ಟೊಮೆಟೊ ಕಳ್ಳತನ ಮಾಡದಂತೆ ಪೊಲೀಸರಿಂದ ಬಿಗಿ ಭದ್ರತೆ!
ದೇಶದಲ್ಲಿ ತರಕಾರಿ ಬೆಲೆ ಗಗನಕ್ಕೆ ಏರಿದೆ. ಅದರಲ್ಲೂ ಟೊಮೆಟೊ ಬೆಲೆ ಕೈಗೆ ಸಿಗದ ರೀತಿ ಹೆಚ್ಚಾಗಿದೆ. ಆದರೆ ಈ ಸಂದರ್ಭದಲ್ಲಿ ಬರೋಬ್ಬರಿ 18 ಟನ್ ಟೊಮೆಟೊ ಇದ್ದ ಲಾರಿ ಅಪಘಾತದಲ್ಲಿ ಪಲ್ಟಿಯಾಗಿದ್ದು, ತಕ್ಷಣ ಪೊಲೀಸರು ಟೊಮೆಟೊಗೆ ಭದ್ರತೆ ಒದಗಿಸಿದ್ದಾರೆ! ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ? ರಸ್ತೆಗೆ ಬಿದ್ದಿದ್ದು ಎಷ್ಟು ಲಕ್ಷ ಬೆಲೆಯ ಟೊಮೆಟೊ? ಬನ್ನಿ ತಿಳಿಯೋಣ.
ಅಂದಹಾಗೆ ಕೋಲಾರ ಮೂಲಕ ಸುಮಾರು 18 ಟನ್ ಟೊಮೆಟೊ ಇದ್ದ ಲಾರಿಯೊಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿತ್ತು. ಆದರೆ ಚಾಲಕನ ಅದೃಷ್ಟವೇ ಸರಿ ಇರಲಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಆಂಧ್ರ ದಾಟಿದ ಈ ಲಾರಿ ತೆಲಂಗಾಣದ ಆದಿಲಾಬಾದ್ ಸಮೀಪವೇ ಅಪಘಾತಕ್ಕೆ ತುತ್ತಾಗಿದೆ. ಹೀಗೆ ಸುಮಾರು 2100 ಕಿಲೋ ಮೀಟರ್ ದೂರ ಹೋಗಬೇಕಿದ್ದ ಲಾರಿ ಕೇವಲ 900 ಕಿಲೋ ಮೀಟರ್ ದೂರ ಸಾಗುತ್ತಿದ್ದಂತೆ ಪಲ್ಟಿಯಾಗಿದೆ. ಆ ಕೂಡಲೇ ಚಾಲಕ ಮತ್ತು ಲಾರಿ ಕ್ಲೀನರ್ ಅಲರ್ಟ್ ಆಗಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಟೊಮೆಟೊಗೆ ರಕ್ಷಣೆ ಕೊಡಿ ಅಂತಾ ಪೊಲೀಸರ ಮೊರೆ ಹೋಗಿದ್ದಾರೆ.

ಟೊಮೆಟೊಗೆ ಪೊಲೀಸರಿಂದ ಭದ್ರತೆ!
ಇನ್ನು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಓಡೋಡಿ ಬಂದ ಸ್ಥಳೀಯ ಪೊಲೀಸರು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಕೂಡಲೇ ಮತ್ತಷ್ಟು ಪೊಲೀಸ್ ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಸಿ, ಟೊಮೆಟೊಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ. ಇನ್ನು ಘಟನೆಯ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದ್ದು, ಟೊಮೆಟೊ ಮೇಲೆ ಎಲ್ಲರೂ ಕಣ್ಣು ಹಾಕುವಂತಾಗಿದೆ. ಆದರೆ ಈ ಲಾರಿ ಚಾಲಕನ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ಕೂಡಲೇ ಅಲ್ಲಿ ಪೊಲೀಸರು ಬಂದು ಭದ್ರತೆ ಒದಗಿಸಿದ್ದಾರೆ. ಅಕಸ್ಮಾತ್ ಪೊಲೀಸರು ಬರುವುದು ಸ್ವಲ್ಪವೇ ಸ್ವಲ್ಪ ತಡವಾಗಿದ್ದರೂ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಟೊಮೆಟೊ ಸುತ್ತಮುತ್ತಲಿನ ಜನರ ಮನೆ ಸೇರುತ್ತಿತ್ತು.
22 ಲಕ್ಷ ರೂಪಾಯಿ ಬೆಲೆಯ ಟೊಮೆಟೊ!
