ಟಿಕೆಟ್ ಆಕಾಂಕ್ಷಿಗಳ ಆಕ್ರೋಶ: ಮೋದಿ, ಬಿರೇನ್ ಸಿಂಗ್ ಪ್ರತಿಕೃತಿ ದಹನ
ಇಂಫಾಲ, ಜನವರಿ 30: ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಇಂದು ಪೂರ್ಣ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಸಿಎಂ ಎನ್ ಬಿರೇನ್ ಸಿಂಗ್ ಅವರು ಹೀಂಗಾಂಗ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿತ್ತು. ಆದರೆ, ಟಿಕೆಟ್ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು, ಟಿಕೆಟ್ ಅಕಾಂಕ್ಷಿಗಳು ಭಾರಿ ಪ್ರತಿಭಟನೆ, ಗಲಭೆ ಎಬ್ಬಿಸಿದ್ದಾರೆ.
ಕೇಂದ್ರ ಸಚಿವ ಭೂಪೇಂದರ್ ಯಾದವ್ ಭಾನುವಾರದಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಣಿಪುರದಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಮೂರನೇ ಎರಡರಷ್ಟು ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಇಂಫಾಲದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿ, ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯದ ವಿವಿಧೆಡೆ ಬಿಜೆಪಿ ಕಚೇರಿಗಳನ್ನು ಧ್ವಂಸಗೊಳಿಸಲಾಗಿದ್ದು, ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಫಲಕಗಳನ್ನು ಹಿಡಿದು ಜಮೆಯಾಗುತ್ತಿದ್ದಾರೆ. ಇಂಫಾಲದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಟಿಕೆಟ್ ವಂಚಿತರಾದ ಹಲವಾರು ನಾಯಕರು ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಬಂದಿವೆ. ಆದರೆ, ನಿಖರವಾದ ಸಂಖ್ಯೆ ಸಿಕ್ಕಿಲ್ಲ, ಮೂಲಗಳ ಪ್ರಕಾರ, ಕಾಂಗ್ರೆಸ್‌ನಿಂದ ಪಕ್ಷಾಂತರಿಗಳಿಗೆ ಅವಕಾಶ ಕಲ್ಪಿಸಲು ಆಯ್ಕೆಯಾಗದ ಅತೃಪ್ತ ನಾಯಕರಲ್ಲಿ ಹೆಚ್ಚಿನವರು ಇದ್ದಾರೆ.

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ್ದರಿಂದ ಬಿಜೆಪಿಗೆ ಸೇರ್ಪಡೆಗೊಂಡ ಕನಿಷ್ಠ 10 ಮಾಜಿ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡಲಾಗಿದೆ, ಹೊಸ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ, ಮೂಲ ಬಿಜೆಪಿಯ ಹಿರಿಯ ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಸಹಜವಾಗಿ ಆಕ್ರೋಶಭರಿತರಾಗಿದ್ದಾರೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಹೀಂಗಾಂಗ್‌ನ ಸಾಂಪ್ರದಾಯಿಕ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಮಣಿಪುರದ ಮತ್ತೊಬ್ಬ ಪ್ರಮುಖ ಸಚಿವ ಬಿಸ್ವಜಿತ್ ಸಿಂಗ್ ಅವರು ತೊಂಗ್ಜು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಸೋಮತೈ ಸೈಜಾ ಉಖ್ರುಲ್‌ನಿಂದ ಸ್ಪರ್ಧಿಸಲಿದ್ದಾರೆ.
ಮಣಿಪುರ ಬಿಜೆಪಿ ಮೂರು ಮಹಿಳೆಯರು ಮತ್ತು ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದೆ. ಬಿಜೆಪಿಗೆ ಸೇರ್ಪಡೆಗೊಂಡ ಮಣಿಪುರ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಗೋವಿಂದಸ್ ಕೊಂತೌಜಮ್ ಕೂಡ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆದಿದ್ದಾರೆ.
ಮುಖ್ಯಮಂತ್ರಿಯವರ ಬಹುತೇಕ ನಿಷ್ಠಾವಂತರಿಗೆ ಪಕ್ಷದ ಟಿಕೆಟ್ ಸಿಕ್ಕಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಮೂವರು ಮಹಿಳೆಯರು ಕಾಂಗ್‌ಪೋಕ್ಪಿಯಿಂದ ನೆಮ್ಚಾ ಕಿಪ್‌ಗೆನ್, ಚಾಂಡೆಲ್‌ನಿಂದ ಎಸ್‌ಎಸ್ ಒಲಿಶ್ ಮತ್ತು ನವೋರಿಯಾಪಖಂಗ್ಲಾಕ್ಪಾದಿಂದ ಸೊರೈಸಮ್ ಕೆಬಿ ದೇವಿ. ಬಿಜೆಪಿಯು ಮೂರು ಮಾಜಿ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳನ್ನು ಸಹ ಕಣಕ್ಕಿಳಿಸಿದೆ - ನುಂಗ್ಬಾದಿಂದ ದಿಂಗಂಗ್ಲುಂಗ್ ಗಂಗ್ಮೇ, ಕಾಕ್ಚಿಂಗ್‌ನಿಂದ ಯೆಂಗ್‌ಖೋಮ್ ಸುರ್ಚಂದ್ರ ಸಿಂಗ್ ಮತ್ತು ಉರಿಪೋಕ್‌ನಿಂದ ರಘುಮಣಿ ಸಿಂಗ್ ಸ್ಪರ್ಧಿಸುತ್ತಿದ್ದಾರೆ.

ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಬಹುಮತ ಹೊಂದಿದೆ. ಇದರಲ್ಲಿ 30 ಬಿಜೆಪಿ ಶಾಸಕರು, ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮೂವರು ಶಾಸಕರು, ನಾಲ್ಕು ನಾಗಾ ಪೀಪಲ್ಸ್ ಫ್ರಂಟ್ ಮತ್ತು ಮೂವರು ಸ್ವತಂತ್ರರು ಸೇರಿದ್ದಾರೆ.
Recommended Video
ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ಫೆಬ್ರವರಿ 27ರಂದು 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸೈಕುಲ್, ಕಂಗ್ ಪೊಕ್ಪಿ, ಸೈತು, ತಿಪಾಯಿಮುಖ್, ಥಾಂಲೊನ್, ಹೆಂಗ್ಲೆಪ್, ಚುರಾಚಂದಾಪುರ್, ಸಾಯಿಕೋಟ್ ಹಾಗೂ ಸಿಂಘಾಟ್ ಕ್ಷೇತ್ರಗಳು ಗುಡ್ಡಗಾಡು ಪ್ರದೇಶದಲ್ಲಿದ್ದು ಈ ಪ್ರದೇಶದಲ್ಲಿ ಬಹುತೇಕ ಕ್ರೈಸ್ತ ಸಮುದಾಯದ ಮತದಾರರಿದ್ದಾರೆ. ಎರಡನೇ ಮತದಾನ ಮಾರ್ಚ್ 3 ರಂದು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರ ಬರಲಿದೆ.
ಮಾರ್ಚ್ 10 ರಂದು ಫಲಿತಾಂಶ:
ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯ ಚುನಾವಣೆಗಳು ನಡೆಯುತ್ತಿವೆ. ಇವುಗಳಲ್ಲಿ ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.












Click it and Unblock the Notifications