ಎಲ್ಲರನ್ನೂ ರಕ್ಷಣೆ ಮಾಡಲು ಆಗಲ್ಲ: ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ ಹರ್ಯಾಣ ಸಿಎಂ
ಹರ್ಯಾಣ ರಾಜ್ಯದಾದ್ಯಂತ ಕೋಮು ಘರ್ಷಣೆ ಭುಗಿಲೆದ್ದಿದ್ದು ಆರು ಜನ ಸಾವನ್ನಪ್ಪಿದ್ದಾರೆ. ಗಲಭೆ ಸೃಷ್ಠಿಗೆ ಕಾರಣ ಎನ್ನಲಾದ ಮೋನು ಮಾನೇಸರ್ ಬಗ್ಗೆ ರಾಜ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಹರ್ಯಾಣ ರಾಜ್ಯದ ಎಲ್ಲಾ ಜನರಿಗೆ ಪೊಲೀಸರು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ಸಿಎಂ ಖಟ್ಟರ್, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣನಾದ ಮೋನು ಮಾನೇಸರ್ ಬಗ್ಗೆ ತಮಗೆ ಮಾಹಿತಿ ಇಲ್ಲ, ರಾಜಸ್ಥಾನ ಸರ್ಕಾರ ಆತನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಖಟ್ಟರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ಅವನನ್ನು ಪತ್ತೆಹಚ್ಚಲು ಸಹಾಯ ಬೇಕಾದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ನಾನು ರಾಜಸ್ಥಾನ ಸರ್ಕಾರಕ್ಕೆ ಭರವಸೆ ನೀಡಿದ್ದೇನೆ. ಈಗ ರಾಜಸ್ಥಾನ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಅವನ ಇರುವಿಕೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಫೆಬ್ರವರಿಯಿಂದ ರಾಜಸ್ಥಾನದ ಜೋಧ್‌ಪುರದ ಇಬ್ಬರು ವ್ಯಕ್ತಿಗಳ ಕೊಲೆಗೆ ಬೇಕಾಗಿದ್ದ ಮೋನು ಮಾನೇಸರ್ ಪರಾರಿಯಾಗಿದ್ದಾನೆ. ಆದರೆ ಆತ ಆಕ್ಷೇಪಾರ್ಹ ವಿಡಿಯೋವನ್ನು ಪ್ರಸಾರ ಮಾಡಿದ್ದು, ಕೆಲವರನ್ನು ಕೆರಳಿಸಿದ್ದರು ಎನ್ನಲಾಗಿದೆ.
ಧಾರ್ಮಿಕ ಮೆರವಣಿಗೆಯೆಲ್ಲಿ ಭಾಗಿಯಾಗಿದ್ದ ಮಾನೇಸರ್?
ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಮೋನು ಮಾನೇಸರ್ ಕಾಣಿಸಿಕೊಂಡಿದ್ದಾನೆ ಎನ್ನುವ ವದಂತಿಗಳು ಸಂಘರ್ಷಕ್ಕೆ ಕಾರಣವಾಗಿವೆ. ಕೆಲವರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಮಧ್ಯರಾತ್ರಿಯ ನಂತರ ಮಸೀದಿಗೆ ಬೆಂಕಿ ಹಚ್ಚಲಾಯಿತು, ನೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿದೆ.
ಸೋಮವಾರದಂದು ಹಿಂಸಾಚಾರವು ದೆಹಲಿಯ ಪಕ್ಕದಲ್ಲಿರುವ ಗುರುಗ್ರಾಮ್‌ನ ಐಷಾರಾಮಿ ಪ್ರದೇಶಗಳನ್ನು ತಲುಪಿದ್ದು, ಹೈ ಅಲರ್ಟ್ ಘೋಷಿಸಲಾಗಿದ್ದು. ಹೆಚ್ಚಿನ ಜನ ಸೇರುವುದನ್ನು ನಿರ್ಬಂಧಿಸಲಾಗಿತ್ತು, ನಿಷೇಧಾಜ್ಞೆಗಳನ್ನು ವಿಧಿಸಲಾಗಿತ್ತು, ಆದರೂ ಮಂಗಳವಾರ 200 ಜನರ ಗುಂಪೊಂದು ನಿಯಮ ಉಲ್ಲಂಘಿಸಿ ರೆಸಿಡೆನ್ಶಿಯಲ್ ಸೊಸೈಟಿ ಬಳಿಯಿದ್ದ ತಿನಿಸುಗಳು ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚುವ ಘಟನೆಗಳನ್ನು ತಡೆಯಲು ಪೆಟ್ರೋಲ್ ಅಥವಾ ಡೀಸೆಲ್ ಚಿಲ್ಲರೆ ಮಾರಾಟವನ್ನು ನಿಷೇಧಿಸಲಾಗಿದೆ. ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದೆಹಲಿಯಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಘಟನೆಗೆ ಸಂಬಂಧಪಟ್ಟಂತೆ ಈವರೆಗೂ 116 ಜನರನ್ನು ಬಂಧಿಸಲಾಗಿದೆ ಮತ್ತು 190 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಎಂ ಖಟ್ಟರ್ ಹೇಳಿದರು. ಹಿಂಸಾಚಾರಕ್ಕೆ ಕಾರಣವಾದವರನ್ನು ಸುಮ್ಮನೆ ಬಿಡುವುದಿಲ್ಲ, ಗಲಭೆಯಿಂದ ಆಗಿರುವ ನಷ್ಟವನ್ನು ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications