Haryana Results: ಇಂದು ಸಂಜೆ ಬಿಜೆಪಿ ಕಚೇರಿಗೆ ಪ್ರಧಾನಿ ಮೋದಿ ಭೇಟಿ
ನವದೆಹಲಿ, ಅಕ್ಟೋಬರ್ 08: ಬಿಜೆಪಿ ಪಕ್ಷವು ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ವೇಳೆ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. ಇನ್ನೇನು ಸೋತೆ ಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಮೈಕೊಡವಿ ಎದ್ದ ಕೇಸರಿ ಪಡೆ, ಮುನ್ನುಗ್ಗುತ್ತಲೇ ವಿಜಯ ಸಾಧಿಸಿತು. ರಾಜ್ಯದಲ್ಲಿ ಮೂರನೇ ಭಾರಿಗೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಈ ವಿಕ್ಟರಿ ಬೆನ್ನಲ್ಲೆ ದೆಹಲಿ ಬಿಜೆಪಿ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದಾರೆ.
ಹೌದು, ಹರಿಯಾಣದಲ್ಲಿ ಬಿಜೆಪಿ ಪಕ್ಷ ಹ್ಯಾಟ್ರಿಕ್ ಸಾಧಿಸಿದೆ. 2014 ಮತ್ತು 2019ರಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕೇಸರಿ ಪಡೆ ಹಲವು ಸವಾಲುಗಳ ಮಧ್ಯೆ ಮತ್ತೆ ಮೂರನೇ ಭಾರಿಗೆ ಅಧಿಕಾರಕ್ಕೆ ಬಂದಿದೆ. ಈ ಸಂಬಂಧ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು, ಅಭಿನಂದನೆ ತಿಳಿಸುವುದು ಸೇರಿದಂತೆ ಒಂದಷ್ಟು ವಿಷಯಗಳನ್ನು ಮತ್ತು ಖುಷಿಯನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿಯವರು ಬಿಜೆಪಿ ಕಚೇರಿಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದು, ಕಣಿವೆ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರ ಕುರಿತು ಪ್ರಧಾನಿ ಮೋದಿ ಮಾತನಾಡಬಹುದು ಎನ್ನಲಾಗಿದೆ.
ಬಿಜೆಪಿ ಸಂಸದ ಮೇಲಿನ ಆರೋಪ, ರೈತರ ಪ್ರತಿಭಟನೆ, ಬಿಜೆಪಿ ವಿರುದ್ಧ ಕೇಳಿ ಬಂದ ಅನ್ಯಾಯ ಆರೋಪಗಳು, ನಿರುದ್ಯೋಗ ಹೀಗೆ ಈ ಎಲ್ಲ ಸಮಸ್ಯೆಗಳ ಮಧ್ಯೆ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಖುಷಿಯನ್ನು ಪ್ರಧಾನಿ ಮೋದಿಯವರು ಹಂಚಿಕೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಒಂದಷ್ಟು ಕೇಂದ್ರ ಸಚಿವರು ಹಾಗೂ ಸ್ಥಳೀಯ ನಾಯಕರು ಕಚೇರಿಗೆ ಆಗಮಿಸಲಿದ್ದಾರೆ. ಕೇವಲ ಹರಿಯಾಣದಾದ್ಯಂತ ಮಾತ್ರವಲ್ಲದೇ ದೆಹಲಿಯಲ್ಲೂ ಬಿಜೆಪಿ ಸಂಭ್ರಮಾಚರಣೆ ಮುಗಿಲು ಮುಟ್ಟಲಿದೆ.
ಬಂಡಾಯ ಬಿಸಿ ಮಧ್ಯೆ ಗೆದ್ದ ಬಿಜೆಪಿ
ಹರಿಯಾಣದಲ್ಲಿನ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಇಂದು ಅಕ್ಟೋಬರ್ 8ಕ್ಕೆ ಮತ ಎಣಿಕೆ ನಡೆಯುತ್ತಿದೆ. ಕೇಂದ್ರ ಚುನಾವಣೆ ಆಯೋಗದಿಂದ ಅಂತಿಮ ಮತ್ತು ಅಧಿಕೃತ ಮಾಹಿತಿ ಇಂದು ಸಂಜೆ ಹೊರ ಬೀಳಲಿದೆ.
ಚುನಾವಣೆ ಬಳಿಕ ಎಕ್ಸಿಟ್ ಪೋಲ್ ಸಮೀಕ್ಷೆ ಕಂಡು ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ಇಂದಿನ ಮತ ಎಣಿಕೆ ವೇಳೆ ಕಾಂಗ್ರೆಸ್ ಲೆಕ್ಕಾಚಾರ ತಳೆ ಕೆಳಗಾಗಿದೆ. ಬಂಡಾಯ ಬಿಸಿ ಎದುರಿಸಿದರೂ ಸಹಿತ ಬಿಜೆಪಿ ಕೊನೆಗೂ ಮೂರನೇ ಭಾರಿಗೆ ಹರಿಯಾಣದಲ್ಲಿ ಅದಿಕಾರ ಗದ್ದುಗೆ ಏರಿದೆ.












Click it and Unblock the Notifications