Post Monsoon Rain: ಅಕ್ಟೋಬರ್‌ನಲ್ಲಿ ಹಿಂಗಾರು ಮಳೆ ಆಗಮನ ವಿಳಂಬ, ಆದರೂ ಅಧಿಕ ಮಳೆ ನಿರೀಕ್ಷೆ
ನವದೆಹಲಿ, ಅಕ್ಟೋಬರ್ 01: ಐಎಂಡಿ ಪ್ರಕಾರ ಮುಂಗಾರು ಮಳೆ ಋತುವಿನ ನಾಲ್ಕು ತಿಂಗಳು ಕೊನೆಗೊಂಡಿದ್ದು, ನಿಗದಿತ ಕಾಲಕ್ಕೆ ಆರಂಭವಾಗಬೇಕಿದ್ದ ಈಶಾನ್ಯ ಮಾನ್ಸೂನ್ (Northeast Monsoon) ಮಳೆ ಆಗಮನ ವಿಳಂಬವಾಗಲಿದೆ. ಸದ್ಯ ಹವಾಮಾನ ಬದಲಾವಣೆ ಕಾರಣದಿಂದ ಕೆಲವು ದಿನ ಮುಂಗಾರು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (IMD) ಮಹಾನಿರ್ದೇಶಕ ಡಾ. ಮೃತ್ಯುಂಜಯ ಮೊಹಾಪಾತ್ರ ಮುನ್ಸೂಚನೆ ನೀಡಿದ್ದಾರೆ.
ಅಕ್ಟೋಬರ್ 1ರಿಂದ ಆರಂಬವಾಗಬೇಕಿದ್ದ ಈಶಾನ್ಯ ಮುಂಗಾರು (ಹಿಂಗಾರು ಮಳೆ) ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಮಳೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಕರಾವಳಿ, ರಾಯಲಸೀಮಾ ಭಾಗಕ್ಕೆ ಆಧಾರವಾಗಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಹವಾಮಾನ ಚಟುವಟಿಕೆಗಳಿಂದ ನೈಋತ್ಯ ಮಾನ್ಸೂನ್ (Southwest Monsoon Rain) ಹಿಂತೆಗೆದುಕೊಳ್ಳುವಿಕೆ ನಿಧಾನವಾಗಿದೆ. ಇದು ಕೊನೆಯಾಗುವವರೆಗೂ ಮುಂಗಾರು ಮಳೆ ಮುಂದುವರಿಯಲಿದೆ.

ಈ ಬಾರಿಯ ಹಿಂಗಾರು ಮಳೆ, ಮುಂಗಾರು ಮಳೆಗಿಂತ ಅತ್ಯಧಿಕ ಮಳೆ ತರಲಿದೆ. ಐಎಂಡಿ ಪ್ರಕಾರ, ದೀರ್ಘಾವಧಿ ಸರಾಸರಿಯ 112ರಷ್ಟು ಅಧಿಕ ಮಳೆ ಆಗುವ ನಿರೀಕ್ಷೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ದೇಶದ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ತಾಪಮಾನದಲ್ಲಿ ಭಾರೀ ಇಳಿಕೆ ಆಗಲಿದೆ. ಇದಕ್ಕೆ ವಿರುದ್ಧವಾಗಿ ದೇಶದ ಈಶಾನ್ಯ ಭಾರತ, ಪಶ್ಚಿಮ ಹಿಮಾಲಯ ಹಾಗೂ ಸೌರಾಷ್ಟ್ರ, ಕಚ್ ಪ್ರದೇಶಗಳಲ್ಲಿ ತಾಪಮಾನ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಐಎಂಡಿ ಪ್ರಕಾರ, ಲಾ ನಿನಾ ಮಳೆಯ ಮೇಲೆ ಪರಿಣಾಮ ಹಿಂಗಾರಿನ ಮೇಲೆ ಬೀಳಲಿದೆ. ಪ್ರಸ್ತುತ ಪರಿಸ್ಥಿತಿ ತಟಸ್ಥವಾಗಿದೆ, ಶೀಘ್ರದಲ್ಲೇ ಲಾ ನೀನಾ ರೂಪುಗೊಂಡು ಮತ್ತಷ್ಟು ತೀವ್ರ ಪ್ರಭಾವ ಉಂಟು ಮಾಡಲಿದೆ. ಇದರಿಂದಾಗಿ ಹಿಂಗಾರಿನ ತಿಂಗಳಲ್ಲಿ ಹೆಚ್ಚಿನ ಮಳೆ ಜೊತೆಗೆ ತಂಪು ವಾತಾವರಣ ನಿರ್ಮಿಸಲಿದೆ.
ದೇಶದಲ್ಲಿ 2025ರ ನೈಋತ್ಯ ಮಾನ್ಸೂನ್ (ಮುಂಗಾರು) ಸಮಯದಲ್ಲಿ ದೇಶದಾದ್ಯಂತ ಸಾಮಾನ್ಯಕ್ಕಿಂತ 8ರಷ್ಟು ಅಧಿಕ ಮಳೆ ದಾಖಲಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಳೆಯ ಕೊರತೆ ಕಂಡುಬಂದರೂ, ವಾಯುವ್ಯ ಭಾಗದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.












Click it and Unblock the Notifications