ಪ್ರಕಾಶ್ ರಾಜ್‌ಗೆ 'ರಾಮಾಯಣ' ಹೇಳಿಕೆ ಸಂಕಷ್ಟ: 100 ಕೋಟಿ ರೂ ದಾವೆ, ಕಾನೂನು ಎಚ್ಚರಿಕೆ
ನೆಲ್ಲೂರು: ಕೇರಳ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ತಮ್ಮ ಹೇಳಿಕೆಗಳಿಂದ ಸಂಕಷ್ಟ ಎದುರಾಗಿದೆ. ಏಕೆಂದರೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಬೋರ್ಡ್ ಸದಸ್ಯ ಭಾನುಪ್ ಪ್ರಕಾಶ್ ರೆಡ್ಡಿ ಅವರು ಪ್ರಕಾಶ್ ರಾಜ್‌ಗೆ ಮಾನನಷ್ಟ ಮೊಕದ್ದಮೆ ನೋಟಿಸ್ ಜಾರಿ ಮಾಡಿದ್ದಾರೆ. ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ
ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರು 'ಸೀತಾರಾಮ ಲಕ್ಷ್ಮಣ' ಕುರಿತು ಮಾತನಾಡಿದ್ದರು. ಅವರ ಹೇಳಿಕೆಯು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಅವರ ಇತ್ತೀಚಿನ ಹೇಳಿಕೆಗಳು ಹಿಂದೂ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ದೂರಿರುವ ಟಿಟಿಡಿಯ ಭಾನುಪ್ ಪ್ರಕಾಶ್ ರೆಡ್ಡಿ ಅವರು 100 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ನೋಟಿಸ್ ಜಾರಿ ಮಾಡಿ ಕಾನೂನು ಎಚ್ಚರಿಕೆ ನೀಡಿದ್ದಾರೆ.

ನೋಟಿಸ್‌ನಲ್ಲಿ ಏನೆಲ್ಲ ಉಲ್ಲೇಖವಿದೆ?
"ಭಗವಾನ್ ರಾಮ ಮತ್ತು ಲಕ್ಷ್ಮಣರು ಉತ್ತರ ಭಾರತದಿಂದ ದಕ್ಷಿಣದ ಮೇಲೆ ಆಕ್ರಮಣ ಮಾಡಲು ಬಂದಿದ್ದರು, ಅದನ್ನು 'ಲಂಕಾ' ಎನ್ನಲಾಯಿತೆಂದು ನೀವು ಅರೋಪಿಸಿದ್ದೀರಿ. ನಿಮ್ಮ ಹೇಳಿಕೆಯು ಇದು ಮಹಾಕಾವ್ಯ ರಾಮಾಯಣದ ಸಂಪೂರ್ಣ ವಿರೂಪಗೊಳಿಸಿದಂತಾಗಿದೆ. ದಕ್ಷಿಣ 'ಲಂಕಾ' ಮತ್ತು ಉತ್ತರವನ್ನು ಆಕ್ರಮಣಕಾರಿ ಎಂದು ವರ್ಗೀಕರಿಸಿದ್ದೀರಿ. ಪ್ರಕಾಶ್ ರಾಜ್ ಅವರು ಉದ್ದೇಶಪೂರ್ವಕವಾಗಿ ಪ್ರಾದೇಶಿಕ ದ್ವೇಷ ಉಂಟಾಗುವಂತೆ ಪ್ರಚೋದನೆ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಆರ್ಯ-ದ್ರಾವಿಡ ವಿಭಜನೆ ಖಂಡನೀಯ ಎಂದಿದ್ದಾರೆ.
ಪ್ರಕಾಶ್ ರಾಜ್ ಈ ಮೂಲಕ ನೀವು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ಸಂಪೂರ್ಣ ದುರುದ್ದೇಶದಿಂದ ಕೂಡಿದ್ದು, ತಪ್ಪು ಹೇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಹೇಳಿಕೆಗಳು ರಾಮಾಯಣವನ್ನು ವಿರೂಪಗೊಳಿಸುವಂತಿವೆ, ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
ಕಾನೂನು ಕ್ರಮದ ಎಚ್ಚರಿಕೆ
ನೋಟಿಸ್ ಜಾರಿಯಾದ ಮುಂದಿನ ಒಂದು ವಾರ (ಏಳು ದಿನ) ಒಳಗಾಗಿ ಪ್ರಕಾಶ್ ರಾಜ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಭಾನುಪ್ ಪ್ರಕಾಶ್ ರೆಡ್ಡಿ ಆಗ್ರಹಿಸಿದ್ದಾರೆ. ಕ್ಷಮೆ ಕೇಳದಿದ್ದರೆ. 100 ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಕಾನೂನು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಪ್ರಕಾಶ್ ರಾಜ್ ಹೆಳಿಕೆಗಳು ವಾಸ್ತವದಲ್ಲಿ ತಪ್ಪು ಸಂದೇಶ ಸಾರುವುದು, ಪ್ರಚೋದನಕಾರಿಯಾಗಿವೆ. ಈ ನೆಲದಲ್ಲಿ ಸಾಮಾಜಿಕ ಭಿನ್ನಾಭಿಪ್ರಾಯ ಹುಟ್ಟು ಹಾಕುತ್ತವೆ ಎಂದು ಟಿಟಿಡಿ ಟ್ರಸ್ಟ್ ಸದಸ್ಯರು ಆರೋಪಿಸಿದ್ದಾರೆ. ಇದಕ್ಕೆ ನಟ ಪ್ರಕಾಶ್ ರಾಜ್ ಅವರು ಯಾವ ರೀತಿ ಪ್ರತ್ಯುತ್ತರ ನೀಡುತ್ತಾರೆ ಎಂಬದು ಕುತೂಹಲ ಕೆರಳಿಸಿದೆ.












Click it and Unblock the Notifications