ಮಧ್ಯಮ ವರ್ಗ ನೆನೆದ ಪ್ರಧಾನಿ ಮೋದಿ: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಪ್ರಧಾನಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಸತತ 11ನೇ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಧ್ಯಮ ವರ್ಗದ ಸೇವೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ದೇಶದ ಅಭಿವೃದ್ಧಿಗೆ ಮಧ್ಯಮ ವರ್ಗದ ಅಗತ್ಯತೆ ಎಷ್ಟಿದೆ & ಯುವ ಜನರು ನಮ್ಮ ದೇಶದ ಭವಿಷ್ಯವನ್ನು ಹೇಗೆ ರೂಪಿಸಬಹುದು? ಎಂಬ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡಿದ್ದಾರೆ.
ಅಂದಹಾಗೆ ಇಂದು 'ವಿಕಸಿತ ಭಾರತ @2047' ಥೀಮ್ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೆಹಲಿಯ ಐತಿಹಾಸಿಕ ಕೆಂಪುಕೋಟೆ ಎದುರು ನಡೆದ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು. ತಮ್ಮ ಭಾಷಣದಲ್ಲಿ ಭವಿಷ್ಯದ ಭಾರತ & ಅಭಿವೃದ್ಧಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡಿದರು. ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ಪ್ರಧಾನಿ ಮೋದಿ ಅವರು ಈ ಸಮಯದಲ್ಲಿ ನೆನೆದರು.

2047ರ ವೇಳೆಗೆ ಭಾರತದ ಅಭಿವೃದ್ಧಿ!
ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ, ಪಿಎಂ ಮೋದಿ ಅವರು ಸಾರಥ್ಯವನ್ನ ವಹಿಸಿದ್ದಾರೆ. ಹೀಗೆ ತಮಗೆ ಸತತವಾಗಿ 3ನೇ ಬಾರಿಗೆ ಅಧಿಕಾರ ನೀಡಿರುವ ಭಾರತದ ಮತದಾರರ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಅಲ್ಲದೆ ಭಾರತದಿಂದ ವಸಾಹತುಶಾಹಿ ಆಡಳಿತ ಕಿತ್ತೊಗೆದ ಜನರ ಬಗ್ಗೆ ಹೆಮ್ಮೆ ಇದೆ ಎಂಬುದಾಗಿ ಅವರು ಹೇಳಿದರು. ನಮ್ಮ ದೃಢ ನಿರ್ಧಾರದಿಂದ 2047ರ ವೇಳೆಗೆ ಭಾರತವನ್ನ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಾಣ ಮಾಡಲು ನಾವು ಸಮರ್ಥರು ಎಂದು ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದರು.
ಭಾರತದ ಅಭಿವೃದ್ಧಿಗೆ ಮಹತ್ವದ ಯೋಜನೆ
ಹಾಗೇ ತಮ್ಮ ಸರ್ಕಾರದ ಭವಿಷ್ಯದ ಯೋಜನೆಗಳ ಬಗ್ಗೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಮಯದಲ್ಲಿ ಮಾತನಾಡಿದರು. ವಿಕಸಿತ ಭಾರತ 2047 ಬರೀ ಪದಗಳಲ್ಲ, ಅವು ದೃಢ ಸಂಕಲ್ಪದ ಪ್ರತಿಫಲವಾಗಿದೆ ಎಂದರು. 140 ಕೋಟಿ ಭಾರತೀಯರ ಕನಸು ಇದಾಗಿದ್ದು, 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸಲು ಜನರು ಅನೇಕ ಸಲಹೆ ನೀಡಿದ್ದಾರೆ ಎಂದರು ಪ್ರಧಾನಿ ಮೋದಿ. ಪ್ರಮುಖವಾಗಿ, ಭಾರತವನ್ನು ಉತ್ಪಾದನಾ ಹಬ್ ಮಾಡಲು ಸಲಹೆಗಳು ಬಂದಿವೆ. ಜೊತೆಗೆ ಆಡಳಿತ ಸುಧಾರಣೆ, ತ್ವರಿತ ನ್ಯಾಯದಾನ ವ್ಯವಸ್ಥೆ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಉತ್ತೇಜನ ನೀಡುವಂತೆ ಕೂಡ ಸಲಹೆ ಬಂದಿವೆಯಂತೆ.












Click it and Unblock the Notifications