Jharkhand Election: ನ.10ರಂದು ಜಾರ್ಖಂಡ್‌ನಲ್ಲಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 13ರಂದು ನಡೆಯಲಿದ್ದು ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಮೊದಲ ಹಂತದ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಾರ್ಖಂಡ್ ರಾಜ್ಯಕ್ಕೆ ಭೇಟಿ ಕೊಡಲಿದ್ದು, ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 10 ರಂದು ನರೇಂದ್ರ ಮೋದಿ ಜಾರ್ಖಂಡ್‌ನಲ್ಲಿ ಸರಣಿ ರೋಡ್ ಶೋ ಹಮ್ಮಿಕೊಂಡಿದ್ದಾರೆ.
ಜಾರ್ಖಂಡ್‌ನ ಬೊಕಾರೊ ಮತ್ತು ಗುಮ್ಲಾದ ಚಾಂದಂಕಿಯರಿಯಲ್ಲಿ ಚುನಾವಣಾ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ಅವರು ಸುಮಾರು ಐದು ಕಿ.ಮೀ. ಮೆಗಾ ರೋಡ್ ಶೋ ನಡೆಸಲಿದ್ದಾರೆ. ಜಾರ್ಖಂಡ್ ರಾಜ್ಯವನ್ನು ಗೆಲ್ಲಲು ಎನ್‌ಡಿಎ ಶತಪ್ರಯತ್ನ ಮಾಡುತ್ತಿದ್ದು ನರೇಂದ್ರ ಮೋದಿ ಭೇಟಿ ಮತದಾರರನ್ನು ಸೆಳೆಯುವ ವಿಶ್ವಾಸದಲ್ಲಿದೆ ರಾಜ್ಯ ಬಿಜೆಪಿ.

ನರೇಂದ್ರ ಮೋದಿಯವರ ರೋಡ್ ಶೋ ರಾಂಚಿಯ ಒಟಿಸಿ ಗ್ರೌಂಡ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ರಾಂಚಿಯ ನ್ಯೂ ಮಾರ್ಕೆಟ್ ಚೌಕ್‌ವರೆಗೆ ಸಾಗಲಿದೆ. ಕೇಂದ್ರ ರಕ್ಷಣಾ ರಾಜ್ಯ ಸಚಿವ ಮತ್ತು ರಾಂಚಿ ಸಂಸದ ಸಂಜಯ್ ಸೇಠ್ ಮತ್ತು ಆರು ಬಾರಿ ರಾಂಚಿ ಶಾಸಕ ಸಿಪಿ ಸಿಂಗ್ ಅವರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ರೋಡ್ ಶೋ ನಡೆಯುವ ಕಾರಣ ಭಾರಿ ಕುತೂಹಲ ಕೆರಳಿಸಿದೆ.
ರ್‍ಯಾಲಿ ವೇಳೆ ಬಿಗಿ ಬಂದೋಬಸ್ತ್
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲು ಮುಂದಾಗಿದ್ದಾರೆ. ಈಗಾಗಲೇ ಭದ್ರತಾ ಕಾರ್ಯಾಚರಣೆ ಶುರುವಾಗಿದ್ದು, ರ್‍ಯಾಲಿ ಸಾಗುವ ಮಾರ್ಗದಲ್ಲಿ ಮಹತ್ವದ ಸ್ಥಳಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ಮ್ಯಾಪಿಂಗ್ ಮಾಡಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡದಂತೆ ಭದ್ರತೆ ಒದಗಿಸಲು ಯೋಜಿಸಲಾಗಿದೆ.
ಚಂದಂಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಚಂದಂಕಿ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.
ಚಂದಂಕಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದ್ದು, ಮಾಜಿ ಸಚಿವ ಉಮಾಕಾಂತ್ ರಜಾಕ್ ಅವರು ಎಜೆಎಸ್‌ಯುನಿಂದ ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ ಪಕ್ಷಾಂತರ ಮಾಡಿದ್ದು, ಇಲ್ಲಿನ ಸ್ಪರ್ಧೆಯನ್ನು ರೋಚಕವಾಗಿಸಿದೆ. ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಸುದರ್ಶನ್ ಭಗತ್ ಸ್ಪರ್ಧಿಸುತ್ತಿರುವ ಗುಮ್ಲಾ ಕೂಡ ನಿರ್ಣಾಯಕ ಕ್ಷೇತ್ರವಾಗಿದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ, ಜೆಎಂಎಂ ಪಕ್ಷವು ಗುಮ್ಲಾ ಮತ್ತು ಇತರ ಹತ್ತಿರದ ಕ್ಷೇತ್ರಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ನಾಳೆ ಅಮಿತ್ ಶಾ ಭೇಟಿ
ಪ್ರಧಾನಿ ನರೇಂದ್ರ ಮೋದಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ 9 ರಂದು ಜಾರ್ಖಂಡ್‌ಗೆ ಭೇಟಿ ನೀಡಲಿದ್ದಾರೆ. ಛತ್ತರ್‌ಪುರ, ಹಜಾರಿಬಾಗ್ ಮತ್ತು ಪೊಟ್ಕಾದಲ್ಲಿ ನಡೆಯಲಿರುವ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಜಾರ್ಖಂಡ್‌ಗೆ ಭೇಟಿ ನೀಡಲಿದ್ದು ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಇಂದು (ಶುಕ್ರವಾರ) ಮತ್ತು ನಾಳೆ ವಿವಿಧ ಕ್ಷೇತ್ರಗಳಲ್ಲಿ ನಡೆಯಲಿರುವ ರ್‍ಯಾಲಿಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.












Click it and Unblock the Notifications