"ಮತ್ತೊಂದು ವಿಧಾನದ ರಾಜಕೀಯ": ಬಿಬಿಸಿ ಸಾಕ್ಷ್ಯಚಿತ್ರ ಟೀಕಿಸಿದ ಎಸ್ ಜೈಶಂಕರ್
ಬಿಬಿಸಿ ಸಾಕ್ಷ್ಯಚಿತ್ರವನ್ನು 'ಮತ್ತೊಂದು ವಿಧಾನದ ರಾಜಕೀಯ' ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕರೆದಿದ್ದಾರೆ.
ನವದೆಹಲಿ ಫೆಬ್ರವರಿ 21: ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಹೇಳಿಕೆ ನೀಡಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರವನ್ನು 'ಮತ್ತೊಂದು ವಿಧಾನದ ರಾಜಕೀಯ' ಎಂದು ಅವರು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿನ ನಿರೂಪಣೆಯನ್ನು ಅವರು ಖಂಡಿಸಿದ್ದಾರೆ.
"ಇದು ಇತರ ವಿಧಾನಗಳಿಂದ ಮಾಡುವ ರಾಜಕೀಯವಾಗಿದೆ" ಎಂದು ಪಿಎಂ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಮತ್ತು ಬಿಲಿಯನೇರ್ ಜಾರ್ಜ್ ಸೊರೊಸ್ ಅವರ ಟೀಕೆಗೆ ಸಂಬಂಧಿಸಿದ ಪ್ರಶ್ನೆಗೆ ಡಾ.ಜೈಶಂಕರ್ ಪ್ರತಿಕ್ರಿಯಿಸಿದರು.

"ನೀವು ಡಾಕ್ಯುಮೆಂಟರಿ ಮಾಡಬೇಕಾ? ದೆಹಲಿಯಲ್ಲಿ 1984 ರಲ್ಲಿ ಅನೇಕ ಘಟನೆಗಳು ನಡೆದಿವೆ. ಆ ಬಗ್ಗೆ ನಾವು ಏಕೆ ಸಾಕ್ಷ್ಯಚಿತ್ರವನ್ನು ನೋಡಲಿಲ್ಲ? ಅಂದರೆ ಇದು ಆಕಸ್ಮಿಕವಾಗಿ ಮಾಡಿದ ಸಾಕ್ಷ್ಯಚಿತ್ರ ಎಂದು ನೀವು ಭಾವಿಸುತ್ತೀರಾ? ನಾನು ಇದನ್ನು ನಂಬುವುದಿಲ್ಲ. ಇದೊಂದು ಬೇರೆ ರೀತಿಯ ರಾಜಕೀಯ'' ಎಂದು ಸಚಿವರು ಹೇಳಿದರು. ಕೆಲವೊಮ್ಮೆ, ಭಾರತದ ರಾಜಕೀಯ ಅದರ ಗಡಿಯಲ್ಲಿ ಹುಟ್ಟಿಕೊಂಡಿಲ್ಲ, ಆದರೆ ಹೊರಗಿನಿಂದ ಬಂದಿದೆ ಎಂದು ಶ್ರೀ ಜೈಶಂಕರ್ ಟೀಕಿಸಿದರು.
ಬಿಬಿಸಿ ಸಾಕ್ಷ್ಯಚಿತ್ರದಲ್ಲಿ 2002 ರ ಗಲಭೆಗಳನ್ನು ತಡೆಯಲು ಪಿಎಂ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಯಾವುದೇ ಕೆಲಸ ಮಾಡಿಲ್ಲ ಎಂಬ ಆರೋಪಗಳಿವೆ. 'ಭಾರತದ ಬಗ್ಗೆ, ಸರ್ಕಾರದ ಬಗ್ಗೆ ನೀವು ಹೇಗೆ ಚಿತ್ರಣವನ್ನು ರೂಪಿಸುತ್ತೀರಿ? ಇದು ಒಂದು ದಶಕದಿಂದ ಮಾಡಿದ ಯೋಜನೆಯಾಗಿದೆ' ಎಂದು ಡಾ ಜೈಶಂಕರ್ ಹೇಳಿದರು. ವಿದೇಶಗಳಲ್ಲಿ ಇಂತಹ ಕಥೆಗಳ ಹಿಂದೆ ಭಾರತ ವಿರೋಧಿ ಅಜೆಂಡಾವನ್ನು ಮುಂದುವರಿಸುವ ಉದ್ದೇಶವಿದೆ ಎಂದು ಅವರು ಹೇಳಿದರು. ಇದು ಜಾಗತೀಕರಣಗೊಂಡ ಜಗತ್ತು, ಆ ಜನರು ಇಲ್ಲಿ ರಾಜಕೀಯ ಮಾಡಲು ಬರುತ್ತಾರೆ. ಅದಕ್ಕೆ ಅವಕಾಶಗಳನ್ನು ನೀಡುವುದು ಬೇಡ ಎಂದರು.

"ನಾವು ಕೇವಲ ಸಾಕ್ಷ್ಯಚಿತ್ರ ಅಥವಾ ಯುರೋಪಿಯನ್ ನಗರದಲ್ಲಿ ಯಾರೋ ಮಾಡಿದ ಭಾಷಣವನ್ನು ಅಥವಾ ಎಲ್ಲೋ ಒಂದು ಪತ್ರಿಕೆಯ ಸಂಪಾದನೆಗಳನ್ನು ಚರ್ಚಿಸುತ್ತಿಲ್ಲ. ನಾವು ಚರ್ಚಿಸುತ್ತಿದ್ದೇವೆ ವಾಸ್ತವವಾಗಿ ರಾಜಕೀಯವನ್ನು. ಈ ರಾಜಕೀಯವನ್ನು ಮಾಧ್ಯಮದಂತೆ ತೋರಿಸಲಾಗುತ್ತಿದೆ. ಇದೊಂದು 'ಇತರ ವಿಧಾನಗಳಿಂದ ರಾಜಕೀಯ ಯುದ್ಧ. ಇದು ಇನ್ನೊಂದು ವಿಧಾನದಿಂದ ಮಾಡಲಾಗುತ್ತಿರುವ ರಾಜಕೀಯ" ಎಂದು ಹೇಳಿದರು. ಜೊತೆಗೆ ಇದರ ಹಿಂದಿರುವವರು ರಾಜಕೀಯ ಕ್ಷೇತ್ರಕ್ಕೆ ಬರಲಿ ಎಂದು ಸವಾಲು ಹಾಕಿದರು.
"ರಾಜಕೀಯ ಕ್ಷೇತ್ರಕ್ಕೆ ಬರಲು ಧೈರ್ಯವಿಲ್ಲದ ಜನರು ಮಾಡುವ ರಾಜಕೀಯ ಇದು. ಅವರು ರಾಜಕೀಯ ಮಾಡುತ್ತಿದ್ದಾರೆ" ಎಂದು ಜೈಶಂಕರ್ ಕಿಡಿ ಕಾರಿದರು.












Click it and Unblock the Notifications