ಅಹಿಂಸೆಯ ಪರಿಕಲ್ಪನೆಯ ಮೇಲೆ ದಾಳಿ ನಡೆಯುತ್ತಿದೆ : ರಾಹುಲ್ ಗಾಂಧಿ
Recommended Video

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 12: "ಅಹಿಂಸೆಯ ಪರಿಕಲ್ಪನೆಯ ಮೇಲೆಯೇ ಇವತ್ತು ದಾಳಿ ನಡೆಯುತ್ತಿದೆ. ಹೀಗಿದ್ದೂ ಅಹಿಂಸೆ ಮಾತ್ರ ಮಾನವೀಯತೆಯನ್ನು ಮುಂದಕ್ಕೆ ಕೊಂಡೊಯ್ಯಬಲ್ಲದು," ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಹಿಂಸೆಗೆ ನಾನು ನನ್ನ ತಂದೆ, ನನ್ನ ಅಜ್ಜಿಯನ್ನು ಕಳೆದುಕೊಂಡೆ. ನನಗೇ ಹಿಂಸೆ ಅರ್ಥವಾಗದಿದ್ದರೆ ಇನ್ಯಾರಿಗೆ ಅರ್ಥವಾಗುತ್ತದೆ? ಎಂದು ವಿಷಾದದ ಪ್ರತಿಕ್ರಿಯೆ ನೀಡಿದ್ದಾರೆ.

ಕೋಮುವಾದಿ ರಾಜಕಾರಣ ಅಪಾಯಕಾರಿ
"1984ರ ಸಿಖ್ ಗಲಭೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ನ್ಯಾಯಕ್ಕಾಗಿ ಹೋರಾಡುವವರ ಜತೆ ನಾನಿದ್ದೇನೆ. ಯಾರ ವಿರುದ್ಧದ ಹಿಂಸಾಚಾರವನ್ನೂ ನಾನು ಸಹಿಸುವುದಿಲ್ಲ. ದ್ವೇಷ, ಕೋಪ ಮತ್ತು ಹಿಂಸೆ ನಮ್ಮನ್ನೇ ಸುಡಬಲ್ಲುದು. ಕೋಮುವಾದಿ ರಾಜಕಾರಣ ಬಲು ಅಪಾಯಕಾರಿ, "ಎಂದು ಅವರು ಎಚ್ಚರಿಸಿದ್ದಾರೆ.

ಭಾರತ ಮಧ್ಯಮಪಂಥದಲ್ಲಿರುತ್ತದೆ
"ಇವತ್ತು ಭಾರತೀಯರೇನಾದರೂ ಒಟ್ಟಾಗಿ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಅಹಿಂಸೆಯೇ ಕಾರಣ. ಭಾರತದಲ್ಲಿದ್ದಂತೆ ಇನ್ಯಾವ ಪ್ರಜಾಪ್ರಭುತ್ವದಲ್ಲಿಯೂ ಇಷ್ಟರ ಮಟ್ಟಿಗೆ ಬಡತನದಿಂದ ಮೇಲೆದ್ದು ಬಂದು ಸಾಧನೆ ಮಾಡಿದವರು ಕಾಣಸಿಗುವುದಿಲ್ಲ. ಒಮ್ಮೆ ಇಂದಿರಾ ಗಾಂಧಿಯವರಿಗೆ ಭಾರತ ಎಡಪಂಥವನ್ನು ಅಪ್ಪಿಕೊಳ್ಳುತ್ತಾ ಬಲಪಂಥವನ್ನೋ ಎಂದು ಪ್ರಶ್ನೆ ಕೇಳಲಾಯಿತು. ಆಗ ಅವರು ಭಾರತ ಮಧ್ಯಮ ಪಂಥದಲ್ಲಿರುತ್ತದೆ ಮತ್ತು ಎತ್ತರವಾಗಿ ಎದ್ದು ನಿಲ್ಲುತ್ತದೆ ಎಂದಿದ್ದರು," ಎಂಬುದಾಗಿ ರಾಹುಲ್ ಗಾಂಧಿ ತಮ್ಮ ಅಜ್ಜಿಯ ಮಾತುಗಳನ್ನು ನೆನಪಿಸಿಕೊಂಡರು.

ಅಪನಗದೀಕರಣ ಭಾರೀ ನಷ್ಟ
ಭಾರತದ ಆರ್ಥಿಕತೆ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, "ಅಪನಗದೀಕರಣದಂಥ ನಿರ್ಧಾರಗಳನ್ನು ಮುಖ್ಯ ಆರ್ಥಿಕ ಸಲಹೆಗಾರರರು, ಸಂಸತ್ ನ ಒಪ್ಪಿಗೆ ತೆಗೆದುಕೊಳ್ಳದೆ ಜಾರಿ ಮಾಡಿರುವುದರಿಂದ ಭಾರೀ ನಷ್ಟ ಉಂಟಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳೇ ಭಾರತೀಯ ಆರ್ಥಿಕ ಅಭಿವೃದ್ಧಿಯ ಬೆನ್ನೆಲೆಬು. ಅಪನಗದೀಕರಣದಿಂದ ಈ ಕ್ಷೇತ್ರಗಳ ಮೇಲೆ ಹಾನಿಯಾಗಿದೆ," ಎಂದು ರಾಹುಲ್ ಗಾಂಧಿ ವಿಶ್ಲೇಷಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಉದ್ಯೋಗ ಸೃಷ್ಟಿ
"ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಉದ್ಯೋಗ ಸೃಷ್ಟಿ ಮಾಡಬೇಕಾಗಿದೆ. ಚೀನಾದಂತಾಗಲು ಭಾರತಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಯಾವತ್ತೂ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಾಗ ಜನರ ಜತೆ ಸಮಾಲೋಚನೆ ಮಾಡಿ ಜಾರಿಗೆ ತರುತ್ತದೆ. ಯಾವತ್ತೂ ಯಾವುದನ್ನೂ ಹೇರಿಕೆ ಮಾಡಿಲ್ಲ," ಎಂದು ರಾಹುಲ್ ಗಾಂಧಿ ಹೇಳಿದರು.

2012ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಂಕಾರ ತಲೆಗೇರಿತ್ತು
2012ರ ಹೊತ್ತಿಗೆ ಕಾಂಗ್ರೆಸ್ ಪಕ್ಷದೊಳಗೆ ಅಹಂಕಾರ ನೆಲೆಯಾಗಿತ್ತು. ನಾವು ಜನರ ಜತೆ ಸಮಾಲೋಚನೆ ಮಾಡುವುದುನ್ನು ನಿಲ್ಲಿಸಿದ್ದೆವು. ಈ ಕಾರಣಕ್ಕೆ ಸೋಲಬೇಕಾಯಿತು ಎಂದ ರಾಹುಲ್ ಗಾಂಧಿ, "ಬಲಪಂಥೀಯ ಸಂವಿಧಾನದ ತಿರುಳೆಂದರೆ ಅವರ ನಾಯಕರೆಲ್ಲಾ ಕೆಲಸ ಸಿಗದವರು," ಎಂದು ಛೇಡಿಸಿದರು.












Click it and Unblock the Notifications