ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಧಾನಿ ಇನ್ನೂ ಮೌನ ವಹಿಸುತ್ತಾರಾ?: ಪ್ರಿಯಾಂಕಾ ಗಾಂಧಿ ವಾಗ್ದಾಳಿ
ನವದೆಹಲಿ, ಏಪ್ರಿಲ್. 29: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಬಗ್ಗೆ ಬಿಜೆಪಿ ಯಾವುದೇ ಮಾತನಾಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನು ಮೌನ ವಹಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರೊಬ್ಬರು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು, "ಪ್ರಜ್ವಲ್ ರೇವಣ್ಣ ಅವರ ಸ್ಲೀಜ್ ವೀಡಿಯೊಗಳು" ಇರುವ ಪೆನ್ ಡ್ರೈವ್‌ನ ಬಗ್ಗೆ ಹೇಳಿದರೂ ಕೂಡ ಬಿಜೆಪಿಯು ಜೆಡಿಎಸ್ ಜೊತೆಗೆ ಏಕೆ ಮೈತ್ರಿಗೆ ಮುಂದಾಯಿತು ಎಂದು ವಿರೋಧ ಪಕ್ಷ ಟೀಕಿಸಿದೆ.

ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ ಎಚ್ ಡಿ ರೇವಣ್ಣ ಮತ್ತು ಮೊಮ್ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಭಾನುವಾರ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಅವರ ಬಳಿ ಕೆಲಸ ಮಾಡಲು ಪ್ರಾರಂಭಿಸಿದ ನಾಲ್ಕು ತಿಂಗಳ ನಂತರ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಪ್ರಜ್ವಲ್ ತನ್ನ ಮಗಳಿಗೆ ವಿಡಿಯೋ ಕರೆ ಮಾಡಿ "ಅಶ್ಲೀಲ ಸಂಭಾಷಣೆ" ನಡೆಸುತ್ತಿದ್ದ ಎಂದು ಅವರ ಅಡುಗೆಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮೋದಿ ಜೀ, ನೀವು ಇನ್ನೂ ಮೌನವಾಗಿರುತ್ತೀರಾ?
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಬರೆದ ಪೋಸ್ಟ್‌ನಲ್ಲಿ, "ಪ್ರಧಾನಿ ಯಾರ ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆದುಕೊಳ್ಳುತ್ತಾರೋ.. 10 ದಿನಗಳ ಹಿಂದೆ ಸ್ವತಃ ಪ್ರಧಾನಿ ಅವರ ಪರ ಪ್ರಚಾರ ಮಾಡಿದರೋ.... ವೇದಿಕೆಯಲ್ಲಿ ಅವರನ್ನು ಹೊಗಳಿದರೋ ಆ ಕರ್ನಾಟಕದ ನಾಯಕ ಇಂದು ದೇಶದಿಂದ ತಲೆಮರೆಸಿಕೊಂಡಿದ್ದಾರೆ" ಎಂದು ಕಿಡಿಕಾರಿದ್ದಾರೆ.

"ಅವರು ಮಾಡಿದ ಘೋರ ಅಪರಾಧಗಳ ಬಗ್ಗೆ ಕೇಳಿದರೆ ಹೃದಯ ಘಾಸಿಯಾಗುತ್ತದೆ. ಅವರು ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ್ದಾರೆ. ಮೋದಿ ಅವರೇ, ನೀವು ಇನ್ನೂ ಮೌನವಾಗಿರುತ್ತೀರಾ?" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ವರ್ಷ ಡಿಸೆಂಬರ್ 8 ರಂದು ಬಿಜೆಪಿ ನಾಯಕ ದೇವರಾಜೇಗೌಡ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಸ್ಲೀಜ್ ವಿಡಿಯೋಗಳು ತುಂಬಿರುವ ಪೆನ್ ಡ್ರೈವ್ ಇರುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
"ಬಿಜೆಪಿ ಇನ್ನೂ ಮೈತ್ರಿಯೊಂದಿಗೆ ಏಕೆ ಮುಂದುವರೆದಿದೆ? ಸರಣಿ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿ ಪೆನ್-ಡ್ರೈವ್‌ನಲ್ಲಿ ಇಟ್ಟಿರುವ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ..? ಪ್ರಜ್ವಲ್ ರೇವಣ್ಣ ಎಂದು ತಿಳಿದಿದ್ದರೂ ಪ್ರಧಾನಿ ಪ್ರಚಾರ ಮಾಡಿ ವಿಶ್ವದ ಅತಿ ದೊಡ್ಡ ಲೈಂಗಿಕ ದೌರ್ಜನ್ಯದ ಕಿಂಗ್‌ಪಿನ್ ಪ್ರಜ್ವಲ್ ರೇವಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಏಕೆ..?" ಎಂದು ಪವನ್ ಖೇರಾ ಪ್ರಶ್ನಿಸಿದ್ದರು.












Click it and Unblock the Notifications