕಾಡತೊಡಗಿದೆ.

ಈಗ ಮೇ 18, 2025ರಂದು ನಡೆದ ಘಟನೆಯನ್ನೊಮ್ಮೆ ಗಮನಿಸೋಣ. ಅಂದು ಇಸ್ರೋ ಪಿಎಸ್‌ಎಲ್‌ವಿ-ಸಿ61 ರಾಕೆಟ್ ಅನ್ನು ಅದರ ಎಕ್ಸ್‌ಎಲ್ ಆವೃತ್ತಿಯಲ್ಲಿ, ಅಂದರೆ ಅತ್ಯಂತ ಹೆಚ್ಚಿನ ತೂಕವನ್ನು ಹೊತ್ತೊಯ್ಯುವ, ಹೆಚ್ಚುವರಿ ಥ್ರಸ್ಟ್‌ಗಾಗಿ ಆರು ಸ್ಟ್ರಾಪ್ ಆನ್ ಬೂಸ್ಟರ್‌ಗಳನ್ನು ಹೊಂದಿರುವ ರೀತಿಯಲ್ಲಿ ಉಡಾವಣೆಗೊಳಿಸಿತ್ತು. ಆ ರಾಕೆಟ್ ಅತ್ಯಂತ ಮಹತ್ವದ, ನಮ್ಮ ಗಡಿಗಳ ಮೇಲೆ ನಿರಂತರವಾಗಿ ಕಣ್ಗಾವಲು ನಡೆಸುವ, ಅದರೊಡನೆ ಕೃಷಿಯಿಂದ ವಿಪತ್ತು ನಿರ್ವಹಣೆಯ ತನಕ ಎಲ್ಲದಕ್ಕೂ ಕೊಡುಗೆ ನೀಡುವಂತಹ ಇಒಎಸ್-09 ಎನ್ನುವ ರೇಡಾರ್ ಉಪಗ್ರಹವನ್ನು ಒಯ್ದಿತ್ತು. ಅಂದು ರಾಕೆಟ್ ಅತ್ಯಂತ ಸಮರ್ಪಕವಾಗಿ ಭೂಮಿಯಿಂದ ಉಡಾವಣೆಗೊಂಡು, ಮೊದಲ ಹಂತ ಮತ್ತು ಎರಡನೇ ಹಂತಗಳು ನಿರೀಕ್ಷಿಸಿದಂತೆ ಸಮರ್ಥವಾಗಿ ಕಾರ್ಯಾಚರಿಸಿದವು. ಆ ಬಳಿಕ, ರಾಕೆಟ್‌ನ ಮೂರನೇ ಹಂತ ಆರಂಭಗೊಂಡಿತು.
ಇದು ಘನ ಇಂಧನ ಮೋಟಾರ್ ಆಗಿದ್ದು, ಒಂದು ಬಾರಿ ಆರಂಭಿಸಿದರೆ, ಪಟಾಕಿಯ ರೀತಿಯಲ್ಲಿ ಉರಿಯುತ್ತಾ ಹೋಗುತ್ತದೆ. ಒಂದು ಬಾರಿ ಆರಂಭಗೊಂಡರೆ, ಅದನ್ನು ನಿಲ್ಲಿಸಲಾಗಲಿ, ಬದಲಾಯಿಸಲಾಗಲಿ ಸಾಧ್ಯವೇ ಇಲ್ಲ. ಇದ್ದಕ್ಕಿದ್ದಂತೆ ರಾಕೆಟ್ ಚೇಂಬರ್ ಒತ್ತಡ ಕುಸಿಯಿತು. ಇದನ್ನು ಅಡುಗೆ ಮಾಡುವಾಗ ಪ್ರೆಶರ್ ಕುಕರ್ ಇದ್ದಕ್ಕಿದ್ದಂತೆ ಹಬೆ ಕಳೆದುಕೊಳ್ಳುವುದಕ್ಕೆ ಹೋಲಿಸಬಹುದು. ಇದರಿಂದಾಗಿ ರಾಕೆಟ್‌ಗೆ ತನಗೆ ಬೇಕಾದಷ್ಟು ವೇಗ ಪಡೆದುಕೊಳ್ಳಲು ಸಾಧ್ಯವಾಗದೆ, ಯೋಜನೆ ವೈಫಲ್ಯ ಅನುಭವಿಸಿತು. ಇದರೊಡನೆ ನಾವು ಒಂದು ಉಪಗ್ರಹವನ್ನು ಕಳೆದುಕೊಂಡೆವು. ಜೊತೆಗೆ, ನೂರಾರು ವಿಜ್ಞಾನಿಗಳು ತಿಂಗಳುಗಳ ಕಾಲ ನಡೆಸಿದ ಪರಿಶ್ರಮವೂ ವ್ಯರ್ಥವಾಯಿತು.
ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರು ಇದನ್ನು ಚೇಂಬರ್ ಪ್ರೆಶರ್ ಸಮಸ್ಯೆ ಎಂದರು. ಏನಾಯಿತು ಎನ್ನುವುದನ್ನು ಕೂಲಂಕಷವಾಗಿ ಪರಿಶೀಲಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸಲಾಯಿತು. ಆಗಸ್ಟ್ ತಿಂಗಳ ವೇಳೆಗೆ ಈ ಸಮಿತಿ ತಾನು ಸಮಸ್ಯೆ ಏನೆಂದು ಪತ್ತೆಹಚ್ಚಿ, ಅದನ್ನು ಪರಿಹರಿಸಿರುವುದಾಗಿ ತಿಳಿಸಿತು. ಈ ಸುದ್ದಿ ಎಲ್ಲರಿಗೂ ಸಮಾಧಾನ ನೀಡಿದ್ದೂ ಹೌದು. ಪಿಎಸ್‌ಎಲ್‌ವಿ ರಾಕೆಟ್ 1993ರಿಂದಲೂ ಭಾರತದ ಅತ್ಯಂತ ನಂಬಿಕಾರ್ಹ ರಾಕೆಟ್ ಆಗಿದ್ದು, ಪ್ರಸಿದ್ಧ ಚಂದ್ರಯಾನ-1 ಮತ್ತು ಮಂಗಳಯಾನ ಸೇರಿದಂತೆ, 60ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. 2025ಕ್ಕೂ ಮುನ್ನ, ಈ ರಾಕೆಟ್ ಕೇವಲ ಎರಡು ಬಾರಿಯಷ್ಟೇ ವೈಫಲ್ಯ ಅನುಭವಿಸಿತ್ತು. ಮೊದಲು, 1993ರಲ್ಲಿ ರಾಕೆಟ್‌ನ ಮೊಟ್ಟಮೊದಲ ಹಾರಾಟದ ಸಂದರ್ಭದಲ್ಲಿ ವೈಫಲ್ಯ ಎದುರಾಗಿದ್ದರೆ, ಎರಡನೇ ಬಾರಿ 2017ರಲ್ಲಿ ರಾಕೆಟ್‌ನ ಉಷ್ಣತಾ ಕವಚ ಬೇರ್ಪಡಲಿಲ್ಲ. ಇದೊಂದು ಸಣ್ಣ ಸಮಸ್ಯೆಯಾಗಿದ್ದು, ಅದನ್ನು ತಕ್ಷಣವೇ ಪರಿಹರಿಸಲಾಗಿತ್ತು.
ಅಲ್ಲಿಂದ ಮುಂದೆ ಬಂದು, ಜನವರಿ 12, 2026ರ ಯೋಜನೆಯನ್ನು ಗಮನಿಸೋಣ. ಇನ್ನೊಂದು ಪಿಎಸ್‌ಎಲ್‌ವಿ ಯೋಜನೆಯಾದ ಸಿ62 ತನ್ನ ಡಿಎಲ್ ಆವೃತ್ತಿಯಲ್ಲಿ, ಅಂದರೆ ಕೇವಲ ಎರಡು ಸ್ಟ್ರಾಪ್ ಆನ್ ಬೂಸ್ಟರ್‌ಗಳೊಡನೆ ಉಡಾವಣೆಗೆ ಸಜ್ಜಾಗಿತ್ತು. ಇದು ಸಣ್ಣ ಪೇಲೋಡ್‌ಗಳಿಗೆ ವಿನ್ಯಾಸಗೊಂಡಿರುವ ಹಗುರವಾದ ಆವೃತ್ತಿಯಾಗಿತ್ತು. ಈ ರಾಕೆಟ್ ಬೆಳೆಯ ಆರೋಗ್ಯದಿಂದ ನೀರಿನ ಗುಣಮಟ್ಟದ ತನಕ ಎಲ್ಲವನ್ನೂ ಗಮನಿಸುವ ಇಒಎಸ್-ಎನ್1 ಎನ್ನುವ ಹೈಪರ್ ಸ್ಪೆಕ್ಟ್ರಲ್ ಉಪಗ್ರಹ ಮತ್ತು ವಿವಿಧ ಕಂಪನಿಗಳಿಗೆ ಸೇರಿದ 15 ಸಣ್ಣಪುಟ್ಟ ಉಪಗ್ರಹಗಳನ್ನು ಹೊತ್ತು ಹಾರಾಟ ನಡೆಸಲಿತ್ತು. ಉಡಾವಣೆ ಅಂದುಕೊಂಡಂತೆ ಬೆಳಗ್ಗೆ 10:18ಕ್ಕೆ ಸಮರ್ಪಕವಾಗಿಯೇ ನೆರವೇರಿತ್ತು. ಮೊದಲ ಹಂತ ಯಾವುದೇ ಅಡಚಣೆಯಿಲ್ಲದೆ ಪೂರ್ಣಗೊಂಡಿತು.
