
ಶ್ರದ್ಧಾ ಹಂತಕನನ್ನು ಕೊಲ್ಲಲು ಪೊಲೀಸರ ಮುಂದೆಯೇ ಕತ್ತಿ ಝಳಪಿಸಿದ ಹಿಂದೂ ಕಾರ್ಯಕರ್ತರು
ನವದೆಹಲಿ, ನವೆಂಬರ್ 28: ದೇಶವನ್ನು ಬೆಚ್ಚಿಬೀಳಿಸಿರುವ ಶ್ರದ್ಧಾ ವಾಕರ್ ಪ್ರಕರಣವು ಹಲವು ತಿರುವುಗಳನ್ನು ಪಡೆಯುತ್ತಿದೆ. ಶ್ರದ್ಧಾ ವಾಕರ್ ಹಂತಕ ಅಫ್ತಾಬ್‌ನನ್ನು ಕೊಲ್ಲಲು ರಾಷ್ಟ್ರ ರಾಜಧಾನಿಯಲ್ಲಿ ಯತ್ನಗಳು ನಡೆದಿವೆ. ಶ್ರದ್ಧಾ ಹಂತಕನನ್ನು ಕೊಂಡೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅಫ್ತಾನ್‌ನನ್ನು ಹತ್ಯೆ ಮಾಡುವುದಾಗಿ ಕತ್ತಿಗಳನ್ನು ಕೈಯಲ್ಲಿ ಹಿಡಿದು ವಾಹನದ ಮೇಲೆ ದಾಳಿ ಮಾಡಿದ್ದಾರೆ.
#WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/Bpx4WCvqXs
— ANI (@ANI) November 28, 2022
ದೆಹಲಿಯ ಎಫ್‌ಎಸ್‌ಎಲ್ ಕಚೇರಿಯ ಹೊರಗೆ ಹಿಂದೂ ಸೇನೆಯ ಕಾರ್ಯಕರ್ತರು ಕತ್ತಿ ಝಳಪಿಸಿದ್ದಾರೆ. ಈ ಘಟನೆಯು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಸುದ್ದಿಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ. ವಿಡಿಯೊದಲ್ಲಿ ಕನಿಷ್ಠ ಇಬ್ಬರು ಹಿಂದೂ ಕಾರ್ಯಕರ್ತರು ಕಾಣುತ್ತಿದ್ದಾರೆ.
ಶ್ರದ್ಧಾ ವಾಕರ್ ದೇಹ ತುಂಡರಿಸಲು ಬಳಸಿದ ಆಯುಧಗಳು ಖಾಕಿ ವಶಕ್ಕೆ
ಶ್ರದ್ಧಾ ಹತ್ಯೆ ಆರೋಪಿ ಅಫ್ತಾಬ್ ಪೂನವಾಲಾ ಸಾಗುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರದ್ಧಾ ಹತ್ಯೆಗೆ ಬಳಸಿದ ಆಯುಧಗಳು ವಶಪಡಿಸಿಕೊಂಡ ಪೊಲೀಸರು
ದೇಶದಲ್ಲಿ ತಲ್ಲಣ ಸೃಷ್ಟಿಸಿರುವ ಶ್ರದ್ಧಾ ವಾಕರ್ ದೇಹವನ್ನು 35 ತುಂಡುಗಳಾಗಿ ಆರೋಪಿ ಅಫ್ತಾಬ್ ಕತ್ತರಿಸಿದ್ದನು. ಈ ಅಮಾನುಷ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ದೆಹಲಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಶ್ರದ್ಧಾ ದೇಹದ ತುಂಡುಗಳನ್ನು ಫ್ರಿಡ್ಸ್‌ನಲ್ಲಿ ಇರಿಸಿದ್ದ ಅಫ್ತಾಬ್ ಹಲವು ದಿನಗಳ ನಂತರ ಪೊಲೀಸರಿಗೆ ಸಿಕ್ಕು ಬಿದ್ದಿದ್ದನು. ಶ್ರದ್ಧಾ ಹಾಗೂ ಅಫ್ತಾಬ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಅವರು ಮಹಾರಾಷ್ಟ್ರ ಮೂಲದವರು. ಮನೆಯವರು ಮದುವೆಗೆ ಒಪ್ಪದಿದ್ದ ಹಿನ್ನೆಲೆಯಲ್ಲಿ ದೆಹಲಿಗೆ ಶಿಫ್ಟ್ ಆಗಿದ್ದರು. ಶ್ರದ್ಧಾಳನ್ನು ಕತ್ತು ಹಿಸುಕಿ ಅಫ್ತಾಬ್ ಸಾಯಿಸಿದ್ದನು. ಆ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ತನ್ನ ಮೆಹ್ರೌಲಿ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದನು.

