ಕಾವೇರಿ ನೀರು ಕಳ್ಳತನ, ಸೋರಿಕೆಗೆ ಬ್ರೇಕ್: AI-ರೋಬೋಟ್ ತಂತ್ರಜ್ಞಾನಕ್ಕೆ ಜಲಮಂಡಳಿ ಮೊರೆ
ಬೆಂಗಳೂರು: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ 'ಎಐ ವಾಟರ್ ಶೃಂಗಸಭೆ 2026' ಆಯೋಜಿಸಿದ್ದ ಬೆಂಗಳೂರು ಜಲಮಂಡಳಿ ಮತ್ತು ನೀರು ಸರಬರಾಜು ಮಂಡಳಿಯು ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ಭವಿಷ್ಯದ ನೀರಿನ ಸವಾಲುಗಳನ್ನು ಎದುರಿಸಲು ಜಲಮಂಡಳಿ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಯುವ ಸ್ಟಾರ್ಟ್-ಅಪ್‌ಗಳಿಗೆ ತಮ್ಮ ವಿನೂತನ ಐಡಿಯಾಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಮುಕ್ತ ಅವಕಾಶ ಸಹ ನೀಡಿದೆ.
ಕಾವೇರಿ ನೀರಿನ ಕಳ್ಳತನ ಹಾಗೂ ನೀರು ಸೋರಿಕೆ ತಡೆಗೆ ಎಐ (AI) ಮತ್ತು ರೋಬೋಟಿಕ್ ತಂತ್ರಜ್ಞಾನದ ಅಳವಡಿಕೆಗೆ ಜಲಮಮಡಳಿ ಅಧಿಕಾರಿಗಳು ಮುಂದಾಗಿದ್ದಾರೆ. ಲೆಕ್ಕಕ್ಕೆ ಸಿಗದ ನೀರು ಹಾಗೂ ಆದಾಯ ತರದ ನೀರಿನ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ, ಜಲಮಂಡಳಿಯು ಸ್ಮಾರ್ಟ್ ಟೆರ್ರಾ (SmartTerra) ಮತ್ತು ಸೊಲಿನಾಸ್ (Solinas) ಎಂಬ ಸ್ಟಾರ್ಟ್-ಅಪ್‌ಗಳ ಜಂಟಿ ಅಧ್ಯಯನಕ್ಕೆ ಒಪ್ಪಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಧ್ಯಯನವು ಟೈಟಾನ್ ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ಸ್ 2.0 ಯೋಜನೆಯಡಿ ಆಯ್ಕೆಯಾಗಿದ್ದು, ಟೈಟಾನ್ ಕಂಪನಿ ಲಿಮಿಟೆಡ್‌ನ ಅನುದಾನದಿಂದ ನಡೆಯಲಿದೆ. ವಿಲ್‌ಗ್ರೋ (Villgro) ಇನ್‌ಕ್ಯುಬೇಷನ್ ಹಾಗೂ ವೆಲ್ ಲ್ಯಾಬ್ಸ್ ಈ ಯೋಜನೆಗೆ ತಾಂತ್ರಿಕ ಪಾಲುದಾರರಾಗಿ ಕಾರ್ಯ ನಿರ್ವಹಿಸಲಿವೆ. ಒಂದು ವರ್ಷದ ಅವಧಿಯ ಈ ಅಧ್ಯಯನದಿಂದ ಜಲಮಂಡಳಿಗೆ ಯಾವ ಆರ್ಥಿಕ ಹೊರೆ ಉಮಟಾಗುವುದಿಲ್ಲ. ಬದಲಾಗಿ ಶೂನ್ಯ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ. ಕೇವಲ ಪೈಪ್‌ಗಳ ದುರಸ್ತಿ, ಬದಲಿ ಹಾಗೂ ಉತ್ಖನನದಂತಹ ಅಗತ್ಯ ಸಿವಿಲ್ ಕಾಮಗಾರಿಗಳನ್ನು ಮಾತ್ರ ಜಲಮಂಡಳಿ ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸಲಿದೆ ಎಂದು ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹತ್ ತಿಳಿಸಿದ್ದಾರೆ.