ಎರಡನೇ ಹಂತವೂ ಸುಗಮವಾಗಿ ಸಾಗಿತ್ತು. ಬಳಿಕ, ಮೂರನೇ ಹಂತವೂ ಕಾರ್ಯಾಚರಿಸಲು ಆರಂಭಿಸಿತು. ಕೆಲ ಸಮಯ ಎಲ್ಲವೂ ಸರಿಯಾಗಿರುವಂತೆ ಕಾಣುತ್ತಿತ್ತು. ಆದರೆ, ಮೂರನೇ ಹಂತದ ದಹಿಸುವಿಕೆಯ ಕೊನೆಯ ವೇಳೆಗೆ ಏನೋ ದೊಡ್ಡ ತೊಂದರೆ ಉಂಟಾದಂತೆ ಕಾಣತೊಗಿತು. ಇಂಜಿನಿಯರ್‌ಗಳು ʼಡಿಸ್ಟರ್ಬೆನ್ಸ್ ಇನ್ ರೋಲ್ ರೇಟ್ಸ್ʼ ಎಂದು ಕರೆಯುವ ಸಮಸ್ಯೆಗೆ ರಾಕೆಟ್ ತುತ್ತಾಯಿತು.
ಅಂದರೆ, ರಾಕೆಟ್ ಯಾವಾಗ ಸ್ಥಿರವಾಗಿರಬೇಕಿತ್ತೋ, ಆಗ ಸುತ್ತಲು, ಉರುಳಲು ಆರಂಭಿಸಿತು. ಇದರಿಂದ ಹಾರಾಟದ ಪಥ ಬದಲಾಯಿತು, ರಾಕೆಟ್‌ನ ಎತ್ತರ ಮತ್ತು ವೇಗ ಎರಡೂ ಕಡಿಮೆಯಾದವು. ಯೋಜನೆ ವೈಫಲ್ಯ ಕಂಡಿತು. ಯಾವುದೇ ಉಪಗ್ರಹವೂ ತಮ್ಮ ಕಕ್ಷೆಗೆ ತಲುಪಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಅವುಗಳು ಕಳೆದುಹೋದಂತಾಯಿತು.
ಕೇವಲ ಎಂಟು ತಿಂಗಳ ಅಂತರದಲ್ಲಿ ಎರಡು ವೈಫಲ್ಯಗಳು ತಲೆದೋರಿದ್ದು, ಅವೆರಡೂ ರಾಕೆಟ್‌ನ ಮೂರನೇ ಹಂತದಲ್ಲೇ ಉಂಟಾಗಿವೆ. ಆದ್ದರಿಂದ ಇವನ್ನು ಕಾಕತಾಳೀಯ, ಅನಿರೀಕ್ಷಿತ ಎನ್ನಲು ಸಾಧ್ಯವಿಲ್ಲ. ಇದೊಂದು ವೈಫಲ್ಯದ ಮಾದರಿಯಂತಾಗಿದ್ದು, ಇದಕ್ಕೆ ಉತ್ತರ ಕಂಡುಕೊಳ್ಳಲೇಬೇಕು. ಮೂರನೇ ಹಂತ ಘನ ಇಂಧನವನ್ನು ಬಳಸುತ್ತದೆ. ಅದನ್ನೊಮ್ಮೆ ಚಾಲನೆಗೊಳಿಸಿದರೆ, ಮತ್ತೆ ಸ್ಥಗಿತಗೊಳಿಸಲಾಗಲಿ, ದ್ರವ ಇಂಧನದ ರೀತಿಯಲ್ಲಿ ಅದರ ಥ್ರಾಟಲ್ ಬದಲಾಯಿಸಲಾಗಲಿ ಸಾಧ್ಯವಿಲ್ಲ. ಆದ್ದರಿಂದ, ಏನಾದರೂ ತಪ್ಪು ಸಂಭವಿಸಿದರೆ, ಅದು ಬಹಳ ಬೇಗನೆ ಕೈಮೀರಿ ಹೋಗುತ್ತದೆ.
ಮೇ ತಿಂಗಳ ವೈಫಲ್ಯ ಒತ್ತಡದ ಕುಸಿತದಿಂದ ಉಂಟಾಗಿದ್ದು, ಮೋಟಾರ್ ಒಳಗೆ ಅಪೂರ್ಣ ಅಥವಾ ಅಸಮರ್ಪಕ ದಹನ ಉಂಟಾಗಿರುವುದನ್ನು ಪ್ರತಿನಿಧಿಸಿತ್ತು. ಆದರೆ, ಇಂದಿನ ವೈಫಲ್ಯದಲ್ಲಿ ರಾಕೆಟ್ ನಿಯಂತ್ರಣ ಕಳೆದುಕೊಂಡು, ಉರುಳತೊಡಗಿತ್ತು. ಅಂದರೆ, ಒಂದೋ ರಾಕೆಟ್ ಅನ್ನು ನಿಯಂತ್ರಿಸುವ ನಾಸಲ್ ಕಾರ್ಯನಿರ್ವಹಣೆ ಅಸಮರ್ಪಕವಾಗಿರಬಹುದು. ಅಥವಾ ಯಾವುದಾದರೂ ರಚನಾತ್ಮಕ ಸಮಸ್ಯೆಯಿಂದ ಥ್ರಸ್ಟ್ ಅಸಮಾನವಾಗಿರಬಹುದು.
ವೈಫಲ್ಯ ಕಂಡ ಎರಡೂ ರಾಕೆಟ್‌ಗಳೂ ಒಂದೇ ಉತ್ಪಾದನಾ ತಂಡದಲ್ಲಿ ನಿರ್ಮಾಣಗೊಂಡಿರುವ ಮೂರನೇ ಹಂತವನ್ನು ಬಳಸಿರುವ ಸಾಧ್ಯತೆಗಳಿದ್ದು, ಅವುಗಳ ಬಿಡಿಭಾಗಗಳನ್ನು ಒಂದೇ ಪೂರೈಕೆದಾರರು ಒದಗಿಸಿರಬಹುದು. ಇದು ತಜ್ಞರ ಚಿಂತೆಗೆ ಕಾರಣವಾಗಿರುವ ಅಂಶ. ಹಿಂದಿನ ತನಿಖೆಯಲ್ಲಿ ಯಾವುದಾದರೂ ಉತ್ಪಾದನಾ ದೋಷ ಕಣ್ಣು ತಪ್ಪಿರುವ ಸಾಧ್ಯತೆಗಳಿವೆಯೇ? ಅಥವಾ ಮೇ ತಿಂಗಳಲ್ಲಿ ಅಳವಡಿಸಿದ್ದ ಪರಿಹಾರ ಕ್ರಮಗಳು ಸಮಸ್ಯೆಯ ಮೂಲವನ್ನು ಸರಿಪಡಿಸಿರಲಿಲ್ಲವೇ? ಇಸ್ರೋ ಈ ಮೋಟಾರ್‌ಗಳನ್ನು ತಿರುವನಂತಪುರದಲ್ಲಿರುವ ತನ್ನ ಘಟಕದ ಕಾರ್ಖಾನೆಯಲ್ಲೇ ನಿರ್ಮಿಸುತ್ತದೆ. ಆದರೆ, ಇದಕ್ಕೆ ಬೇಕಾದ ಬಿಡಿಭಾಗಗಳು ಮತ್ತು ಕಚ್ಚಾ ವಸ್ತುಗಳನ್ನು ವಿವಿಧ ಪೂರೈಕೆದಾರರು ಒದಗಿಸುತ್ತಾರೆ.
