Prashant Kishor: ಈ ನಾಲ್ಕು ಕಾರಣದಿಂದ ಬಿಜೆಪಿ ಚುನಾವಣೆಗಳಲ್ಲಿ ಗೆಲ್ಲುತ್ತೆ: ಪ್ರಶಾಂತ್ ಕಿಶೋರ್
ಬಿಹಾರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಬಿಜೆಪಿ ಬಗ್ಗೆ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಬಿಜೆಪಿ ಅಸಲಿಗೆ ಯಾವ ಬಲದಿಂದ ಪ್ರತಿ ಬಾರಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ ಎಂಬುದನ್ನು ವಿವರಿಸಿದ್ದಾರೆ. ಬಿಜೆಪಿ ಅಥವಾ ಬೇರೆ ಯಾವುದೇ ಪಕ್ಷವಾದರೂ ಅವರ ಬಲ ಏನು ಎಂದು ತಿಳಿದುಕೊಳ್ಳದೆ ಮಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ಬಿಜೆಪಿಯ ಬಲ ಅಂದ್ರೆ ಮೋದಿ ಅಲ್ಲ, ಅಮಿತ್ ಶಾ ಅಥವಾ ಆರ್‌ಎಸ್‌ಎಸ್ ಕೂಡ ಅಲ್ಲ ಎಂದಿದ್ದಾರೆ. ಅವರು ನಾಲ್ಕು ಕಾರಣಗಳಿಂದ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಒಂದು ಹಿಂದುತ್ವದ ಸೈದ್ಧಾಂತಿಕ ನಿಲುವು, ಎರಡನೇಯದ್ದು ಮೋದಿಯವರ ನವ ರಾಷ್ಟ್ರೀಯತೆ. ಆದರೆ ಭಾರತ ವಿಶ್ವಗುರು ಅಂತ ಹೇಳುವುದಲ್ಲ. ಇದಲ್ಲದೆ ಅವರು ಹೊರತಂದ ಸಂಘಟಿತ ಹಾಗೂ ಆರ್ಥಿಕ ವಿಚಾರಗಳು. ಈ ನಾಲ್ಕು ಕಾರಣಗಳಿಂದ ಮಾತ್ರವೇ ಅವರು ಚುನಾವಣೆಗಳಲ್ಲಿ ಜಯಭೇರಿ ಬಾರಿಸುತ್ತಿದ್ದಾರೆ.

ಹೀಗಾಗಿ ಬಿಜೆಪಿಯೇ ಆಗಿರಲಿ, ಬೇರೆ ಇನ್ಯಾವುದೇ ಪಕ್ಷವಾಗಿರಲಿ, ಈ ನಾಲ್ಕರಲ್ಲಿ ಮೂರನ್ನಾದರೂ ಹಿಂದಿಕ್ಕುವ ಸಾಮರ್ಥ್ಯ ಹೊಂದಿರಬೇಕು. ಈ ಹಿಂದೆ ಬಿಜೆಪಿ ಹತ್ತು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿತ್ತು. ಆಗ ಅವರು ತುಂಬಾ ಕಷ್ಟಪಟ್ಟು ಹೊಸ ಸೈದ್ಧಾಂತಿಕ ನೆಲೆಗಟ್ಟನ್ನು ಸೃಷ್ಟಿಸಿದರು. ಅವರು ಸುಮ್ಮನೆ ವಿರೋಧ ಪಕ್ಷದಲ್ಲಿದ್ದು, ಅಧಿಕಾರಕ್ಕೆ ಏರಿದವರಲ್ಲ. ಜನ ಕೂಡ ಹಳೆಯ ಪಕ್ಷದಿಂದ ಬೇಸತ್ತು ಬಿಜೆಪಿಗೆ ಮತ ನೀಡಲಿಲ್ಲ. ರಾಹುಲ್ ಗಾಂಧಿಗೂ ಮತ ಹಾಕಬೇಕು ಅಂತ ಇರಲಿಲ್ಲ. ಬೇರೆ ಯಾರಿಗಾದರೂ ಹಾಕಬಹುದು ಅಂದುಕೊಂಡಿದ್ರು. ಜನ ಸುಮ್ಮನೆ ಬಿಜೆಪಿಗೆ ವೋಟ್ ಹಾಕಲಿಲ್ಲ ಎಂದು ಹೇಳಿದ್ದಾರೆ.
ನಿತೀಶ್ ಇಲ್ಲದೆ ಬಿಹಾರ ಮುಂದಕ್ಕೆ ಹೋಗಲ್ಲ
ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಬಲದ ಬಗ್ಗೆಯೂ ಮಾತನಾಡಿರುವ ಪ್ರಶಾಂತ್ ಕಿಶೋರ್, ಆಲೂಗಡ್ಡೆ ಇಲ್ಲದೆ ತರಕಾರಿ ಮಾಡಲು ಸಾಧ್ಯವಿಲ್ಲ ಅಂತಾರಲ್ಲ? ಹಾಗೆಯೇ ನಿತೀಶ್ ಕುಮಾರ್. ಅವರಿಲ್ಲದೆ ಬಿಹಾರವನ್ನು ಮುನ್ನಡೆಸಲು ಸಾಧ್ಯವಿಲ್ಲ. ಬಿಹಾರದಲ್ಲಿ ಯಾರಿಗೇ ಮತ ಹಾಕಿದ್ರೂ, ಅಂತಿಮವಾಗಿ ನಿತೀಶ್ ಕುಮಾರ್ ಅವರೇ ಸಿಎಂ ಆಗ್ತಾರೆ. ನೀವು ಕಾಂಗ್ರೆಸ್, ಆರ್‌ಜೆಡಿ, ಬಿಜೆಪಿ, ಜೆಡಿಯು ಸೇರಿ ಯಾವುದೇ ಪಕ್ಷಕ್ಕೆ ಮತ ಹಾಕಿದ್ರೂ, ತಡೀರಿ ನಾನೇ ಸಿಎಂ ಕುರ್ಚಿಯಲ್ಲಿ ಕೂರೋದು ಅಂತ ನಿತೀಶ್ ಕುಮಾರ್ ನಗುತ್ತಾ ಹೇಳ್ತಾರೆ. ಅದೇ ನಿತೀಶ್ ಕುಮಾರ್ ಅವರ ಬಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ನಿತೀಶ್ ಕುಮಾರ್ ಅವರಂತಹ ರಾಜಕಾರಣಿಗಳು ತಮ್ಮ ಸಾಫ್ಟ್ ಇಮೇಜ್‌ನಿಂದಲೇ ತಮ್ಮ ನ್ಯೂನತೆಗಳನ್ನ ಮುಚ್ಚಿಕೊಳ್ಳುತ್ತಾರೆ. ಅವರು ಬಲಶಾಲಿ ನಾಯಕರಾಗಿ ಕಾಣಿಸಿಕೊಳ್ಳದಿದ್ದರೂ ತಮ್ಮದೇ ಆದ ಮೃದು ವ್ಯಕ್ತಿತ್ವದಿಂದ ಜನರನ್ನು ಸೆಳೆಯುತ್ತಾರೆ. ಅದೇ ಅವರ ಅತಿ ದೊಡ್ಡ ಬಲ ಎನ್ನಬಹುದು. ಹೀಗಾಗಿ ಜನ ಕೂಡ ಅವರ ಮೃದು ಸ್ವಭಾವವನ್ನು ಮೆಚ್ಚಿ ಸುಲಭವಾಗಿ ಮತ ಹಾಕುತ್ತಾರೆ ಎಂದಿದ್ದಾರೆ.












Click it and Unblock the Notifications