ಜಲಮಂಡಳಿಯಲ್ಲಿ AI ಬಳಕೆ ಹೇಗೆ?
* ಮೊದಲು ನೀರು ಸೋರಿಕೆಯಾಗುವ ಮತ್ತು ಅಪಾಯದ ಪೈಪ್‌ಲೈನ್ ಇರುವ ಜಾಗವನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ವಿಶ್ಲೇಷಣೆ ಬಳಸಿಕೊಳ್ಳಲಾಗುತ್ತದೆ.
* ಸೊಲಿನಾಸ್ ಸಂಸ್ಥೆಯು ಪೈಪ್‌ಗಳ ಒಳಗೆ ರೋಬೋಟ್‌ಗಳನ್ನು ಕಳುಹಿಸಿ ತಪಾಸಣೆ ನಡೆಸಲಿದೆ.
* ಸ್ಮಾರ್ಟ್ ಟೆರ್ರಾ ಸಂಸ್ಥೆಯು ಶಬ್ದ ತರಂಗಗಳ ಮೂಲಕ ಸೋರಿಕೆಯ ನಿಖರ ಸ್ಥಳವನ್ನು ನೆಲ ಅಗೆಯದೇ ಪತ್ತೆ ಮಾಡಲು ಸಹಕಾರಿಯಾಗುತ್ತದೆ.
* ಈ ನವೀನ ವಿಧಾನಗಳು ನೀರು ಪೂರೈಕೆ, ಮೀಟರ್‌ಗಳ ಬೇಡಿಕೆ ಮತ್ತು ಸೋರಿಕೆಯ ನಷ್ಟವನ್ನು ನಿರಂತರವಾಗಿ ಕಣ್ಗಾವಲಿನಲ್ಲಿಡುತ್ತದೆ. ವೆಚ್ಚ ಕಡಿಮೆ ಮಾಡಿ ಜಲಮಂಡಳಿ ಆದಾಯ ಹೆಚ್ಚಿಸಲಿದೆ.
ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗಳಿಗೆ, ಯುವ ಸ್ಟಾರ್ಟ್-ಅಪ್‌ಗಳಿಗೆ ಜಲಮಂಡಳಿಯು 'ಟೆಸ್ಟ್ ಬೆಡ್' ಆಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿದೆ. ನವೋದ್ಯಮಗಳ ಇಂತಹ ದತ್ತಾಂಶ ಆಧಾರಿತ ವೈಜ್ಞಾನಿಕ ವಿಧಾನಗಳು ಮತ್ತು ಡಿಜಿಟಲ್ ವರ್ಕ್‌ಫ್ಲೋಗಳು ನಗರದ ನೀರು ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ತರಲಿವೆ ಎಂದು ಊಹಿಸಲಗಿದೆ.
ಈ ಪ್ರಾಯೋಗಿಕ ಅಧ್ಯಯನಕ್ಕಾಗಿ ಆದ್ಯತೆಯ ವಲಯಗಳನ್ನು ಗುರುತಿಸಿ, ಆರಂಭಿಕ ಸಮೀಕ್ಷೆಗೆ ಶೀಘ್ರವೇ ಅನುಮತಿ ನೀಡಲಾಗುವುದು. ಇದರಿಂದ ಬೆಂಗಳೂರು ಜಲಮಂಡಳಿಗೆ ಆಗುತ್ತಿರುವ ಆರ್ಥಿಕ ಹಾನಿ ಹಾಗೂ ಪೈಪ್‌ಲೈನ್‌ನಲ್ಲಿರುವ ಲೋಪದೋಷಗಳಿಂದ ನೀರು ಕಲುಷಿತವಾಗುವುದು ತಪ್ಪಲಿದೆ ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.













Click it and Unblock the Notifications