ಬೆಲೆ ಏರಿಕೆ: ಕಣ್ಣೀರು ಹಾಕಿದ ವ್ಯಾಪಾರಿ ರಾಮೇಶ್ವರ್ ಅವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ನವದೆಹಲಿ ಆಗಸ್ಟ್ 15: ಬೆಲೆ ಏರಿಕೆಯಿಂದ ಕಣ್ಣೀರು ಹಾಕಿದ ತರಕಾರಿ ವ್ಯಾಪಾರಿ ರಾಮೇಶ್ವರ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಸೋಮವಾರ ತರಕಾರಿ ವ್ಯಾಪಾರಿ ರಾಮೇಶ್ವರ್ ಅವರೊಂದಿಗೆ ರಾಹುಲ್ ಗಾಂಧಿ ಅವರು ಊಟ ಮಾಡಿದರು.
ರಾಮೇಶ್ವರ್ ಜೊತೆಗಿನ ತಮ್ಮ ಚಿತ್ರವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ "ರಾಮೇಶ್ವರ್ ಜಿ ಒಬ್ಬ ಉತ್ಸಾಹಭರಿತ ವ್ಯಕ್ತಿ! ಅವರಲ್ಲಿ, ಕೋಟಿಗಟ್ಟಲೆ ಭಾರತೀಯರ ಸೌಹಾರ್ದಯುತ ಸ್ವಭಾವದ ನೋಟವನ್ನು ಕಾಣಬಹುದು." ಎಂದು ಬರೆದಿದ್ದಾರೆ. "ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನಗುಮುಖದಿಂದ ಮುನ್ನಡೆಯುವವರು ನಿಜವಾಗಿಯೂ 'ಭಾರತ ಭಾಗ್ಯ ವಿಧಾತ (ಭಾರತದ ಹಣೆಬರಹ ತಯಾರಕರು)" ಎಂದು ಗಾಂಧಿ ಹೇಳಿದರು.

ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುವ ಎಕ್ಸ್‌ನಲ್ಲಿ ಕಾಂಗ್ರೆಸ್ ಈ ಚಿತ್ರವನ್ನು ಹಂಚಿಕೊಂಡಿದೆ. "ರಾಮೇಶ್ವರ್ ಅವರು ಜನರ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು" ಎಂದು ಹೇಳಿದೆ. ಎಕ್ಸ್‌ನಲ್ಲಿ ಹಲವಾರು ಜನರು ಹಂಚಿಕೊಂಡ ಚಿತ್ರಗಳಲ್ಲಿ ರಾಹುಲ್ ಗಾಂಧಿ ಮತ್ತು ರಾಮೇಶ್ವರ್ ಅವರು ಮನೆಯಲ್ಲಿ ಊಟ ಮಾಡುವುದನ್ನು ಕಾಣಬಹುದು ಮತ್ತು ಇಬ್ಬರು ಭೇಟಿಯ ಸಮಯದಲ್ಲಿ ಲಘು ಕ್ಷಣಗಳನ್ನು ಹಂಚಿಕೊಂಡಿರುವುದು ಕಾಣಬಹುದು.
रामेश्वर जी एक ज़िंदादिल इंसान हैं!
— Rahul Gandhi (@RahulGandhi) August 14, 2023
उनमें करोड़ों भारतीयों के सहज स्वभाव की झलक दिखती है।
विपरीत परिस्थितियों में भी मुस्कुराते हुए मज़बूती से आगे बढ़ने वाले ही सही मायने में 'भारत भाग्य विधाता' हैं। pic.twitter.com/DjOrqzLwhj
ರಾಮೇಶ್ವರ್ ಯಾರು?
ಟೊಮೆಟೊ ಬೆಲೆ ನೂರರ ಗಡಿ ದಾಟಿ ತಿಂಗಳು ಕಳೆಯುತ್ತಾ ಬಂದಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಸಾಧಾರಣ ಗುಣಮಟ್ಟದ ಟೊಮೆಟೊವನ್ನು 120 ರಿಂದ 150 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆಗೆ ಸಂಬಂಧಿಸಿ ದೆಹಲಿಯ ಗಲ್ಲಿಗಳಲ್ಲಿ ತರಕಾರಿ ಮಾರುವ ಚಿಲ್ಲರೆ ವ್ಯಾಪಾರಿಯೊಬ್ಬರು ಕಣ್ಣೀರಿಡುತ್ತಾ ಮಾತನಾಡಿರುವ ಮನಕಲಕುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಖ್ಯಾತ ನಟ ವಿಜಯ್ ವರ್ಮಾ ಸೇರಿದಂತೆ ಹಲವರು ಈ ವಿಡಿಯೋ ತುಣುಕನ್ನು ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದರು. ಜುಲೈ 20ರ ಬೆಳಗ್ಗೆ ತರಕಾರಿ ವ್ಯಾಪಾರಿ ರಾಮೇಶ್ವರ್ ಎಂಬುವವರು ದೆಹಲಿಯ ಆಜಾದ್‌ಪುರ್ ಮಂಡಿಯಲ್ಲಿ ಟೊಮೆಟೊ ಖರೀದಿಸಲು ಬಂದಿದ್ದಾರೆ. ಆದರೆ, ದುಬಾರಿ ಬೆಲೆಯ ಕಾರಣಕ್ಕೆ ಯಾವುದೇ ತರಕಾರಿಯನ್ನು ಖರೀದಿಸಲಾಗದೆ ಖಾಲಿ ಕೈಯಲ್ಲಿ ಮನೆಗೆ ಹಿಂತಿರುಗಿದ್ದಾರೆ. ಇದನ್ನು ಗಮನಿಸಿದ ʼಲಲ್ಲನ್‌ಟಾಪ್ʼ ಯುಟ್ಯೂಬ್ ಮಾಧ್ಯಮದ ಪ್ರತಿನಿಧಿ ಭಾನು ಕುಮಾರ್ ಝಾ ರಾಮೇಶ್ವರ್ ಅವರನ್ನು ಮಾತನಾಡಿಸಿ ವ್ಯಾಪಾರ-ವಹಿವಾಟಿನ ಬಗ್ಗೆ ವಿಚಾರಿಸುತ್ತಲೇ ರಾಮೇಶ್ವರ್ ಕಣ್ಣೀರಾಕಿದ್ದರು.
ಟೊಮೆಟೊ ಖರೀದಿಸಲು ಬಂದಿದ್ದಿರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಮೇಶ್ವರ್, "ಹೌದು, ನಾನು ಟೊಮೆಟೊ ಖರೀದಿಸುವ ಸಲುವಾಗಿ ಬೆಳಗ್ಗೆ ಬೇಗ ನಾಲ್ಕುವರೆಗೆ ಎದ್ದು ಬಂದೆ. ಆದರೆ, ಟೊಮೆಟೊ ಬೆಲೆ ತುಂಬಾ ದುಬಾರಿಯಾಗಿದೆ. ಎಪಿಎಂಸಿ ಮಂಡಿಯಲ್ಲೇ ಒಂದು ಕೆಜಿ ಟೊಮೆಟೊವನ್ನು 120 ರಿಂದ 140 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನಾವು ಇಷ್ಟು ದುಬಾರಿ ಮೊತ್ತಕ್ಕೆ ಖರೀದಿ ಮಾಡಿ, ನಮ್ಮ ಗಲ್ಲಿಗಳಲ್ಲಿ ಅಲ್ಪ ಲಾಭಕ್ಕೆ ಮಾರಾಟ ಮಾಡಲು ಹೋದಾಗ ಖರೀದಿಸಲು ಜನ ಮುಂದೆ ಬರದಿದ್ದರೆ ಬಹಳ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಟೊಮೆಟೊ ಖರೀದಿ ಮಾಡಲು ನನಗೆ ಧೈರ್ಯ ಸಾಲಲಿಲ್ಲ" ಎಂದಿದ್ದಾರೆ.
ಬೇರೆ ತರಕಾರಿ ಕೊಳ್ಳುತ್ತೀಯಾ ಎಂದು ಕೇಳಿದಾಗ ಪೈಸೆ ನಹೀಂ (ಹಣವಿಲ್ಲ) ಎಂದು ಹೇಳಿ ಮುರಿದುಬಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಬೆಲೆ ಏರಿಕೆಯ ಬಗ್ಗೆ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. ಹಲವಾರು ಇತರ ಕಾಂಗ್ರೆಸ್ ನಾಯಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications