ವಂಶಪಾರಂಪರ್ಯ ಭ್ರಷ್ಟಾಚಾರ ದೇಶದ ದೊಡ್ಡ ಸವಾಲು: ನರೇಂದ್ರ ಮೋದಿ
ನವದೆಹಲಿ, ಅಕ್ಟೋಬರ್ 27: ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಭ್ರಷ್ಟಾಚಾರ ಅತಿ ದೊಡ್ಡ ಶತ್ರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.
ವಿಚಕ್ಷಣೆ ಮತ್ತು ಭಯೋತ್ಪಾದನಾ ನಿಗ್ರಹದ ಕುರಿತಾದ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತನಾಡಿದರು.
'ಅಭಿವೃದ್ಧಿಯನ್ನು ಪರಿಣಾಮಕಾರಿಯನ್ನಾಗಿಸಲು ನಮ್ಮ ಆಡಳಿತ ಪ್ರಕ್ರಿಯೆಯು ಪಾರದರ್ಶಕ, ಜವಾಬ್ದಾರಿಯುತ ಹೊಣೆಗಾರ ಮತ್ತು ಸಾರ್ವಜನಿಕರಿಗೆ ಉತ್ತರದಾಯಿ ಆಗಿರುವುದು ಅತಿ ಅಗತ್ಯವಾಗಿದೆ. ಭ್ರಷ್ಟಾಚಾರವು ಈ ಎಲ್ಲ ಪ್ರಕ್ರಿಯೆಗೆ ಅತ್ಯಂತ ದೊಡ್ಡ ವೈರಿಯಾಗಿದೆ. ಭ್ರಷ್ಟಾಚಾರವು ಅಭಿವೃದ್ಧಿಗೆ ಗಾಸಿ ಮಾಡುತ್ತದೆ ಮತ್ತು ಸಾಮಾಜಿಕ ಸಮತೋಲವನ್ನು ಕೆಡಿಸುತ್ತದೆ' ಎಂದರು.

'ವಂಶಪಾರಂಪರ್ಯ ಭ್ರಷ್ಟಾಚಾರ' ದೇಶಕ್ಕೆ ಬಹುದೊಡ್ಡ ಸವಾಲಾಗಿದೆ. ಇದು ಅನೇಕ ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯದ ಭಾಗವಾಗಿಬಿಟ್ಟಿದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಭ್ರಷ್ಟಾಚಾರ ವರ್ಗಾವಣೆ ದೇಶವನ್ನು ಹುಳದಂತೆ ತಿಂದುಹಾಕಿದೆ ಎಂದು ಹೇಳಿದರು.
ದೇಶವು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಗೆ ಸಿದ್ಧತೆ ನಡೆಸಿದೆ. ಅವರು ಭಾರತೀಯ ಆಡಳಿತದ ಶಿಲ್ಪಿ ಎಂದು ಬಣ್ಣಿಸಿದರು.












Click it and Unblock the Notifications