ಅಂದಹಾಗೆ ಈಗ ರಸ್ತೆಯಲ್ಲಿ ಬಿದ್ದಿರುವ ಟೊಮೆಟೊ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 22 ಲಕ್ಷ ರೂಪಾಯಿ! ಹೌದು ಒಂದಲ್ಲ ಎರಡಲ್ಲ ಬರೋಬ್ಬರಿ 22 ಲಕ್ಷ ರೂಪಾಯಿ ಬೆಲೆ ಬಾಳುವ ಟೊಮೆಟೊ ರಸ್ತೆಗೆ ಬಿದ್ದಿದೆ. ಹೀಗಾಗಿ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ. ಒಂದು ದಿನದ ಒಳಗಾಗಿ ಬಿದ್ದ ಟೊಮೆಟೊ ತೆಗೆದುಕೊಂಡು, ಇಲ್ಲ ಬೇರೆ ಲಾರಿ ವ್ಯವಸ್ಥೆ ಮಾಡಿಕೊಂಡು ಹೊರಡಲು ಪ್ಲ್ಯಾನ್ ಆಗಿದೆ. ಸದ್ಯ ದೆಹಲಿಯಲ್ಲಿ ಟೊಮೆಟೊ ಬೆಲೆಯು ಸುಮಾರು 150 ರೂಪಾಯಿ ಆಸುಪಾಸಿನಲ್ಲಿ ಇದೆ. ಹೀಗಾಗಿ ಆದಷ್ಟು ಬೇಗ ದೆಹಲಿಗೆ ಈ ಟೊಮೆಟೊ ತಲುಪಿಸಲು ಚಾಲಕ ಪರದಾಡುತ್ತಿದ್ದಾನೆ.
ಟೊಮೆಟೊ ಮೇಲೆ ಡಿಸ್ಕೌಂಟ್ ರೇಟ್
ಹಾಗೇ ಇನ್ನೊಂದು ಕಡೆ ಟೊಮೆಟೊ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ನೆರವಾಗುವ ಭಾಗವಾಗಿ ಕೇಂದ್ರ ಸರ್ಕಾರ ಇಂದು ದೆಹಲಿ, ಲಕ್ನೋ, ಪಾಟ್ನಾ ಸೇರಿದಂತೆ ದೇಶದ ಪ್ರಮುಖ ನಗರ ಪ್ರದೇಶಗಳಲ್ಲಿ ಕೆಜಿಗೆ ₹90 ರೂಪಾಯಿ ರೀತಿ ಟೊಮೆಟೊ ಮಾರಾಟ ಪ್ರಾರಂಭಿಸಿದೆ. ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಪ್ರತಿ ವ್ಯಕ್ತಿ ತಲಾ 2 ಕೆಜಿ ಸಬ್ಸಿಡಿ ದರದಲ್ಲಿ ಖರೀದಿಸಬಹುದು. ಆಂಧ್ರಪ್ರದೇಶ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬೆಳೆದಿರುವ ಮಂಡಿಗಳಿಂದ ಫ್ರೆಶ್ ಆಗಿ ಸಂಗ್ರಹಿಸಿದ ಟೊಮೆಟೊ ಕೂಡ ರಾಶಿ ರಾಶಿಯಾಗಿ ದೆಹಲಿಗೆ ಬರುತ್ತಿದೆ.
ಶನಿವಾರ ಎನ್‌ಸಿಸಿಎಫ್ 20,000 ಕೆಜಿ ಟೊಮೆಟೊ ಮಾರಾಟ ಮಾಡಲು ಯೋಜಿಸಿದೆ ಮತ್ತು ಮಾರಾಟ ಹೆಚ್ಚಾದಂತೆಯೇ ಈ ಪ್ರಮಾಣವನ್ನೂ 40,000ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಒಟ್ನಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಟೊಮೆಟೊಗೆ ಚಿನ್ನದ ಬೆಲೆ ಬಂದಿದೆ. ಆದರೆ ಈ ಕಾರಣಕ್ಕೆ ಕಳ್ಳರು ಹಾಗೂ ದರೋಡೆ ಮಾಡುವವರ ಕಾಟ ಕೂಡ ಜೋರಾಗಿದೆ. ರೈತರ ಕೈಗೆ ಒಳ್ಳೆಯ ಬೆಲೆ ಸಿಕ್ಕರೂ ಕಾಸು ಮಾತ್ರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಟೊಮೆಟೊ ವಿತರಣೆಗೆ ಮುಂದಾಗಿದೆ.












Click it and Unblock the Notifications