ರಾಕೆಟ್ ಉತ್ಪಾದನೆಯಲ್ಲಿ ಗುಣಮಟ್ಟದ ನಿಯಂತ್ರಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಮೋಟಾರಿನಲ್ಲಿ ಕೇವಲ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣುವಂತಹ ಬಿರುಕುಗಳಿದ್ದರೂ, ಅಥವಾ ಇನ್ಸುಲೇಶನ್ ಕ್ಯಾನಿನಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೂ, ಅದರಿಂದ ಭಾರೀ ವೈಫಲ್ಯವೇ ಉಂಟಾಗಬಹುದು.
ಇಂತಹ ವೈಫಲ್ಯಗಳು ವಾಣಿಜ್ಯಿಕವಾಗಿಯೂ ಭಾರತಕ್ಕೆ ನಷ್ಟ ಉಂಟುಮಾಡುತ್ತವೆ. ಇಂದಿನ ಸಿ62 ಯೋಜನೆಯನ್ನು ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನಿರ್ವಹಿಸುತ್ತಿತ್ತು, ಇದು ಅಂತಾರಾಷ್ಟ್ರೀಯ ಗ್ರಾಹಕರ ಉಪಗ್ರಹಗಳನ್ನೂ ಬಾಹ್ಯಾಕಾಶಕ್ಕೆ ಒಯ್ಯಬೇಕಿತ್ತು. ಹಲವಾರು ವರ್ಷಗಳ ಕಾಲ, ಪಿಎಸ್‌ಎಲ್‌ವಿ ಅಂತಾರಾಷ್ಟ್ರೀಯ ಉಡಾವಣಾ ಮಾರುಕಟ್ಟೆಯಲ್ಲಿ ಗ್ರಾಹಕರ ಆದ್ಯತೆಯ ರಾಕೆಟ್ ಆಗಿತ್ತು.
ಇದು ನಂಬಿಕಾರ್ಹ ಮತ್ತು ಕೈಗೆಟಕುವ ದರದಲ್ಲಿ ಸೇವೆ ಒದಗಿಸುವುದರಿಂದ, ಜಗತ್ತಿನಾದ್ಯಂತ ಎಲ್ಲ ದೇಶಗಳೂ ಇದರ ಮೇಲೆ ನಂಬಿಕೆ ಇರಿಸಿದ್ದವು. ಆದರೆ, ಈಗ ನಡೆದಿರುವ ಎರಡು ವೈಫಲ್ಯಗಳು ಕೇವಲ ನಮ್ಮ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯಕ್ಕೆ ಮಾತ್ರ ಹೊಡೆತ ನೀಡುವುದಲ್ಲ. ಬದಲಿಗೆ, ನಂಬಿಕಾರ್ಹ ವಾಣಿಜ್ಯಿಕ ಉಡಾವಣೆಗಾರ ಎಂದು ಭಾರತ ಪರಿಶ್ರಮಪಟ್ಟು ಸಂಪಾದಿಸಿರುವ ಹೆಸರನ್ನೂ ಹಾಳು ಮಾಡುವ ಸಾಧ್ಯತೆಗಳಿವೆ. ಈಗ ಗ್ರಾಹಕರು ಆತಂಕಕ್ಕೊಳಗಾಗಿ, ಪರ್ಯಾಯ ಆಯ್ಕೆಗಳತ್ತ ದೃಷ್ಟಿ ನೆಟ್ಟರೆ, ಇದರಿಂದ ಭಾರತಕ್ಕೆ ಮಿಲಿಯನ್‌ಗಟ್ಟಲೆ ಡಾಲರ್ ನಷ್ಟ ಉಂಟಾಗಲಿದೆ.
