ಸಾರ್ವತ್ರಿಕ ಚುನಾವಣೆ: ದಿನಾಂಕ ಘೋಷಣೆ ಮುನ್ನ ಆಯೋಗದಿಂದ ಗೃಹ ಇಲಾಖೆ ಅಧಿಕಾರಿಗಳ ಭೇಟಿ: ಏಕೆ?
ನವದೆಹಲಿ, ಮಾರ್ಚ್ 08: ಲೋಕಸಭಾ ಚುನಾವಣೆ 2024ಗೆ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದೆ. ಭಾರತೀಯ ಚುನಾವಣೆ ಆಯೋಗವು ಮುಂದಿನ ವಾರದಲ್ಲಿ ಚುನಾವಣಾ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಇದಕ್ಕಿಂತ ಮೊದಲು ಆಯೋಗದ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಹೌದು, ಭಾರತೀಯ ಚುನಾವಣೆ ಆಯೋಗವು ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಮುನ್ನವೇ ಚುನಾವಣಾ ಆಯೋಗದ ಉನ್ನತಾಧಿಕಾರಿಗಳು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಕರೆಸಿ ಪ್ರಜಾಸತ್ತಾತ್ಮಕ ಕಸರತ್ತಿಗೆ ಭದ್ರತಾ ಸಿದ್ಧತೆ ಕುರಿತು ಪರಿಶೀಲಿಸಲಿದ್ದಾರೆ.

ಇಂದು ಅಧಿಕಾರಿಗಳು ಭೇಟಿ ಸಾಧ್ಯತೆ
ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಶುಕ್ರವಾರ ದೇಶದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಸಹ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಚುನಾವಣೆ ನಡೆಯುವ ಎಲ್ಲ ರಾಜ್ಯಗಳಲ್ಲಿ ಕೇಂದ್ರ ಪಡೆಗಳ ನಿಯೋಜನೆ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಚುನಾವಣೆ ಆಯೋಗದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಕೆಲವು ದಿನಗಳ ಮೊದಲು ಭೇಟಿ ನೀಡಿ ಚುನಾವಣೆಯ ವ್ಯವಸ್ಥೆಗಳೆಲ್ಲವನ್ನು ಖುದ್ದು ಪರಿಶೀಲಿಸಲಿದ್ದಾರೆ.

ಸಶಸ್ತ್ರ ಪೊಲೀಸ್ ಪಡೆ ನಿಯೋಜನೆಗೆ ಕೋರಿಕೆ
ಮುಂಬರಲಿರುವ ಸಾರ್ವತ್ರಿಕ ಚುನಾವಣೆ (ಲೋಕಸಭೆ) ಜೊತೆಗೆ ನಾಲ್ಕು ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಅದಕ್ಕಾಗಿ ಚುನಾವಣಾ ಆಯುಕ್ತರು 3.4 ಲಕ್ಷ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CRPF) ಸಿಬ್ಬಂದಿ ನಿಯೋಜನೆ ಸಹಿತ ಭದ್ರತೆ ಒದಗಿಸುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಭಾರತಾದ್ಯಂತ ಸುಮಾರು 97 ಕೋಟಿ ಮತದಾರರನ್ನು ಹೊಂದಿರುವ ಕೇಂದ್ರ ಚುನಾವಣಾ ಆಯುಕ್ತರು ದೇಶಾದ್ಯಂತ ಸರಿಸುಮಾರು 12.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಿದ್ದಾರೆ. ಈ ಸಂಬಂಧ ಮುಂಜಾಗೃತಾ ಕ್ರಮವಾಗಿ ಬೀಗಿ ಬಂದೋಬಸ್ತ್ ಅಗತ್ಯವಿರುತ್ತದೆ.
ಅಲ್ಲದೇ ಚುನಾವಣೆ ದಿನಾಂಕ ಘೋಷಣೆ ಆದ ದಿನದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ. ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರುತ್ತವೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯಲು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಚುಣಾವಣೆ ಅಧಿಕಾರಿಗಳು ಗೃಹ ಇಲಾಖೆಗೆ ಕೋರಿದ್ದಾರೆ.












Click it and Unblock the Notifications