ಡಿ.5ರಂದು ಅಫ್ತಾಬ್‌ಗೆ ನಾರ್ಕೋ ಪರೀಕ್ಷೆ
ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಅಫ್ತಾಬ್ ಪೂನಾವಾಲಾಗೆ ಡಿಸೆಂಬರ್ 5 ರಂದು ನಾರ್ಕೋ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 28 ಮತ್ತು 29 ಮತ್ತು ಡಿಸೆಂಬರ್ 5 ರಂದು ಎಫ್‌ಎಸ್‌ಎಲ್ ನಿರ್ದೇಶಕರ ಮುಂದೆ ಅಫ್ತಾಬ್ ಪೂನಾವಾಲಾ ಅವರನ್ನು ಹಾಜರುಪಡಿಸುವಂತೆ ದೆಹಲಿ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಸೋಮವಾರ ನಾರ್ಕೋ ಪರೀಕ್ಷೆ ನಡೆಸಬೇಕೆಂಬ ನಿಯಮವಿರುವುದರಿಂದ ಡಿಸೆಂಬರ್ 5ರಂದು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಎರಡು ವರ್ಷಗಳ ಹಿಂದೆಯೇ ಸಾವಿನ ಭಯ ಹೊಂದಿದ್ದ ಶ್ರದ್ಧಾ
ಸ್ನೇಹಿತ ಅಫ್ತಾಬ್‌ನಿಂದ ಹತ್ಯೆಯಾಗಿರುವ ಶ್ರದ್ಧಾ ವಾಕರ್, ತನಗೆ ಜೀವಭಯ ಇರುವುದಾಗಿ ಎರಡು ವರ್ಷಗಳ ಹಿಂದೆಯೇ ತಿಳಿಸಿದ್ದರು. 2020 ರಲ್ಲಿ ಪೊಲೀಸರಿಗೆ ಬರೆದ ಪತ್ರದಲ್ಲಿ, ಅಫ್ತಾಬ್ ತನ್ನನ್ನು ಕೊಂದು ದೇಹವನ್ನು ತುಂಡು ಮಾಡಬಹುದು ಎಂಬ ಶ್ರದ್ಧಾ ಮಾಹಿತಿ ನೀಡಿದ್ದರು. ಈ ಅವಧಿಯಲ್ಲಿಯೇ ಆರೋಪಿ ಶ್ರದ್ಧಾಳಿಗೆ ಹಿಂಸೆ ನೀಡುತ್ತಿದ್ದನು. ಆಕೆಯ ದೇಹದ ಮೇಲೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮತ್ತೋರ್ವ ಪ್ರೇಯಸಿಯೊಂದಿಗೆ ಸಂಬಂಧ ಹೊಂದಿದ್ದ ಅಫ್ತಾಬ್
ಶ್ರದ್ಧಾ ಹಂತಕ ಅಫ್ತಾಬ್‌ಗೆ ಹಲವು ಸಂಬಂಧಗಳಿದ್ದವು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪೊಲೀಸರ ವಿಚಾರಣೆ ವೇಳೆ ಅಫ್ತಾಬ್ ಪೂನಾವಾಲಾ ಮತ್ತೋರ್ವ ಪ್ರೇಯಸಿಯನ್ನು ಹೊಂದಿದ್ದನೆಂದು ತಿಳಿದು ಬಂದಿದೆ. ಇನ್ನೊಬ್ಬ ಯುವತಿಯ ಜೊತೆಗಿನ ಈತನ ಸಂಬಂಧವೇ ಶ್ರದ್ಧಾ ಕೊಲೆಗೆ ಕಾರಣವಾಗಿರಬಹುದು ಎಂಬ ನಿಟ್ಟಿನಲ್ಲಿಯೂ ವಿಚಾರಣೆ ನಡೆಯುತ್ತಿದೆ.