ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ನವದೆಹಲಿ, ಆಗಸ್ಟ್ 19: ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರ ತಾತ್ಕಾಲಿಕ ಅವಧಿ ಮುಕ್ತಾಯವಾಗಿದೆ. ಹೊಸ ಅಧ್ಯಕ್ಷರ ನೇಮಕಾತಿ ತನಕ ಹಂಗಾಮಿಯಾಗಿ ಮುಂದುವರೆಯಲಿದ್ದಾರೆ. ಈ ನಡುವೆ ಗಾಂಧಿ(ಸೋನಿಯಾ ಗಾಂಧಿ ಕುಟುಂಬಸ್ಥರು)ಯೇತರ ಅಧ್ಯಕ್ಷರನ್ನು ನೇಮಿಸುವಂತೆ ಎಐಸಿಸಿಯಲ್ಲಿ ದೊಡ್ಡ ಕೂಗೆದ್ದಿದೆ.
ಇದಕ್ಕೆ ಪೂರಕವಾಗಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡಾ ಇತ್ತೀಚೆಗೆ ಎಐಸಿಸಿಗೆ ಗಾಂಧಿ ಕುಟುಂಬಕ್ಕೆ ಸೇರಿರದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿ ಎಂದಿದ್ದಾರೆ. ಕಾಂಗ್ರೆಸ್ ನಾಯಕ, ಸೋದರ ರಾಹುಲ್ ಹೇಳಿಕೆಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಹೇಳಿದ್ದಾರೆ.
ಅಮೆರಿಕದ ಪ್ರದೀಪ್ ಛಿಬ್ಬರ್ ಹಾಗೂ ಹರ್ಷ್ ಶಾ ಅವರು ಬರೆದಿರುವ "India Tomorrow: Conversations with the Next generation of Political Leaders" ಎಂಬ ಪುಸ್ತಕದಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಅವರ ಹೇಳಿಕೆ ದಾಖಲಿಸಲಾಗಿದೆ.

ನಮ್ಮ ಕುಟುಂಬದಿಂದ ಯಾರೂ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಗಾಂಧಿ ಕುಟುಂಬಕ್ಕೆ ಸೇರಿಲ್ಲದವರನ್ನು ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
'ನೀನು ಉತ್ತರ ಪ್ರದೇಶದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ, ಅಂಡಮಾನ್ ನಿಕೋಬಾರ್ಗೆ ಹೋಗು' ಎಂದು ಹೇಳಿದರೂ ನಾನು ಪಕ್ಷದ ಹಿತದೃಷ್ಟಿಯಿಂದ ಆದೇಶ ಸ್ವೀಕರಿಸಿ ಖಂಡಿತ ಪಾಲಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
ಮನಸ್ಸಿಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಕಳೆದ ವರ್ಷ ಆಗಸ್ಟ್ 10ರಂದು ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. 1998 ರಿಂದ 2017ರ ತನಕ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದ ಸೋನಿಯಾ ಅವರು ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದರು. ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ) ಎರಡು ಸಾರ್ವತ್ರಿಕ ಚುನಾವಣೆಯಲ್ಲಿಗೆಲುವು ಸಾಧಿಸಿತ್ತು. ಯುಪಿಎ ಅಧ್ಯಕ್ಷೆಯಾಗಿ ಕೂಡಾ ಸೋನಿಯಾ ಮುಂದುವರೆದಿದ್ದಾರೆ.












Click it and Unblock the Notifications