ಬಿಜೆಪಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂದ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಜೋರಾಗಿ ನಕ್ಕ ಮೋದಿ
ನವದೆಹಲಿ, ಫೆಬ್ರವರಿ 03: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭೆ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ ನಲ್ಲಿ ನೀಡಿದ ಹೇಳಿಕೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸಂಸತ್ತೇ ನಗೆಗಡಲಲ್ಲಿ ತೇಲಿದ ಪ್ರಸಂಗವೊಂದು ಶುಕ್ರವಾರ ನಡೆದಿದೆ.
ಹೌದು, ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿಯವರತ್ತ ನೋಡಿ, ನಿಮಗೆ ಬಹುಮತ ಇದೆ. ಈ ಹಿಂದೆ 330-340 ಅವರು ಸ್ಥಾನಗಳನ್ನು ಹೊಂದಿದ್ರಿ. ಈ ಬಾರಿ ಅದು 400 ದಾಟುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮಲ್ಲಿಕಾರ್ಜುನ್ ಖರ್ಗೆ ಅವರ ಈ ಹೇಳಿಕೆ ಕೇಳಿ ಬಿಜೆಪಿ ನಾಯಕರು ಜೋರಾಗಿ ಚಪ್ಪಾಳೆ ತಟ್ಟಿದ್ದು, ಸಂಸತ್ ಭವನ ನಗೆಗಡಲಲ್ಲಿ ಮುಳುಗಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಜೋರಾಗಿ ನಗತೊಡಗಿದರು. ಪ್ರಧಾನಿ ಮೋದಿ ಹಾಗೂ ಸಂಸತ್ ನಲ್ಲಿ ಬಿಜೆಪಿ ಸದಸ್ಯರು ಜೋರಾಗಿ ನಕ್ಕ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ಅಬ್ಕಿ ಬಾರ್, 400 ಪಾರ್" ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ ಹೇಳಿದ್ದರು. ಮಲ್ಲಿಕಾರ್ಜುನ್ ಖರ್ಗೆಯವರ ಈ ಹೇಳಿಕೆ ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಬಿಜೆಪಿ ಕೂಡಾ ತನ್ನ ಅಧಿಕೃತ X (ಟ್ವಿಟ್ಟರ್) ಹ್ಯಾಂಡಲ್ ನಲ್ಲಿ ಈ ವಿಡಿಯೋ ಹಾಕಿ ಕಾಂಗ್ರೆಸ್ ಕಾಲೆಳೆದಿದೆ.
2024ರ ಲೋಕಸಭೆ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಭವಿಷ್ಯ ನುಡಿದಿದ್ದಾರೆ. ಬಿಜೆಪಿ 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅತ್ಯಧಿಕ ಸ್ಥಾನವನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, 2019 ರ 303 ಸ್ಥಾನಗಳ ಸಾಧನೆಯನ್ನು ಮೀರಿಸುತ್ತದೆ. ಜೆಪಿ ನಡ್ಡಾ ನೇತೃತ್ವದ ಪಕ್ಷವು ಈಗಾಗಲೇ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಥೀಮ್ ಸಾಂಗ್‌ನೊಂದಿಗೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದನ್ನು ರಾಜ್ಯಸಭೆಯಲ್ಲಿ ಸ್ವತಃ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಹೆಚ್ಚಾಗಿ ಈ ವಿಡಿಯೋವನ್ನ ಶೇರ್ ಮಾಡಿಕೊಂಡಿದೆ.
ಮುಂಬರುವ ಚುನಾವಣೆಯಲ್ಲಿ ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭವಿಷ್ಯ ನುಡಿದಿದ್ದರು. ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಅವರು ಹೇಳಿದ್ದರು.












Click it and Unblock the Notifications