ಆದರೆ, ಇಸ್ರೋ ಕುರಿತು ಒಂದು ವಿಚಾರವನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಿಂದೆಯೂ ವೈಫಲ್ಯಗಳು ಎದುರಾದಾಗ ಇಸ್ರೋ ಬಲುಬೇಗ ಮರಳಿ ಯಶಸ್ಸಿನ ಹಾದಿಗೆ ಬಂದಿತ್ತು. 2017ರಲ್ಲಿ ಉಷ್ಣತಾ ಕವಚ ಪ್ರತ್ಯೇಕಗೊಳ್ಳದೆ ಸಮಸ್ಯೆ ಎದುರಾದಾಗ, ಇಸ್ರೋ ಇದನ್ನು ತಕ್ಷಣವೇ ಪರಿಶೀಲಿಸಿ, ಪ್ರತ್ಯೇಕತಾ ವ್ಯವಸ್ಥೆಯನ್ನು ಸರಿಪಡಿಸಿ, ಉತ್ತಮ ಪರೀಕ್ಷಾ ಪ್ರಕ್ರಿಯೆಗಳನ್ನು ಅಳವಡಿಸಿತು. ಇದಾದ ನಂತರದ ಉಡಾವಣೆಯೇ ಯಶಸ್ವಿಯಾಗಿತ್ತು. ನಂತರ ವರ್ಷಗಳ ಕಾಲ ಉಡಾವಣೆ ಯಶಸ್ವಿಯಾಗಿ ಸಾಗುತ್ತಿತ್ತು. ಇಂದಿಗೂ ಇಸ್ರೋ ಅದೇ ಸಮರ್ಪಕ ವಿಶ್ಲೇಷಣೆ ಮತ್ತು ಅವಿಶ್ರಾಂತವಾಗಿ ಸಮಸ್ಯೆ ಸರಿಪಡಿಸುವ ಡಿಎನ್‌ಎಯನ್ನು ಹೊಂದಿದೆ.
ಇಸ್ರೋ ಈಗ ಏನು ಮಾಡಬೇಕು? ಮೊದಲಿಗೆ, ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಇಸ್ರೋ ಕಂಡುಕೊಂಡ ಸಮಸ್ಯೆಗಳನ್ನು ಕೇವಲ ತಾಂತ್ರಿಕ ಸಮಿತಿಯೊಡನೆ ಮಾತ್ರವಲ್ಲದೆ, ಸಾರ್ವಜನಿಕರೊಡನೆಯೂ ಹಂಚಿಕೊಳ್ಳಬೇಕು. ಎರಡನೆಯದಾಗಿ, ಇದು ಭಾರತದ ಖಾಸಗಿ ಬಾಹ್ಯಾಕಾಶ ವಲಯದ ಸ್ಕೈರೂಟ್, ಅಗ್ನಿಕುಲ್‌ಗಳಂತಹ ಸಂಸ್ಥೆಗಳನ್ನು, ಮತ್ತು ಈಗಾಗಲೇ ಪಿಎಸ್‌ಎಲ್‌ವಿ ಬಿಡಿಭಾಗಗಳನ್ನು ನಿರ್ಮಿಸುತ್ತಿರುವ ಎಚ್‌ಎಎಲ್ ಮತ್ತು ಎಲ್&ಟಿಗಳಂತಹ ಔದ್ಯಮಿಕ ದೈತ್ಯ ಸಂಸ್ಥೆಗಳನ್ನು ಒಳಗೊಳ್ಳಲು ಸೂಕ್ತವಾದ ಸಮಯವಾಗಿದೆ.
ಹೊಸ ಕಣ್ಣುಗಳು, ಸ್ವತಂತ್ರ ಪರೀಕ್ಷೆಗಳು, ಮತ್ತು ಆಧುನಿಕ ಸಿಮ್ಯುಲೇಶನ್‌ಗಳು ಆರಂಭಿಕ ತಂಡಗಳ ಕಣ್ಣಿಗೆ ಬೀಳದ ಸಮಸ್ಯೆಯನ್ನೂ ಪತ್ತೆಹಚ್ಚಲು ನೆರವಾಗಬಹುದು. ಮೂರನೆಯದಾಗಿ, ಇಸ್ರೋ ಕೊಂಚ ನಿಧಾನಗತಿ ಮತ್ತು ಕೂಲಂಕಷ ಪರಿಶೀಲನೆಯ ವಿಧಾನವನ್ನು ಅನುಸರಿಸಬೇಕಿದೆ. ಬೇಗ ಬೇಗ ಉಡಾವಣೆಗಳನ್ನು ನಡೆಸುವ ಒತ್ತಡ ಇರುವುದು ನಿಜವಾದರೂ, ಅದಕ್ಕಾಗಿ ನಂಬಿಕಾರ್ಹತೆಯನ್ನು ಕಳೆದುಕೊಳ್ಳಬಾರದು.
