Himachal Pradesh: ಮುಖ್ಯಮಂತ್ರಿ ಯಾರೆಂದು ನಿರ್ಧರಿಸಲಿರುವ ಪ್ರಿಯಾಂಕಾ ಗಾಂಧಿ
ಶಿಮ್ಲಾ, ಡಿಸೆಂಬರ್ 10: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಗೆಲುವಿಗೆ ಕಾರಣರಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸಿದೆ. ಹಿಮಾಚಲ ಪ್ರದೇಶದ 68 ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 25 ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಗಿದೆ. ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
Recommended Video

ಹಿಮಾಚಲ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ
ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ, ಪ್ರಭಾವಿ ರಾಜಕಾರಣು ಪ್ರತಿಭಾ ಸಿಂಗ್ ಅವರು ಹಿಮಾಚಲ ಸಿಎಂ ರೇಸ್‌ನಲ್ಲಿ ಇದ್ದಾರೆ. ಇದರ ಹೊರತಾಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ರೇಸ್‌ನಲ್ಲಿ ಇನ್ನೂ ಮೂವರು ಇದ್ದಾರೆ. ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಖವಿಂದರ್ ಸಿಂಗ್ ಸುಖು ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಮುಖೇಶ್ ಅಗ್ನಿಹೋತ್ರಿ ಮತ್ತು ಪ್ರಭಾವಿ ಶಾಸಕ ಹರ್ಷವರ್ಧನ್ ಚೌಹಾಣ್ ಕೂಡ ಸಿಎಂ ರೇಸ್‌ನಲ್ಲಿ ಇದ್ದಾರೆ.

ಸಿಎಂ ಯಾರೆಂದು ಭಾನುವಾರದೊಳಗೆ ನಿರ್ಧಾರ
ಶುಕ್ರವಾರ ಸಂಜೆ ರಾಜ್ಯದ 40 ಕಾಂಗ್ರೆಸ್ ಶಾಸಕರು ಸಭೆ ನಡೆಸಿದ್ದಾರೆ. ಸಿಎಂ ಯಾರಾಗಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ ನಿರ್ಧಾರ ಮಾಡಬೇಕು. ಅದಕ್ಕೆ ನಾವೆಲ್ಲರೂ ಬದ್ದರಾಗಿರುವುದಾಗಿ ಶಾಸಕರು ತಿಳಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರವನ್ನು ಭಾನುವಾರದೊಳಗೆ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ನಡೆದ ಶಾಸಕರ ಸಭೆಯು ಕೇಂದ್ರ ಮೇಲ್ವಿಚಾರಕರಾದ ರಾಜೀವ್ ಶುಕ್ಲಾ, ಭೂಪಿಂದರ್ ಹೂಡಾ ಮತ್ತು ಭೂಪೇಶ್ ಬಘೇಲ್ ಅವರ ಸಮನ್ವಯದೊಂದಿಗೆ ನಡೆದಿದೆ. ಯಾರಿಗೆ ಹೆಚ್ಚು ಬೆಂಬಲವಿದೆ ಎಂದು ಅಳೆಯಲು ಅವರು ಪ್ರತಿ ಶಾಸಕರೊಂದಿಗೆ ಮಾತನಾಡಿದ್ದಾರೆ.

ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಪ್ರಭಾವ
ಪ್ರಿಯಾಂಕಾ ಗಾಂಧಿ ಅವರು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪ್ರಚಾರವನ್ನು ಮುನ್ನಡೆಸಿದ್ದರು. ಹೊಸ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಹಲವಾರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. ಚುನಾವಣೆಯ ಕಾರ್ಯತಂತ್ರದ ಯೋಜನೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷಕ್ಕೆ ಗೆಲುವನ್ನು ಖಾತ್ರಿಪಡಿಸುವಲ್ಲಿ ಮತ್ತು ಬಿಜೆಪಿಯ ಚುನಾವಣಾ ಯಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಪ್ರಿಯಾಂಕಾ ಸಫಲರಾಗಿದ್ದಾರೆ. ಹೀಗಾಗಿ, ಅವರ ನಾಯಕತ್ವವನ್ನು ಅನೇಕ ನಾಯಕರು ಶ್ಲಾಘಿಸಿದ್ದಾರೆ.
ಪ್ರಚಾರದ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿಯವರ ಮೊದಲ ಚುನಾವಣಾ ಯಶಸ್ಸು ಇದಾಗಿದೆ. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಚಾರವನ್ನು ಮುನ್ನಡೆಸಿದಾಗ ಪಕ್ಷವು ಸೋತಿತ್ತು.
ಸಿರ್ಮೂರ್, ಕಂಗ್ರಾ, ಸೋಲನ್ ಮತ್ತು ಉನಾದಲ್ಲಿ ನಡೆದ ಸಭೆಗಳಲ್ಲಿ ಪ್ರಿಯಾಂಕಾ ಗಾಂಧಿ ಅವರು ಅಗ್ನಿಪಥ್, ಹಣದುಬ್ಬರ, ನಿರುದ್ಯೋಗ ಮತ್ತು ಹಳೆಯ ಪಿಂಚಣಿ ಯೋಜನೆಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು. ಇದು ಹಿಮಾಚಲ ಪ್ರದೇಶದ ಜನರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಯಾರಾಗಬೇಕೆಂದು ನಿರ್ಧರಿಸಲಿರುವ ಪ್ರಿಯಾಂಕಾ
ನಿನ್ನೆ ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಲ್ಲಿ ಹೈಡ್ರಾಮ ನಡೆಯಿತು. ಪ್ರಭಾವಿ ನಾಯಕಿ ಪ್ರತಿಭಾ ಸಿಂಗ್ ಅವರ ಬೆಂಬಲಿಗರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾರನ್ನು ತಡೆದರು. ಮೂರು ಬಾರಿ ಸಂಸದರಾಗಿರುವ, ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು 'ಉನ್ನತ ಹುದ್ದೆಗೆ ಅರ್ಹರು' ಎಂದು ಬೆಂಬಲಿಗರು ಒತ್ತಾಯಿಸಿದ್ದರು. ಆದರೆ, ಮುಖ್ಯಮಂತ್ರಿ ಕುರಿತ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಬೇಕೆಂದು ಶಾಸಕರು ಹೇಳಿದ್ದಾರೆ. ಹೀಗಾಗಿ, ಪ್ರಿಯಾಂಕಾ ಗಾಂಧಿ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.












Click it and Unblock the Notifications