ಇಂದಿನ ಘಟನೆ ನಿಜಕ್ಕೂ ನೋವು ನೀಡಿದೆ. ಕಾರ್ಯತಂತ್ರದ ಉಪಗ್ರಹಗಳು ಕೈತಪ್ಪಿವೆ, ಮಿಲಿಯಾಂತರ ರೂಪಾಯಿ ನಷ್ಟವಾಗಿದೆ, ಹಣ ನೀಡುವ ಗ್ರಾಹಕರು ಅಸಮಾಧಾನಗೊಂಡಿದ್ದಾರೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಆತ್ಮವಿಶ್ವಾಸಕ್ಕೇ ಹೊಡತ ಬಿದ್ದಿದೆ. ಆದರೆ, ಬಾಹ್ಯಾಕಾಶ ಅನ್ವೇಷಣೆ ಎಂದರೆ ವೈಫಲ್ಯಗಳಿಂದ ಹೊಸ ಪಾಠ ಕಲಿಯುವುದೇ ಆಗಿದೆ. ನಾಸಾ, ಸ್ಪೇಸ್‌ಎಕ್ಸ್, ಯುರೋಪಿಯನ್ ಸ್ಪೇಸ್ ಏಜೆನ್ಸಿಯಂತಹ ಪ್ರತಿಯೊಂದು ಯಶಸ್ವಿ ಬಾಹ್ಯಾಕಾಶ ಸಂಸ್ಥೆಗಳು ವೈಫಲ್ಯ ಅನುಭವಿಸಿಯೇ ಬಲವಾಗಿ ಎದ್ದು ನಿಂತಿರುವುದು.
ಇಸ್ರೋ ತಂಡದ ಬಳಿ ಜಗತ್ತಿನಲ್ಲೇ ಅತ್ಯಂತ ಪ್ರತಿಭಾವಂತ ಇಂಜಿನಿಯರ್‌ಗಳಿದ್ದಾರೆ. ಅವರು ಟೆಲಿಮೆಟ್ರಿ ಮಾಹಿತಿಯ ಒಂದೊಂದು ಬೈಟ್ ಅನ್ನೂ ವಿಶ್ಲೇಷಿಸಲಿದ್ದಾರೆ, ಮೋಟಾರ್‌ಗಳ ಒಂದೊಂದು ಸೆಂಟಿಮೀಟರನ್ನೂ ಪರೀಕ್ಷಿಸಲಿದ್ದಾರೆ, ಅಸಂಖ್ಯ ಪರೀಕ್ಷೆಗಳನ್ನು ನಡೆಸಿ, ಉತ್ತರ ಕಂಡುಕೊಳ್ಳಲಿದ್ದಾರೆ.
ಪಿಎಸ್‌ಎಲ್‌ವಿ ಖಂಡಿತಾ ಮುಗಿದುಹೋದ ಅಧ್ಯಾಯವಲ್ಲ. ಅದು ಈಗೊಂದು ಕಷ್ಟಕರ ಹಾದಿಯಲ್ಲಿದೆಯಷ್ಟೇ. ಇಂತಹ ಸಮಸ್ಯೆಗಳು ಇಸ್ರೋದ ತಂಡವನ್ನು ಇನ್ನಷ್ಟು ಚುರುಕಾಗಿಸಿ, ವ್ಯವಸ್ಥೆಯನ್ನು ಬಲಪಡಿಸಲಿದೆ. ಮುಂದಿನ ಬಾರಿ ಪಿಎಸ್‌ಎಲ್‌ವಿ ಖಂಡಿತವಾಗಿಯೂ ಹಾರಾಟ ನಡೆಸಲಿದ್ದು, ಆಗ ಅದು ಉಪಗ್ರಹಗಳನ್ನು ಮಾತ್ರವಲ್ಲದೆ, ಹಿಂದಿನ ಕಷ್ಟಕರ ಅನುಭವಗಳಿಂದ ಕಲಿತ ಪಾಠಗಳನ್ನೂ ಒಯ್ಯಲಿದೆ. ಭಾರತದ ಬಾಹ್ಯಾಕಾಶ ಪ್ರಯಾಣ ಇಂತಹ ವೈಫಲ್ಯಗಳಿಂದ ನಿಲುಗಡೆ ಹೊಂದುವುದಿಲ್ಲ. ಅದು ತನ್ನ ವೈಫಲ್ಯಗಳಿಂದ ಪಾಠ ಕಲಿತು, ಮತ್ತೆ ಮುಂದೆ ಮುಂದೆ ಸಾಗಲಿದೆ.
ಗಿರೀಶ್ ಲಿಂಗಣ್ಣ ಹಿನ್ನೆಲೆ
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected]
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications